ನಾಳೆಯಿಂದ ಜಿಲ್ಲೆಯಲ್ಲಿ ಯೋಗೋತ್ಸವ: ಡಾ.ಚಂದ್ರಕಾಂತ್

| Published : Jun 09 2024, 01:36 AM IST

ಸಾರಾಂಶ

ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ್ಲಿ ಜಿಲ್ಲಾ ಆಯಷ್ ಅಧಿಕಾರಿ ಡಾ.ಚಂದ್ರಕಾಂತ್ ಮಾತನನಾಡಿದರು.

ಚಿತ್ರದುರ್ಗ: ಜೂ.10ರಿಂದ 20ರ ವರೆಗೆ ಜಿಲ್ಲೆಯಲ್ಲಿ ಯೋಗೋತ್ಸವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳು, ನವೋದಯ ಶಾಲೆ, ಪೊಲೀಸ್ ಅಕಾಡೆಮಿ, ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಯೋಗ ಕಾರ್ಯಕ್ರಮ ನಡೆಸಲಾಗುವುದು. ಅದೇ ರೀತಿ ಜೂ.15ರಂದು ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಮತ್ತು ಜೂ.16ರಂದು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಯೋಗೋತ್ಸವ ಕಾರ್ಯಕ್ರಮಕ್ಕೆ ಪ್ರತಿ ಸಂಸ್ಥೆಗೆ ಒಬ್ಬ ಆಯುಷ್ ವೈದ್ಯಾಧಿಕಾರಿ ಹಾಗೂ ಒಬ್ಬ ಸಂಘ ಸಂಸ್ಥೆ ಯೋಗ ತರಬೇತಿದಾರರನ್ನು ನಿಯೋಜನೆ ಮಾಡಲಾಗುವುದು. ಅವರು ಮಕ್ಕಳಿಗೆ ಯೋಗ ತರಬೇತಿ ಹಾಗೂ ಆಯುಷ್ ಪದ್ಧತಿ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು. ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳು, ಅಮೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬಾಪೂಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಬ್ರಹ್ಮಕುಮಾರಿ ಸಮಾಜ, ಪತಾಂಜಲಿ ಯೋಗ ಸಂಸ್ಥೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಎಸ್‌ಪಿವೈಎಸ್ಎಸ್, ಪತಾಂಜಲಿ ಹಾಗೂ ಎಲ್ಲಾ ಯೋಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು.