ಯೋಗ, ಆಯುರ್ವೇದ ದೇಹಾರೋಗ್ಯದ ಜೀವನಾಡಿಗಳು

| Published : Dec 25 2023, 01:30 AM IST

ಸಾರಾಂಶ

ಒತ್ತಡಭರಿತ ಜೀವನದಲ್ಲಿ ಆರೋಗ್ಯವನ್ನು ಕಾಪಾಡಲು ಯೋಗ, ಆಯುರ್ವೇದ ಜೀವನ ಪದ್ಧತಿ ಪಾಲಿಸಿ.

ಮೊಳಕಾಲ್ಮುರು: ಯೋಗ ಮತ್ತು ಆಯುರ್ವೇದವು ಮಾನವನ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಾಡಲು ಸಹಾಯ ಮಾಡುತ್ತದೆ. ಇವೆರೆಡೂ ಮಾನವನ ದೇಹಾರೋಗ್ಯದ ಜೀವನಾಡಿಗಳಾಗಿವೆ. ಯೋಗಭ್ಯಾಸ ಮಾಡುವುದರಿಂದ ಯಾವುದೇ ರೋಗಗಳನ್ನು ಬುಡಸಮೇತ ವಾಸಿಮಾಡಬಹುದಾಗಿದೆ ಎಂದು ಅಶೋಕ ಸಿದ್ದಾಪುರದ ಆಯುಷ್ ಆಡಳಿತ ವೈದ್ಯಾಧಿಕಾರಿ ಡಾ.ಚನ್ನಬಸವರಾಜಪ್ಪ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಪಂಚಾಯ್ತಿ ವತಿಯಿಂದ ಎಸ್ಸಿಪಿ, ಟಿಎಸ್ಪಿ ಯೋಜನೆ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಡಿಯಲ್ಲಿ ಮೊಳಕಾಲ್ಮುರು ತಾಲೂಕಿನ ರಾಯಪುರ ಗ್ರಾಮದಲ್ಲಿ ಏರ್ಪಡಿಸಿದ್ದ, ಉಚಿತ ಯೋಗ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯೋಗ ಸರ್ವರೋಗಗಳಿಗೂ ರಾಮಬಾಣವಿದ್ದಂತೆ ಎಂದರು.

ಹಿರೇಹಳ್ಳಿ ಸರ್ಕಾರಿ ಆಯುಷ್ ಕ್ಷೇಮ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕಲ್ಪನಾ.ಬಿ ಮಾತನಾಡಿ, ನಿತ್ಯ ಯೋಗಭ್ಯಾಸ ಮತ್ತು ಆಯುರ್ವೇದದ ಸಮರ್ಥ ಬಳಕೆಯಿಂದ ಕೊರೋನಾ ರೀತಿಯ ಸಾಂಕ್ರಾಮಿಕ ರೋಗ ಸೇರಿ ಅನೇಕ ರೋಗ-ರುಜಿನಗಳಿಂದ ಮುಕ್ತರಾಗಬಹುದು. ಎಲ್ಲರೂ ತಮ್ಮ ಜೀವನದಲ್ಲಿ ನಿತ್ಯ ಯೋಗಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಯೋಗ ತರಬೇತಿ ನೀಡಿ ಮಾತನಾಡಿದ ಜೆ.ಎನ್.ಕೋಟೆ ಆಯುಷ್ ಕ್ಷೇಮ ಕೇಂದ್ರದ ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಯೋಗ ಮತ್ತು ಆಯುರ್ವೇದದ ಉಪಯೋಗವನ್ನು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ರೀತಿಯಲ್ಲಿ ತಲುಪಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆ ಆಯುಷ್ ಸೇವಾ ಗ್ರಾಮದಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನರು ಹೆಚ್ಚಿನ ರೀತಿಯಲ್ಲಿ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆಯುಷ್ ವಿಭಾಗದ ಯುನಾನಿ ವೈದ್ಯ ಡಾ.ರೆಹಮಾನ್ ನಿರ್ವಹಣೆಯಲ್ಲಿ ರಾಯಪುರ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮದ್ದಾನಪ್ಪ.ಜಿ ರವರು ಔಷಧೀಯ ಸಸ್ಯಕ್ಕೆ ನೀರೆರೆಯುವುದರೊಂದಿಗೆ ಉದ್ಘಾಟಿಸಿದರು. ಮಕ್ಕಳು ತಾವು ತಂದಿದ್ದ ಯೋಗ ಹಾಸುಗಳನ್ನು ಹಾಸಿಕೊಂಡು ಓಂಕಾರದಿಂದ ಪ್ರಾರಂಭಿಸಿ ಸೂಕ್ಷ್ಮ ವ್ಯಾಯಾಮಗಳಾದ ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ತಾಡಾಸನ, ವೃಕ್ಷಾಸನ, ಭ್ರಾಹ್ಮರಿ, ಉದ್ಘೀತ, ಪ್ರಣವ ಪ್ರಣಾಯಾಮ ಸೇರಿದಂತೆ ಶಾಂತಿ ಮಂತ್ರದ ವರೆಗೂ ತರಬೇತುದಾರರು ಹೇಳಿಕೊಟ್ಟಂತೆ ಅಚ್ಚುಕಟ್ಟಾಗಿ ಯೋಗ ಕಲಿಕೆಯಲ್ಲಿ ತೊಡಗಿಸಿಕೊಂಡು ಸಂತೋಷ ಪಟ್ಟರು.

ಸಹ ಶಿಕ್ಷಕರಾದ ಪ್ರವೀಣ್ ಕುಮಾರ್, ರಾಜಯ್ಯ, ಮಂಜುನಾಥ್, ಉಷಾ, ಸುಜಾತ, ರಶ್ಮಿ, ಭಾರತಿ, ಎಸ್ ಡಿ ಎಂಸಿ ಸದಸ್ಯರು ಉಪಸ್ಥಿತರಿದ್ದರು.