ಸಾರಾಂಶ
ಕುಮಟಾ : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಂಬಿದರೆ ಬದುಕಿಲ್ಲ. ಜನರಿಗೆ ತಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳು ಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪಟ್ಟಣದ ಪುರಭವನದಲ್ಲಿ ಭಾನುವಾರ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರದ ತಪ್ಪುಗಳನ್ನು ಮುಂದಿಟ್ಟುಕೊಂಡು ತಾಪಂ, ಜಿಪಂ ಚುನಾವಣೆಗಳಿಗಾಗಿ ಸಂಘಟನೆ ಮಾಡಿದರೆ ಅದು ಮುಂದಿನ ವಿಧಾನಸಭೆ ಚುನಾವಣೆಗೆ ಶಕ್ತಿಯಾಗಲಿದೆ. ಉತ್ತರ ಕನ್ನಡ ಜಿಲ್ಲೆಗೆ ಆಗಾಗ ಬರುತ್ತೇನೆ. ಎಲ್ಲರೂ ಕೆಲಸ ಮಾಡುವ ಮೂಲಕ ನೂರಕ್ಕೆ ನೂರರಷ್ಟು ಗೆಲುವಿಗೆ ಕೈಜೋಡಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿರುವ ಈ ಭಾಗದಲ್ಲಿ ಒಂದೇ ಒಂದು ಕೋಲ್ಡ್ ಸ್ಟೋರೇಜ್ ಇಲ್ಲ. ರಾಜ್ಯ ಸರ್ಕಾರ ಜನರ ಇಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಕಳೆದ ಬಾರಿ ಸೂರಜ ನಾಯ್ಕರ ಸೋಲನ್ನು ಸೋಲೆಂದು ಭಾವಿಸಬಾರದು. ಕ್ಷೇತ್ರದಲ್ಲಿ ಜನತಾದಳ ಗಟ್ಟಿಯಾಗಿದ್ದು, ಗೆಲ್ಲುವ ಶಕ್ತಿಯಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಇಚ್ಛೆಯೂ ಇದೇ ಆಗಿದೆ. ಇದಕ್ಕಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಎಂದರು.
ಈಗ ಆರಂಭಗೊಂಡಿರುವ ಸದಸ್ಯತ್ವ ಅಭಿಯಾನದಲ್ಲಿ ಈ ಕ್ಷೇತ್ರದ 215 ಬೂತ್‌ಗಳಲ್ಲಿ ಕಾರ್ಯಕರ್ತರ ತಂಡಗಳನ್ನು ರಚಿಸಿಕೊಂಡು, ಮುಂದಿನ 30 ದಿನಗಳಲ್ಲಿ ದಿನಕ್ಕೆ ನಾಲ್ಕೆದು ತಾಸು ದುಡಿದು 20,000 ಸಕ್ರಿಯ ಸದಸ್ಯರನ್ನು ನೋಂದಾಯಿಸಬೇಕು ಎಂದು ಸೂರಜ ನಾಯ್ಕ ಅವರಿಗೆ ಸೂಚಿಸಿದರು.
ಮಾಜಿ ಸಚಿವ ಕಾರವಾರದ ಆನಂದ ಅಸ್ನೋಟಿಕರ್ ಮಾತನಾಡಿ, ಯಾವುದೇ ಸರ್ಕಾರ ಬಂದರೂ ಉತ್ತರ ಕನ್ನಡ ಜಿಲ್ಲೆಯನ್ನು ಒಂದು ಬದಿಗಿಟ್ಟಿದ್ದಾರೆ. ಅಭಿವೃದ್ಧಿಯಲ್ಲಿ ಮಂಗಳೂರನ್ನು ಅಮೆರಿಕಕ್ಕೆ ಹೋಲಿಸಬಹುದಾದರೆ. ನಮ್ಮ ಜಿಲ್ಲೆ ಶ್ರೀಲಂಕಾ ಆಗಿದೆ. ನಮ್ಮ ಜಿಲ್ಲೆ ಶೋಷಣೆಗೊಳಗಾಗಿದೆ ಎಂದರು.ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರಜ ನಾಯ್ಕ ಮಾತನಾಡಿ, ಹಿಂದೆ ಬಿಜೆಪಿ ಕಟ್ಟಿ ಬೆಳೆಸಿದ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿ ಮೂಲೆಗುಂಪು ಮಾಡಿದರು. ತಾಲೂಕಿನಲ್ಲಿ ಒಂದೂ ಜಿಪಂ ಕ್ಷೇತ್ರ ಗೆದ್ದಿರದಿದ್ದ ಬಿಜೆಪಿಯಲ್ಲಿ ನನ್ನ ಪತ್ನಿಯನ್ನು ನಿಲ್ಲಿಸಿ 2 ಬಾರಿ ಗೆಲ್ಲಿಸಿದ್ದೆ. ಜೆಡಿಎಸ್‌ನಲ್ಲಿ 25 ಸಾವಿರದಷ್ಟಿದ್ದ ಮತಗಳಿಕೆ 59 ಸಾವಿರಕ್ಕೆ ಏರಿಸಿದ್ದೇನೆ ಎಂದರು.ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಗುರುರಾಜ ಹುಣಶಿಮರದ, ರಾಜ್ಯ ವಕ್ತಾರೆ ಪೂರ್ಣಿಮಾ, ಅಳಕೋಡ ಹನುಮಂತಪ್ಪ, ವೀರಭದ್ರಪ್ಪ, ಶಿರಸಿಯ ಉಪೇಂದ್ರ ಪೈ, ಗುಲ್ಬರ್ಗದ ರೋಶನ್ ಇದ್ದರು.ಫೋಟೋ.....
ಕುಮಟಾ ಪಟ್ಟಣದ ಪುರಭವನದಲ್ಲಿ ಭಾನುವಾರ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು.