ಕನ್ನಡಪ್ರಭ ವಾರ್ತೆ ಮೈಸೂರು

ಯೋಗ ತಲೆ ಮತ್ತು ಮೆದುಳಿಗೆ ರಕ್ತದ ಹರಿವಿನೊಂದಿಗೆ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಆರ್ ಐಇ) ಪ್ರಾಂಶುಪಾಲ ಪ್ರೊ. ಪ್ರದ್ಯುಮ್ನ ಕುಮಾರ್ ಸೇಠಿ ತಿಳಿಸಿದರು.

ನಗರದ ಶಾರದ ವಿಲಾಸ ಔಷಧ ಕಾಲೇಜಿನಲ್ಲಿ ನಡೆದ ನೆನಪಿನ ಶಕ್ತಿ ವೃದ್ಧಿಗೆ ಯೋಗ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗಾಭ್ಯಾಸವು ಒತ್ತಡ ಕಡಿಮೆ ಮಾಡಿ, ಏಕಾಗ್ರತೆ ಹೆಚ್ಚಿಸಲು ಉತ್ತಮ ವ್ಯಾಯಾಮವಾಗಿದೆ. ಜೊತೆಗೆ ಮೆದುಳಿಗೆ ಆಮ್ಲಜನಕದ ಪೂರೈಕೆ ವೃದ್ಧಿಸಿ, ಮಾನಸಿಕ ಸ್ಪಷ್ಟತೆ ನೀಡುತ್ತದೆ ಎಂದು ಹೇಳಿದರು.

ಯೋಗವು ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಿ, ರಕ್ತಸಂಚಾರ ಸುಧಾರಿಸಿ, ಒತ್ತಡ ಕಡಿಮೆ ಮಾಡುವುದರೊಂದಿಗೆ ಸ್ಮರಣಶಕ್ತಿಯನ್ನು ಅಭಿವೃದ್ಧಿ ಪಡಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಭಾರತದ ಪ್ರಾಚೀನ ಕೊಡುಗೆಯಾದ ಯೋಗಕ್ಕೆ ಇದೀಗ ಜಾಗತಿಕ ಮನ್ನಣೆ ದೊರೆತಿದೆ. ಎಲ್ಲಾ ಧರ್ಮೀಯರು, ಜಾತಿಯವರು ಇದನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ, ಇದೊಂದು ಯೋಗ ಚಳವಳಿ ಆಗಿದೆ ಎಂದು ಅವರು ತಿಳಿಸಿದರು.

ಪ್ರತಿಯೊಬ್ಬರೂ ಒತ್ತಡ ಜೀವನ ಶೈಲಿಯಲ್ಲಿ ಕಳೆದುಹೋಗಿದ್ದಾರೆ. ಇದು ಬಾಹ್ಯ ಪ್ರಕ್ರಿಯೆಯಲ್ಲ. ಆಂತರಿಕೆಯಿಂದ ಸೃಷ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣದಿಂದ ಹೊರಹೊಮ್ಮುತ್ತಿರುವ ಮಾಹಿತಿ ಪ್ರವಾಹದಲ್ಲಿ ಅಗತ್ಯಕ್ಕಿಂತ ಅನಗತ್ಯ ವಿಷಯವನ್ನೇ ಹೆಚ್ಚು ಕಾಡುತ್ತಿವೆ. ಇದುವೇ ಮಾನಸಿಕ ಸಮತೋಲನವನ್ನು ಕದಡುತ್ತಿದೆ. ಸೂಕ್ತ, ಅಗತ್ಯ ಮಾಹಿತಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿ ಸಿದ್ಧಪಡಿಸಿಕೊಳ್ಳಬೇಕಿದ್ದು, ಇದು ಯೋಗದಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.


ಯೋಗ ಚಟುವಟಿಕೆ ನರಮಂಡಲವನ್ನು ಶಾಂತಗೊಳಿಸಿ, ಏಕಾಗ್ರತೆ ಉದ್ದೀಪನಗೊಳಿಸುತ್ತದೆ. ಮನಸ್ಸಿನ ಸ್ಥಿರತೆ, ಸಮತೋಲನ ಸುಧಾರಣೆ, ಗ್ರಹಿಸುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಅಲ್ಲದೆ, ಮನಸ್ಥಿತಿಯನ್ನು ಶಾಂತಚಿತ್ತ, ಪ್ರಶಾಂತಗೊಳಿಸುವ ಶಕ್ತಿಯೂ ಇದೆ. ಇಂತಹ ಸಂದರ್ಭದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ದಿನೇಶ್, ಪ್ರಾಂಶುಪಾಲ ಡಾ. ಹನುಮಂತಚಾರ್ ಜೋಶಿ ಮೊದಲಾದವರು ಇದ್ದರು.

ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯ: ಡಾ.ಪಿ. ದೀಪಾ

ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾಜಿ ಸಚಿವ ಎಸ್‌.ಎ. ರಾಮದಾಸ್‌ ಅವರು ಮಹಾ ವೃಕ್ಷಾರೋಪಣಾ ಅಭಿಯಾನಕ್ಕೆ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.

ಸಿಎಸ್‌ಆರ್‌ಟಿಐ ನಿರ್ದೇಶಕಿ ಡಾ.ಪಿ. ದೀಪಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯತೆ ಕುರಿತು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪರಿಸರ ಸ್ನೇಹಿ ಕೃಷಿ ಪದ್ಧತಿಯ ಮಹತ್ವವನ್ನು ತಿಳಿಯಬೇಕು. ಇದರಿಂದ ಭೂ ಮಾಲಿನ್ಯವನ್ನು ತಡೆಯಬಹುದು ಎಂದರು.ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು. ನಾವು ಇಂದು ಗಿಡ ನೆಡುವುದರ ಜೊತೆಗೆ ಸಸಿ ನೆಡಲು ಮತ್ತೊಂದು ಜಾಗ ಗುರುತಿಸಿರುವುದಾಗಿ ಹೇಳಿದರು.

ಮಾಜಿ ಸಚಿವ ಎಸ್‌.ಎ. ರಾಮದಾಸ್‌ ಮಾತನಾಡಿ, ನಾವು ಈ ದಿನ ಗಿಡ ನೆಡುವುದಕ್ಕೆ ಸಿಮೀತವಾಗಬಾರದು ಅದನ್ನು ಮುಂದೆ ಪೋಷಿಸಿ ಬೆಳೆಸಬೇಕು. ಪ್ರತಿಯೊಬ್ಬರು ಒಂದೊಂದು ಗಿಡವನ್ನು ದತ್ತು ತೆಗೆದುಕೊಳ್ಳಬೇಕು. ಗಿಡಗಳಿಗೆ ಭಾಷೆ ಇದೆ, ಮಾತನಾಡುತ್ತವೆ, ಸ್ನೇಹ ಮಾಡುತ್ತೇವೆ ಎಂದು ಭೋಸ್ ಎಂಬ ವಿಜ್ಞಾನಿ ಪ್ರಾರಂಭದಲ್ಲಿ ಹೇಳಿದಾಗ ಯಾರೂ ನಂಬಲಿಲ್ಲ. ಆದರೆ ಇಂದು ಎಲ್ಲಾರು ಅದರ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅವರು ಸ್ಮರಿಸಿದರು.ನಾವು ಭೂಮಿ, ಗಾಳಿ, ನೀರನ್ನು ಶುದ್ಧವಾಗಿ ಇಟ್ಟುಕೊಂಡರೆ ಉತ್ತುಮವಾದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪರಮೇಶ ಮಾತನಾಡಿ, ನಮಗೆ ಗಿಡ ನೆಡುವುದು ಸುಲಭವಾಗಿದೆ. ಆದರೆ ಅದನ್ನು ಮುಂದೆ ಬೆಳೆಸಿಕೊಂಡು ಹೋಗುವುದು ಕಷ್ಟ. ಪ್ರತಿ ದಿನ ನಮ್ಮಗೆ ಮರ ಕತ್ತರಿಸಲು ಅರ್ಜಿಗಳು ಹೆಚ್ಚಾಗಿ ಬರುತ್ತಿರುತ್ತವೆ. ನಾನು ರೇಷ್ಮೆ ಬೇಸಾಯ ಕುಟುಂಬದಿಂದ ಬಂದಿದ್ದೇನೆ ಎಂದು ತಮ್ಮಗೂ ರೇಷ್ಮೆ ಕೃಷಿಗೆ ಇರುವ ಸಂಬಂಧವನ್ನು ವಿವರಿಸಿದರು.ಸರ್ಕಾರದ ನಿರ್ದೇಶದನದ ಪ್ರಕಾರ 11 ಲಕ್ಷ ಗಿಡಗಳನ್ನು ಮೈಸೂರು ವಿಭಾಗದಲ್ಲಿ ನೆಡುವ ಗುರಿಯನ್ನು ನೀಡಿದೆ. ನಾವು ಗಿಡಗಳನ್ನು ಸಂಖ್ಯೆಗಾಗಿ ನೆಡಬಾರದು ಅವುಗಳನ್ನು ನಾವು ಬೆಳೆಸಿದರೆ, ಮುಂದೆ ನಮ್ಮಗೆ ಶುದ್ಧ ಗಾಳಿ, ನೀರು, ಭೂಮಿಯನ್ನು ಪಡೆಯಬಹುದು ಇದು ಮುಂದಿನ ಪಿಳಿಗೆಗೆ ಉಪಯುಕ್ತ ಎಂದು ಅವರು ಸಲಹೆ ನೀಡಿದರು.

ಸಿಎಸ್‌ಆರ್‌ಟಿಐ ನಿರ್ದೇಶಕಿ ಡಾ.ಟಿ. ದೀಪಾ, ಹಿರಿಯ ವಿಜ್ಞಾನಿ ಡಾ.ಎಸ್. ಮಹೀಬಾ ಹೆಲೇನ್, ಡಾ. ಮಧುಸೂಧನ್, ಡಾ. ಸುರೇಶ್ ಅವರು ಸಂಸ್ಥೆಯ ಆವರಣದಲ್ಲಿ ವಿಜ್ಞಾನಿಗಳು ಮತ್ತು ಸಿಬ್ಬಂದಿ ಜೊತೆಗೂಡಿ ವಿವಿಧ ಗಿಡಗಳಾದ ಮಹಾಗನಿ, ಅರಳಿ, ನೇರಳೆ, ಕಹಿಬೇವು, ಅತ್ತಿ, ಹೊನ್ನೆ, ಬೀಟೆ, ಮಾವು, ಹೊಂಗೆ, ಶಿವಾನೆ, ತಪಸಿ, ಹೊಳೆ ಮತ್ತಿ, ಕಾಡುಬಾದಾಮಿ, ಆಲ, ಹೊಳೆ ದಾಸವಾಳ ಮುಂತಾದ ಸಸಿಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಗೆ ಚಾಲನೆ ನೀಡಿದರು.ಸಂಸ್ಥೆ ವತಿಯಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು. ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಡಾ.ಕೆ. ಕುಸುಮಾ, ಡಾ. ಮಂಜಪ್ಪ, ಹಾಗೂ 150ಕ್ಕೂ ಹೆಚ್ಚು ವಿಜ್ಞಾನಿಗಳು, ಅಧಿಕಾರಿಗಳು, ಯೋಜನಾ ಸಹಾಯಕರು, ಕಾರ್ಮಿಕರು ಪಾಲ್ಗೊಂಡಿದ್ದರು.