ಯೋಗ ಸನಾತನ ಹಿಂದೂ ಧರ್ಮದ ಶ್ರೇಷ್ಠ ಕೊಡುಗೆ: ಪುತ್ತಿಗೆ ಶ್ರೀ

| Published : Jun 22 2024, 12:53 AM IST

ಯೋಗ ಸನಾತನ ಹಿಂದೂ ಧರ್ಮದ ಶ್ರೇಷ್ಠ ಕೊಡುಗೆ: ಪುತ್ತಿಗೆ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠ ಮತ್ತು ಹರಿದ್ವಾರದ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಕೃಷ್ಣಮಠದ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯೋಗ ಬೇರೆ ಹಿಂದು ಧರ್ಮ ಬೇರೆ ಎಂದು ಕೆಲವರು ಪ್ರತ್ಯೇಕವಾದ ಮಾಡುತ್ತಿದ್ದಾರೆ, ಆದರೆ ಯೋಗ ಸನಾತನ ಹಿಂದೂ ಧರ್ಮದ ಶ್ರೇಷ್ಟ ಕೊಡುಗೆಯಾಗಿದೆ ಎಂದು ಕೃಷ್ಣಮಠದ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ಅವರು ಶುಕ್ರವಾರ ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠ ಮತ್ತು ಹರಿದ್ವಾರದ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಕೆಲವರಿಗೆ ಯೋಗ ಹಿಂದು ಧರ್ಮದ ಕೊಡುಗೆ ಎನ್ನುವುದು ಇಷ್ಟವಾಗುತ್ತಿಲ್ಲ, ಅದಕ್ಕೆ ಅವೆರಡೂ ಪ್ರತ್ಯೇಕ ಎನ್ನುತ್ತಿದ್ದಾರೆ. ಆದರೆ ಅದು ಸರಿಯಲ್ಲ ಎಂದ ಶ್ರೀಗಳು, ಕಳೆದ ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಯೋಗಕ್ಕೆ ವಿಶ್ವಮಾನ್ಯತೆ ಸಿಕ್ಕಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಬಹಳ ದೊಡ್ಡ ಸಾಧನೆ ಎಂದವರು ಶ್ಲಾಘಿಸಿದರು.

ಇವತ್ತು ಸಮಾದದಲ್ಲಿ ಸಮತ್ವ ಅಥವಾ ಸಮಾನತೆಯ ಬಗ್ಗೆ ಗೊಂದಲ ಇದೆ. ಆದರೆ ಯೋಗೇಶ್ವರನಾದ ಕೃಷ್ಣ ಗೀತೆಯಲ್ಲಿ ಸಮಾನತೆಗೆ ಅರ್ಥಪೂರ್ಣ ಪ್ರಾಯೋಗಿತ ಸೂತ್ರವನ್ನು ನೀಡಿದ್ದಾನೆ. ಸಮಾನತೆ ಪ್ರಮಾಣ ಆಧಾರಿತವಲ್ಲ, ಅದು ಸಾಮರ್ಥ್ಯ ಆಧಾರಿತವಾದುದು. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ತಂತಮ್ಮ ಸ್ಥಾನದಲ್ಲಿದ್ದುಕೊಂಡು ನಡೆಸುವುದೇ ಸಮಾನತೆ ಎಂದವರು ವಿಶ್ಲೇಷಿಸಿದರು.

ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ದಿವಾಣರಾದ ನಾಗರಾಜ ಆಚಾರ್ಯರು ವೇದಿಕೆಯಲ್ಲಿದ್ದರು. ನಂತರ ಯೋಗಸಮಿತಿಯ ಸಾಧಕರಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಪುತ್ತಿಗೆ ಶ್ರೀಗಳ‍ು ಕಾರ್ಯಕ್ರಮಕ್ಕೆ ಮೊದಲು ವೇದಿಕೆಯಲ್ಲಿ ಯೋಗಾಸನಗಳನ್ನು ನಡೆಸಿ, ಪ್ರಾಣಾಯಾಮವನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.