ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದ ಇರಲು ಯೋಗ ಮುಖ್ಯವಾಗಿದ್ದು, ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ದೈಹಿಕವಾಗಿ ಸದೃಢವಾಗಿರಲು ಸಾಧ್ಯ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಆಯುರ್ವೇದ ಅವಿಭಾಜ್ಯ ಅಂಗವಾಗಿದ್ದು, ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮನಸ್ಸಿನಲ್ಲಿ ಏಕಾಗ್ರತೆ ಮೂಡಿ ಆತಂಕ ದೂರವಾಗುತ್ತದೆ. ಮನಸ್ಸು, ಶರೀರ, ಆತ್ಮ ಒಂದುಗೂಡುವುದೇ ಯೋಗ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಯೋಗ ಎಲ್ಲರನ್ನು ಒಂದುಗೂಡಿಸುತ್ತದೆ. ನಮ್ಮ ದೇಹ, ಮನಸ್ಸು ನಿರ್ವಹಣೆಗೆ ಯಾವುದೇ ಔಷಧಿಗಳಿಲ್ಲದೆ ಪ್ರತಿನಿತ್ಯ ಮಾಡುವ ಕಾರ್ಯಗಳ ತರಹ ಯೋಗವನ್ನು ಕೂಡ ಮನಸ್ಸಿಟ್ಟು ಮಾಡಿದರೆ, ಖಂಡಿತ ಲಾಭ ದೊರೆಯಲಿದೆ. ಸ್ವಯಂ ಪ್ರೇರಿತರಾಗಿ ಎಲ್ಲರೂ ಯೋಗವನ್ನು ದಿನನಿತ್ಯದ ಜೀವನ ಶೈಲಿಯಾಗಿ ಅಳವಡಿಸಿಕೊಳ್ಳಿ, ನಿಮ್ಮ ಸುತ್ತಮುತ್ತಲಿನವರಿಗೂ ಯೋಗದ ಮಹತ್ವ ತಿಳಿಸುವ ಜೊತೆಗೆ ಆಧುನಿಕ ಜೀವನ ಶೈಲಿಯಿಂದ ದೂರವಿದ್ದು, ಉತ್ತಮ ಜೀವನದತ್ತ ಹೆಜ್ಜೆ ಹಾಕಬೇಗಿದೆ. ಈ ಘಳಿಗೆಗೆ ಮಾತ್ರ ಯೋಗ ಸೀಮಿತಿವಾಗಿರದೆ, ದಿನನಿತ್ಯ ಅಳವಡಿಸಿಕೊಳ್ಳಲು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಕ್ಕಮಹಾದೇವಿ ಗಾಣಿಗೇರ ಅವರು ಯೋಗ ಶಾಸ್ತ್ರವು ಆಯುಷ್ ಇಲಾಖೆಯ ಅವಿಭಾಜ್ಯ ಅಂಗವಾಗಿದ್ದು, ಯೋಗ ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಯೋಗವೆಂದರೆ ಶರೀರ, ಮನಸ್ಸು ಹಾಗೂ ಆತ್ಮ ಒಂದುಗೂಡಿಸುವುದಾಗಿದೆ. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಯೋಗ ಶಾಸ್ತ್ರ ಸಹಾಯಕವಾಗಿದೆ. ಜೂನ್-21ನೇ ದಿವಸ ಎಲ್ಲ 365 ದಿವಸಗಳಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ಸುಧೀರ್ಘವಾಗಿ ಸಂಪೂರ್ಣವಾಗಿ ಪಸರಿಸುತ್ತವೆ. ಈ ದಿನದಂದು ಅಂತಾರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಹುನಗುಂದ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ವಂದಿಸಿದರು. ಶಿಕ್ಷಕ ಹುಚ್ಚೇಶ ಲಾಯದಗುಂದಿ ಕಾರ್ಯಕ್ರಮ ನಿರೂಪಿಸಿದರು.ಸಮೂಹಿಕ ಯೋಗಾಭ್ಯಾಸ:
ಭಾರತ ಸೇವಾದಳದ ಜಿಲ್ಲಾ ಸಂಘಟಕ ಮಹೇಶ ಪತ್ತಾರ ಹಾಗೂ ಸಂಗಡಿಗರಿಂದ ಸಾಮಾನ್ಯ ಶಿಷ್ಟಾಚಾರದ ಯೋಗಾಭ್ಯಾಸದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ನೆರದಿದ್ದ ಎಲ್ಲರಿಗೂ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿಸಿದರು. ಸಾಮೂಹಿಕ ಯೋಗಾಭ್ಯಾಸದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಯೋಗ ನಿರತ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿಗಳು ಪತಂಜಲಿ ಯೋಗ ಶಕ್ತಿ ತಂಡದವರಿಂದ ನಡೆದ ಯೋಗ ನೃತ್ಯ ನೋಡುಗರ ಗಮನ ಸೆಳೆಯಿತು.