ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಗ ತಾಳ ಲಯ ಸರಿಯಾಗಿ ಇದ್ದರೆ ಹಾಡು ಕೇಳಲು ಸರಿಯಾಗಿ ಇರುತ್ತದೆ. ಇಲ್ಲದಿದ್ದರೆ ಕರ್ಕಶವಾಗಿರುತ್ತದೆ. ಹಾಗೆಯೇ ನಮ್ಮ ದೇಹ, ಮನಸ್ಸಿಗೆ ರೋಗಗಳು ಬರದಂತೆ ತಡೆಯಲು ಯೋಗ ಮತ್ತು ಆಧ್ಯಾತ್ಮ ಶಿವಯೋಗ ಸಹಕಾರಿಯಾಗಿವೆ ಎಂದು ವೈದ್ಯಶ್ರೀ ಚನ್ನಬಸವಣ್ಣ ಹೇಳಿದರು.ಇಲ್ಲಿನ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶರಣ ಸಂಸ್ಕೃತಿ ಉತ್ಸವ 2024 ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿರುವ 10 ದಿನಗಳ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರದ 5ನೇ ದಿನವಾದ ಭಾನುವಾರ ಮುಂಜಾನೆ ಯೋಗ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು.
ಯೋಗಾಸನ ಮಾಡುವ ಮುನ್ನ ದೇಹವನ್ನು ಶಾಖಗೊಳಿಸಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕೈ ಕಾಲು ಹಿಡಿದುಕೊಳ್ಳುವುದು, ಉಳುಕುವುದು ಇತರ ಸಮಸ್ಯೆ ಉಂಟಾಗುತ್ತವೆ. ಬೆನ್ನು ಹುರಿ ಕ್ರಿಯಾಶೀಲನೆ ಮಾಡುವ ಆಸನ. ಮಕ್ಕಳಂತೆ ಚಂಚಲವಾಗಿರಿ ಚಿಂತೆಗಳನ್ನು ದೂರವಿಡಿ. ಯೋಗ ಮಾಡುವುದರಿಂದ ದೇಹದ ಕಾಂತಿ ಹೆಚ್ಚುವುದು. ಕಾಸ್ಮೆಟಿಕ್, ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆ ಬರುವುದಿಲ್ಲ ಎಂದು ಹೇಳಿದರು.ಮಂಗಾಸನ ಮಾಡುವುದರಿಂದ ಹೃದಯದ ಬಡಿತವು ಸಮತೋಲನ ನಿರ್ವಹಿಸುತ್ತದೆ. ಇದರಿಂದ ಹೃದಯಘಾತ ಸುಳಿಯುವುದಿಲ್ಲ. ವೀರಭದ್ರಾಸನದಿಂದ ದೇಹ ಸದೃಢವಾಗುತ್ತದೆ. ಪ್ರತಿಯೊಬ್ಬರ ಹಸ್ತದಲ್ಲಿ ಕಾಸ್ಮಿಕ್ ಎನರ್ಜಿ ಇರುತ್ತದೆ. ಆ ಶಕ್ತಿಯನ್ನು ಆಹ್ವಾನ ಮುದ್ರೆಯಿಂದ ಆಹ್ವಾನಿಸಿ ಕಾಸ್ಮಿಕ್ ಎನರ್ಜಿಯನ್ನು ಹೆಚ್ಚಿಸಿಕೊಳ್ಳಬಹುದು. ದೇಹದ ಯಾವುದೇ ಭಾಗದಲ್ಲಿ ಹೆಚ್ಚಿನ ನೋವು ಬಂದಾಗ ಎರಡು ಹಸ್ತವನ್ನು ಆ ಜಾಗದಲ್ಲಿ ಸ್ವಲ್ಪ ಹೊತ್ತು ಇರಿಸಿದಾಗ ನೋವು ಉಪಶಮನಗೊಳ್ಳುವುದು. ಅದಕ್ಕೆ ರೇಖಿ ಚಿಕಿತ್ಸೆ ಎಂದು ಕರೆಯುತ್ತಾರೆ ಎಂದು ಹೇಳಿದರು.
ಶಿಶುಪಾಲ ಆಸನದಿಂದ ಹೊಟ್ಟೆ, ಸೊಂಟ ಭಾಗದ ಕ್ರಿಯಾಶೀಲವಾಗುವುದು. ಅದರಿಂದ ಆಹಾರ ಪಚನ ಮತ್ತು ಕಿಡ್ನಿ ಅಂಗಗಳು ಕ್ರಿಯಾಶೀಲವಾಗುತ್ತವೆ. ಯೋಗದ ಜೊತೆಗೆ ಮನೆ ಮದ್ದು ಮುಖ್ಯವಾಗಿ ನಾಭಿ ಚಿಕಿತ್ಸೆ ಅಗತ್ಯ. ನಾಭಿ ಭಾಗಕ್ಕೆ ಮಲಗುವ ಮುನ್ನ ಎಣ್ಣೆ ಲೇಪಿಸಿಕೊಳ್ಳಬೇಕು. ಕೂದಲು ಕಪ್ಪಾಗಿರಲು ಕೊಬ್ಬರಿ ಎಣ್ಣೆ ನಿಂಬೆರಸವನ್ನು ಕೂದಲಿನ ಬುಡಕ್ಕೆ ಲೇಪಿಸಬೇಕು ಎಂದು ತಿಳಿಸಿದರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಯೋಗ ನಮ್ಮ ಪ್ರತಿದಿನದ ಭಾಗವಾಗಲಿ. ಬಹುತೇಕ ಎಲ್ಲ ಕಾಯಿಲೆಗೆ ಯೋಗವೇ ಔಷಧಿ. ಆದರೆ ಜಡತ್ವ, ಸೋಮಾರಿತನಕ್ಕೆ ಇಲ್ಲವೆನಿಸುತ್ತದೆ. ಅದನ್ನ ಹೋಗಲಾಡಿಸುವ ಕ್ರಮವೇ ಈ ಯೋಗ ತರಬೇತಿ ಎಂದು ಹೇಳಿದರು.
ಒಂದು ಸಂಸ್ಥೆಗೆ ಯಾರು ಅನಿವಾರ್ಯವಲ್ಲ. ಅದರಲ್ಲಿ ಸೇರಿಕೊಂಡು ಒಳ್ಳೆಯ ಕೆಲಸ ಮಾಡುತ್ತಾ ಹೋಗಬೇಕು ಎಂದರು. ಭಕ್ತರ, ಸಾರ್ವಜನಿಕರ ಅಪೇಕ್ಷೆ ಮೇರೆಗೆ ಯೋಗ ಶಿಬಿರವನ್ನು ಮುಂಬರುವ ಶರಣ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ನಡೆಯುವ ಶಿವಯೋಗದ ಜೊತೆಗೆ ನೆರವೇರಿಸಲು ಶಿಬಿರಾರ್ಥಿಗಳ ಹಾಗೂ ಭಕ್ತರ ಜೊತೆ ತೀರ್ಮಾನಿಸಿದರು.ಯೋಗಾಸನ ಶಿಬಿರದಲ್ಲಿ ನಗರದ ವಿವಿಧ ಬಡಾವಣೆಗಳ ಯೋಗ ತರಬೇತುದಾರರು, ವಿವಿಧ ಮಠಗಳ ಸ್ವಾಮಿಗಳು, ಸಾರ್ವಜನಿಕರು, ಯೋಗಾಸಕ್ತರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಜಮುರಾ ಕಲಾವಿದರಿಂದ ವಚನ ಗಾಯನ ನಡೆಯಿತು. ಎಸ್ ಜೆಎಂ ಫಾರ್ಮಸಿ ಕಾಲೇಜಿನ ಉಪನ್ಯಾಸಕ ತೇಜಸ್ವಿನಿ ನಿರೂಪಿಸಿದರು. ಪವಿತ್ರಾ ಹೆಗಡೆ ಸ್ವಾಗತ ಕೋರಿದರು.