ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಯೋಗಿ ನಾರೇಯಣ ಯತೀಂದ್ರರು ಪವಾಡ ಪುರುಷರು. ಅವರು ರಚಿಸಿದ ಕಾಲಜ್ಞಾನ ಇಂದಿಗೂ ಪ್ರಸ್ತುತ ಎಂದು ಮಧುಗಿರಿ ಉಪ ವಿಭಾಗಾಧಿಕಾರಿ ಶಿವಪ್ಪ ಗೋಟೂರು ತಿಳಿಸಿದರು.ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯೋಗಿ ನಾರೇಯಣರು ಕೇವಲ ಯಾವುದೇ ಜನಾಂಗ, ಧರ್ಮಕ್ಕೆ ಸೀಮಿತವಾಗಿಲ್ಲ, ಇವರ ಹಿತ ನುಡಿಗಳು ಸರ್ವಕಾಲಕ್ಕೂ ಸರ್ವರಿಗೂ ಸನ್ನಿಹಿತ ಎಂದರು.
ತಹಸೀಲ್ದಾರ್ ರೇಷ್ಮಾ ಶೆಟ್ಟಿ ಮಾತನಾಡಿ, ಕೈವಾರವು ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾದ ಪ್ರಖ್ಯಾತ ಸಂತ ನಾರಾಯಣಪ್ಪ ಅವರ ಜನ್ಮಸ್ಥಳವೂ ಆಗಿದೆ. ಅವರು ಕನ್ನಡದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ ಮತ್ತು ಅವರು ಧ್ಯಾನ ಮಾಡುತ್ತಿದ್ದ ಕೈಲಾಸ ಗಿರಿ ಇಂದು ಮಹತ್ವದ ಯಾತ್ರಾ ಸ್ಥಳವಾಗಿದೆ ಎಂದರು.ಕರ್ನಾಟಕದ ರಾಜ್ಯ ಶ್ರೀ ಕೃಷ್ಣದೇವರಾಯ ಬಲಿಜ ಸಂಘದ ಪ್ರಧಾನ ಸಂಚಾಲಕ ಡಾ. ಬಿ. ಗೋವಿಂದಪ್ಪ ಮಾತನಾಡಿ, ತಾತಯ್ಯನವರು ಒಂದು ಸಲ ಬಳೆ ವ್ಯಾಪಾರ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಮಳೆ ಶುರುವಾಯಿತು. ಸಮೀಪದ ಗುಹೆಯೊಳಗೆ ಹೋದ ತಾತಯ್ಯನವರ ಬದುಕಿನಲ್ಲಿ ಮಹತ್ವದ ಘಟ್ಟವದು, ಗುಹೆಯಲ್ಲಿದ್ದ ಪರದೇಶಿ ಸ್ವಾಮಿ ಇವರ ಗುರುವಾಗುತ್ತಾರೆ. ಮುಕ್ತಿ ಮಾರ್ಗ ತೋರಿಸಿ, ಅಷ್ಟಾಕ್ಷರಿ ಮಂತ್ರವನ್ನು ಬೋಧಿಸುತ್ತಾರೆ. ಬೆಣಚು ಕಲ್ಲೊಂದನ್ನು ಕೊಟ್ಟು ಇದನ್ನು ಬಾಯಲ್ಲಿಟ್ಟುಕೊಂಡು ಅಷ್ಟಾಕ್ಷರಿ ಮಂತ್ರವನ್ನು ಜಪಿಸು. ಅದು ಕರಗಿ ಕಲ್ಲು ಸಕ್ಕರೆಯಾದರೆ ಜ್ಞಾನ ಸಿದ್ಧಿಯಾಗಿದೆ ಎಂದರ್ಥ ಎಂದು ಅಪ್ಪಣೆ ನೀಡುತ್ತಾರೆ. ದೈವ ಸಾಕ್ಷಾತ್ಕಾರಕ್ಕಾಗಿ ನಾರಾಯಣಪ್ಪ ಅನೇಕ ವರ್ಷ ಕೈವಾರದ ನರಸಿಂಹ ಗುಹೆಯಲ್ಲಿ ತಪಸ್ಸು ಮಾಡುತ್ತಾರೆ. ಬಾಯಲ್ಲಿ ಕಲ್ಲಿಟ್ಟುಕೊಂಡಿದ್ದರಿಂದ ‘ಓಂ ನಮೋ ನಾರಾಯಣಾಯ’ ಎನ್ನುವುದರ ಬದಲು ‘ಓಂ ನಮೋ ನಾರೇಯಣಾಯ’ ಎಂದು ಉಚ್ಚಾರವಾಗುತ್ತದೆ. ಒಂದು ದಿನ ಬಾಯಲ್ಲಿದ್ದ ಕಲ್ಲು ಕರಗಿ, ಕಲ್ಲು ಸಕ್ಕರೆಯಾಯಿತು. ಆ ಮೂಲಕ ಯೋಗಿ ನಾರೇಯಣ ಯತಿಯಾಗಿ ಬದಲಾದರು ಎಂದು ಕೈವಾರ ತಾತಯ್ಯನವರ ಚರಿತೆ ತಿಳಿಸಿದರು.
ನಗರಸಭೆ ಪೌರಾಯುಕ್ತ ರುದ್ರೇಶ್, ಬಲಿಜ ಸಂಘದ ತಾಲೂಕು ಅಧ್ಯಕ್ಷ ಶ್ರೀರಂಗಪ್ಪ, ಮಹಿಳಾ ಅಧ್ಯಕ್ಷೆ ಉಮಾದೇವಿ, ನಾಗರತ್ನಮ್ಮ, ಬಿಜೆಪಿ ನಗರಾಧ್ಯಕ್ಷ ಗಿರಿಧರ್, ನಗರಸಭೆ ಮಾಜಿ ಸದಸ್ಯ ಎಂ.ಎನ್ ರಾಜು, ಎಸ್. ಎನ್. ಜೈಪಾಲ್, ವಿನೋದ್ ಕುಮಾರ್, ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ರಘು, ಕುಮುದ, ಲಕ್ಷ್ಮೀಕಾಂತ್, ಜೈ ದೇವ್, ಕಾರ್ಮಿಕ ಇಲಾಖೆ ಅಧಿಕಾರಿ ಅಬ್ದುಲ್ ರಫೀಕ್, ದಯಾನಂದ, ಉಮೇಶ, ಶ್ರೀನಿವಾಸ್, ಶಿವಕುಮಾರ್, ಚನ್ನನ ಕುಂಟೆ ನಟರಾಜ್, ಶ್ಯಾಮ್, ಯಶೋಧ, ಲಕ್ಷ್ಮೀ, ಸುನಿತಾ ಹೇಮಕ್ಕ, ವೈಶಾಲಿ ಉಮಾದೇವಿ, ಮೀನಾ, ಶಿವಮ್ಮ, ಮಂಜುಳಾ, ಸುಜಾತ ಸೇರಿ ಹಲವರು ಹಾಜರಿದ್ದರು.