ಯುವ ಸಮುದಾಯ ಪರಿಸರ ಆಸಕ್ತಿ ಬೆಳೆಸಬೇಕು: ರವೀಂದ್ರ ಕೋಟ

| Published : May 25 2024, 12:52 AM IST

ಯುವ ಸಮುದಾಯ ಪರಿಸರ ಆಸಕ್ತಿ ಬೆಳೆಸಬೇಕು: ರವೀಂದ್ರ ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಕೋಟ ಸಮೀಪದ ಪಾಂಡೇಶ್ವರದ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಹಾಗೂ ಸಾಸ್ತಾನ ಮಹಿಳಾ ಮಂಡಲ, ಸ್ನೇಹ ಸಂಜೀವಿನಿ ಒಕ್ಕೂಟಗಳ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಯುವ ವಿದ್ಯಾರ್ಥಿ ಸಮುದಾಯ ಪರಿಸರದ ರಕ್ಷಣೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು, ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.

ಅವರು ಬುಧವಾರ ಪಾಂಡೇಶ್ವರದ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಹಾಗೂ ಸಾಸ್ತಾನ ಮಹಿಳಾ ಮಂಡಲ, ಸ್ನೇಹ ಸಂಜೀವಿನಿ ಒಕ್ಕೂಟಗಳ ಸಹಯೋಗದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪರಿಸರ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಸ್ತುತ ವಿದ್ಯಮಾನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ, ಪರಿಸರದ ರಸ್ತೆಗಳಲ್ಲಿ ತ್ಯಾಜ್ಯದ ಕೊಂಪೆಯಾಗುತ್ತಿರುವುದು, ಹೊಳೆ - ತೊರೆ, ಸಮುದ್ರ ತ್ಯಾಜ್ಯಗಳಿಂದ ಮಲಿನಗೊಳ್ಳುತ್ತಿರುವ ಬಗ್ಗೆ, ವಿಪರೀತ ತಾಪಮಾನದ ಏರಿಕೆ ಇತ್ಯಾದಿಗಳ ಬಗ್ಗೆ ಅವರು ಸವಿವರವಾಗಿ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಡು ಕಡಿದು ಕಾಂಕ್ರೀಟ್ ಕಾಡು ಸೃಷ್ಟಿಸಿ, ಉಷ್ಣತೆ ದಿನದಿಂದ ದಿನಕ್ಕೆ ಏರಿಕೆಗೊಳ್ಳುತ್ತಿರುವುದಕ್ಕೆ ಪರಿಹಾರವಾಗಿ ಮನೆ ಮನೆಯಲ್ಲಿ ,ರಸ್ತೆಯ ಇಕ್ಕೇಲಗಳಲ್ಲಿ ಗಿಡನೆಟ್ಟು ಪೋಷಿಸುವ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಇದೇ ವೇಳೆ ಶಿಬಿರಾರ್ಥಿಗಳಿಗೆ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗಣೇಶ್ ಜಿ. ಚಲ್ಲೆಮಕ್ಕಿ, ಅರಿವು ಗ್ರಂಥಾಲಯದ ಜ್ಯೋತಿ, ಪಾಂಡೇಶ್ವರ ಪಂಚಾಯತ್ ಸದಸ್ಯೆ ಸುಜಾತ ವೆಂಕಟೇಶ್, ಸಂಜೀವಿನಿ ಒಕ್ಕೂಟದ ಉಷಾ ಗಣೇಶ್ ಉಪಸ್ಥಿತರಿದ್ದರು.