ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನದ ಕುರಿತು ಯುವ ಉದ್ಯಮಿಗಳು ಅರಿವು ಹೊಂದಬೇಕಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ: ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನದ ಕುರಿತು ಯುವ ಉದ್ಯಮಿಗಳು ಅರಿವು ಹೊಂದಬೇಕಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಲ್ಲಿನ ಡೆನಿಸನ್ಸ್ ಹೊಟೇಲ್‌ನಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಚಾಪ್ಟರ್‌ನಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ಹಿಂದೂ ಆರ್ಥಿಕ ಮಹಾಸಂಗಮ-2026ರಲ್ಲಿ ಪಾಲ್ಗೊಂಡು ಮಾತನಾಡಿದರು.ವಿಗ್ಯಾನಂದ ಶ್ರೀಗಳ ನೇತೃತ್ವದಲ್ಲಿ ಆರಂಭವಾಗಿರುವ ಹಿಂದೂ ಎಕನಾಮಿಕ್ ಪೋರಂ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯುವ ಮೂಲಕ ವಿಶ್ವವಿಖ್ಯಾತವಾಗಿರುವುದು ಅಭಿನಂದನಾರ್ಹ. ಒಂದು ಸಂಘಟನೆಯನ್ನು ಕಟ್ಟಿ ಅದನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಸಮಾಜ ನಿರ್ಮಾಣಕ್ಕೆ ಜೋಡಿಸಿರುವುದು ಶ್ಲಾಘನೀಯ. ಇದೊಂದು ಅದ್ಭುತವಾಗಿರುವ ಪ್ರಯೋಗವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿಗಳು ಕಾಯಕವೇ ಕೈಲಾಸ ಎಂಬ ಮನೋಭಾವ ಹೊಂದಬೇಕಿದೆ. ಈ ಹಿಂದೆ 16-17ನೇ ಶತಮಾನದಲ್ಲಿ ದುಡ್ಡೇ ದೊಡ್ಡಪ್ಪನ ಸ್ಥಾನದಲ್ಲಿತ್ತು. ಹಣವುಳ್ಳವರೇ ಜಗತ್ತನ್ನು ಆಳುವ ಪರಿಸ್ಥಿತಿಯುತ್ತು. ಆದರೆ, ಇಂದು ಜ್ಞಾನವುಳ್ಳವರೇ ಜಗತ್ತನ್ನು ಆಳುವಂತಾಗಿದೆ. ಒಂದು ಕಾಲದಲ್ಲಿ ಐಟಿ, ಬಿಟಿ ಕ್ಷೇತ್ರಗಳಿಗೆ ಹೆಚ್ಚಿನ ಮನ್ನಣ್ಣೆ ಕೊಡಲಾಗುತ್ತಿತ್ತು. ಆದರೆ, ಇಂದು ಎಐ ಬಂದ ಬಳಿಕ ಎಲ್ಲದಕ್ಕೂ ಎಐ ತಂತ್ರಜ್ಞಾನವೇ ಮುಂದೆ ಎಂಬ ಕಾಲ ಬಂದಿದೆ ಎಂದರು.ಉದ್ಯಮಿಗಳು ಕಡಿಮೆ ಬೆಲೆಯಲ್ಲಿ ಹೆಚ್ಚು ಬಾಳಿಕೆಯುಳ್ಳ, ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಆದ್ಯತೆ ನೀಡಿ. ಇದರಿಂದ ನಮ್ಮ ವಸ್ತುಗಳಿಗೆ ಬೇಡಿಕೆಯೂ ಬರಲಿದ್ದು, ಜತೆಗೆ ಹೆಚ್ಚಿನ ಉತ್ಪಾದನೆಯಾಗಿ ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯು ಲಕ್ಷ್ಮಿಯ ನಗರವಾಗಿದ್ದರೆ, ಧಾರವಾಡ ಸರಸ್ವತಿ ನಗರ. ಸಾಧಿಸುವ ಛಲ ಹೊಂದಿದ್ದರೆ ಇಲ್ಲಿ ಸಾಧಕನಾಗಿ ಬೆಳೆಯಲು ಹಲವಾರು ವೇದಿಕೆಗಳಿವೆ. ಇವೆಲ್ಲವುಗಳ ಸಹಕಾರ ಪಡೆದು ಶ್ರೇಷ್ಠ ಉದ್ಯಮಿಯಾಗಲು ಕರೆ ನೀಡಿದರು.ಭಾರತವು ವಿಕಸಿತ ಭಾರತದತ್ತ ದಾಪುಗಾಲು ಇಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2047ಕ್ಕೆ ವಿಕಸಿತ ಭಾರತವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಅವರು ದೇಶದ ಹಣೆಬರಹವನ್ನೇ ಬದಲಿಸಿ ಸದೃಢ ರಾಷ್ಟ್ರ ಕಟ್ಟುವತ್ತ ಹೆಜ್ಜೆಯಿಡುತ್ತಿದ್ದಾರೆ. ಇದೇ ರೀತಿ ದೇಶವು ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಕ್ಕೂಟದ ಮುಖ್ಯಸ್ಥ ಶ್ರೀಸ್ವಾಮಿ ವಿಗ್ಯಾನಂದ ಸ್ವಾಮೀಜಿ ಮಾತನಾಡಿ, ಹಿಂದೂಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ಈ ರಾಷ್ಟ್ರೀಯ ಮಟ್ಟದ ಹಿಂದೂ ಆರ್ಥಿಕ ಮಹಾಸಂಗಮದ ಮೂಲ ಉದ್ದೇಶವಾಗಿದೆ. ಇದೊಂದು ಜಾಗತಿಕ, ಆರ್ಥಿಕ ವೇದಿಕೆಯಾಗಿದ್ದು, ಹಿಂದು ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್‌ಗಳು, ಹೂಡಿಕೆದಾರರು, ವೃತ್ತಿಪರರು, ಅಕಾಡೆಮಿಷಿಯನ್‌ಗಳು ಹಾಗೂ ಚಿಂತಕರು ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡುವುದೇ ಮೂಲ ಉದ್ದೇಶವಾಗಿದೆ. ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ, ಹು-ಧಾ ಚಾಪ್ಟರ್ ಅಧ್ಯಕ್ಷ ವಿಜೇಶ ಸೈಗಲ್, ಸಂಚಾಲಕ ಅರ್ಜುನ ಮಹಾಜನ್, ಕಾರ್ಯದರ್ಶಿ ಗಿರೀಶ ಮಾನೆ, ಉಪಾಧ್ಯಕ್ಷ ಗೌತಮ ಬಾಫನಾ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಿಂದ ತಜ್ಞರು, ಆರ್ಥಿಕ ಚಿಂತಕರು ಪಾಲ್ಗೊಂಡಿದ್ದರು.