ಸಾರಾಂಶ
ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಮನಸ್ಸು, ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಯೋಗ ಹೊಂದಿದೆ. ನಿತ್ಯದ ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ ನಮ್ಮದಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ತಾಲೂಕಿನ ಕೊರಡಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಅಧ್ಯಾತ್ಮದಿಂದ ಪ್ರಯೋಜನಗಳು ಲಭಿಸಲಿವೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ದಿನ ನಿತ್ಯ ಯೋಗಾಸನ ರೂಢಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಶಾಲೆಯ ಮಕ್ಕಳು ಭಾಗವಹಿಸಿದ್ದರು.ವಿವಿಧೆಡೆ ಆಚರಣೆ
ಪಟ್ಟಣದ ಬುತ್ತಿ ಬಸವೇಶ್ವರ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಯೋಗಭ್ಯಾಸದ ಕಾರ್ಯಕ್ರಮ ನಡೆಯಿತು. ಹಿರಿಯ ಸಾಧಕ ಸಿದ್ದಪ್ಪ ಕಾತರಕಿ ಉದ್ಘಾಟಿಸಿದರು. ಹಿರಿಯ ನಾಗರಿಕರಾದ ಶರಣಪ್ಪ ಜಿಗೇರಿ ಅವರನ್ನು ಸನ್ಮಾನಿಸಲಾಯಿತು. ಹಾವು ಹಿಡಿಯುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಮೌಲಾಸಾಬ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಭರತೇಶ ಜೋಷಿ ಯೋಗದ ಕುರಿತು ಉಪನ್ಯಾಸ ನೀಡಿದರು.ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕುಷ್ಟಗಿ ಪಟ್ಟಣದ ಪ್ರಥಮ ದರ್ಜೆ ಕಾಲೇಜು, ಜುಮಲಾಪುರದ ಸರ್ಕಾರಿ ಪ್ರೌಢ ಶಾಲೆ, ದೋಟಿಹಾಳದ ಅಂಗನವಾಡಿ ಕೇಂದ್ರ, ಕೇಸೂರು ಸರ್ಕಾರಿ ಶಾಲೆ ಸೇರಿದಂತೆ ತಾಲೂಕಿನ ಅನೇಕ ಕಡೆಗಳಲ್ಲಿ 10ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗವನ್ನು ಮಾಡಿಸಲಾಯಿತು.