ಒತ್ತಡದ ಬದುಕಿಗೆ ಯೋಗ ಸಹಕಾರಿ: ಜಿಲ್ಲಾಧಿಕಾರಿ ದಿವಾಕರ್

| Published : Jun 23 2024, 02:00 AM IST

ಸಾರಾಂಶ

ದಕ್ಷಿಣ ಭಾರತಕ್ಕೆ ಒಂದೇ ಒಂದು ಮಾನಸಿಕ ಆರೋಗ್ಯ ಕೇಂದ್ರ ಇತ್ತ, ಬಳಿಕ ರಾಜ್ಯಕ್ಕೆ ಒಂದು ಮಾನಸಿಕ ಕೇಂದ್ರ ಬಂತು.

ಹೊಸಪೇಟೆ; ಒತ್ತಡದ ಜೀವನದಲ್ಲಿ ನಾವು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇವೆ. ಪ್ರತಿ ಮನೆಯಲ್ಲೂ ಅರೆಹುಚ್ಚರು ಇರುವ ಆತಂಕ ಇದ್ದೇ ಇದೆ. ಯೋಗದಿಂದ ಮಾತ್ರ ಮಾನಸಿಕ ಒತ್ತಡ ನಿವಾರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.

ಆಯುಷ್ ಇಲಾಖೆ, ಜಿಲ್ಲಾಡಳಿತ ವಿಜಯನಗರ ಹಾಗೂ ಪತಂಜಲಿ ಯೋಗ ಸಮಿತಿ ಪ್ರಜಾಪತಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸೇರಿದಂತೆ ಸಹಿತ ವಿವಿಧ ಇಲಾಖೆಗಳ ವತಿಯಿಂದ ಶುಕ್ರವಾರ ಎಸ್.ಕೆ.ಎಂ.ಇ.ಪಿ.ಎಲ್ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಜಿಲ್ಲಾ ಮಟ್ಟದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದೆ ದಕ್ಷಿಣ ಭಾರತಕ್ಕೆ ಒಂದೇ ಒಂದು ಮಾನಸಿಕ ಆರೋಗ್ಯ ಕೇಂದ್ರ ಇತ್ತ, ಬಳಿಕ ರಾಜ್ಯಕ್ಕೆ ಒಂದು ಮಾನಸಿಕ ಕೇಂದ್ರ ಬಂತು. ಇಂದು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾನಸಿಕ ಕಾಯಿಲೆಗೆ ಗುಳಿಗೆ ಕೊಡಲಾಗುತ್ತಿದೆ. ಇದು ಮಾನಸಿಕ ಕಾಯಿಲೆ ಹೆಚ್ಚಿದ್ದರ ಸೂಚನೆ ಎಂದರು.

ದೈಹಿಕ ಕಾಯಿಲೆಗಳಿಗಿಂತಲೂ ಮಾನಸಿಕ ಕಾಯಿಲೆ ಬಹಳ ಅಪಾಯಕಾರಿ. ಅದು ಸಮಾಜಕ್ಕೆ ಕೇಡು ಉಂಟು ಮಾಡುವಂತದ್ದು. ಒತ್ತಡದಿಂದ ಬರುವ ನಮ್ಮ ಮಾನಸಿಕ ಕಾಯಿಲೆಯನ್ನು ಯೋಗ, ಪ್ರಾಣಾಯಾಮಗಳಿಂದ ದೂರ ಮಾಡಬಹುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ಒತ್ತಡ ನಿರ್ವಹಿಸಲು ಯೋಗ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆಯುಷ್ ಇಲಾಖೆಯ ಡಾ.ಮುನಿವಾಸುದೇವ ರೆಡ್ಡಿ, ಡಾ.ಗುರು ಬಸವರಾಜ್, ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತದ ವರಿಷ್ಠರು ಹಾಗೂ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಾನಸ ಇತರರು ಪಾಲ್ಗೊಂಡಿದ್ದರು.

ಬಳಿಕ ನಡೆದ ಸಾಮೂಹಿಕ ಯೋಗ ಶಿಬಿರಕ್ಕೆ ಭವರಲಾಲ್ ಆರ್ಯ ಮಾರ್ಗದರ್ಶನ ನೀಡಿದರು. ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಯೋಗ ಸಾಧಕ ಬಾಲಚಂದ್ರ ಶರ್ಮಾ, ಛೇಂಬರ್‌ ಆಫ್‌ ಕಾಮರ್ಸ್ ಅಧ್ಯಕ್ಷ ಅಶ್ವಿನ ಕೊತಂಬರಿ, ಡಾ.ಎಫ್.ಟಿ. ಹಳ್ಳಿಕೇರಿ, ಅನಂತ ಜೋಶಿ, ಶ್ರೀರಾಮ ವಿಠೋಬಣ್ಣ, ಶ್ರೀಧರ, ಅಶೀಕ ಚಿತ್ರಗಾರ, ಯೋಗಸಾಧಕರು, ಆಯುಷ ಇಲಾಖೆಯ ಅಧಿಕಾರಿಗಳು, ಯೋಗಾಸಕತ್ತರು ಪಾಲ್ಗೊಂಡಿದ್ದರು.

ಯೋಗ ಶಿಬಿರದಲ್ಲಿ 600ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಆಕಾಶವಾಣಿ ಕೇಂದ್ರದ ಉದ್ಘೋಷಕಿ ನಾಗರತ್ನ ನಿರ್ವಹಿಸಿದರು.