ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
ಆಧುನಿಕ ಜಗತ್ತಿನಲ್ಲಿ ಯುವ ಪೀಳಿಗೆ ಧರ್ಮ ಮತ್ತು ಅಧ್ಯಾತ್ಮದಿಂದ ದೂರ ಸರಿಯುತ್ತಿರುವುದು ವಿಷಾಧನೀಯ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಕನ್ನಡ ಗಡಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಹೇಳಿದರು.ಪಟ್ಟಣದ ನೇಕಾರ ಪೇಠೆಯ ಬನಶಂಕರಿದೇವಿ ಜಾತ್ರಾ ಶತಮಾನೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ಆದ್ಯ ವಚನಕಾರ ದೇವರ ದಾಸಿಮಯ್ಯ ವೇದಿಕೆಯಲ್ಲಿ ಹಮ್ಮಿಕೊಂಡ 3ನೇ ದಿನದ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಭಾವನೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನೇಕಾರ ಪೇಟೆಯ ಸಮುದಾಯದವರು ಶತಮಾನೋತ್ಸವ ಜಾತ್ರಾ ಮಹೋತ್ಸವ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಯುವಕರ ಮೇಲೆ ಮಹತ್ವ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.ಸಮಾರಂಭದ ಮುಖ್ಯ ಅತಿಥಿಯಾದ ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಮಾತನಾಡಿ, ಧರ್ಮ ಮತ್ತು ನಂಬಿಕೆಗಳಿ ಕ್ಷೀಣಿಸುತ್ತಿರುವ ಸಮಯದಲ್ಲಿ ಉತ್ಸವಗಳು ಪುನಶ್ಚೇತನ ನೀಡಿ ನೆಮ್ಮದಿ ಒದಗಿಸುತ್ತವೆ. ಸಕಲರ ಮಾನ ಮುಚ್ಚುವ ಕಾಯದಲ್ಲಿರುವ ನೇಕಾರರು ನಿಜವಾದ ಕಾಯಕ ಜೀವಿಗಳು ಎಂದು ತಿಳಿಸಿದರು.ಗೋಕಾಕ ತಾಲೂಕು ಅಂಕಲಗಿ-ಕುಂದರಗಿಯ ಅಡವಿ ಸಿದ್ಧೇಶ್ವರಮಠದ ಡಾ.ಅಮರಸಿದ್ಧೇಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನೇಕಾರರು ತಯಾರಿಸಿದ ಬಟ್ಟೆ ಒಂದೇ ಆದರೂ ಅದರ ಬಣ್ಣ ಭಿನ್ನವಾಗಿದೆ. ಇದರ ಅರ್ಥ ಜಗತ್ತಿನಲ್ಲಿ ಎಷ್ಟೆ ಜಾತಿಗಳಿದ್ದರೂ ನಾವೆಲ್ಲರೂ ಒಂದೇ ಎಂಬ ತತ್ವಸಾರಿ ಸಹಬಾಳ್ವೆಯ ಜೀವನ ನಡೆಸುವವರು ನೇಕಾರ ಜನಾಂಗದವರು ಎಂದು ಬಣ್ಣಿಸಿದರು.ಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೇಕಾರರು ತಮ್ಮ ಮೂಲ ವೃತ್ತಿಯ ಜೊತೆಗೆ ಬೇರೆ ವೃತ್ತಿ ಕೌಶಲ್ಯವನ್ನು ರೂಢಿಸಿಕೊಂಡು ಆಧುನಿಕ ಯುಗದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದರು.ಸುರೇಬಾನ ಆತ್ಮಾನಂದ ಮಠದ ಸದ್ಗುರು ಸಮರ್ಥ ಶಿವಾನಂದ ಸ್ವಾಮೀಜಿ, ಕೆರೂರಿನ ವೇದಮೂರ್ತಿ ರುದ್ರಮುನಿ ಸ್ವಾಮೀಜಿ, ಸ್ಥಳೀಯ ರವಿಸ್ವಾಮಿ ಆಚಾರ್ಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಏಕಣಾಥ ಕೊಣ್ಣೂರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ, ಸದಸ್ಯರುಗಳಾದ ಶಾರವ್ವ ಶಿರಿಯನ್ನವರ, ರಾಣಿ ಬೋಕರೆ, ಶಂಕರ ಸೂಳಿಭಾಂವಿ, ನಾಗರಾಜ ಕಟ್ಟಿಮನಿ, ಪ್ರಹ್ಲಾದ ಬಡಿಗೇರ, ಶಂಕರ ಬೆನ್ನೂರ, ಉದ್ಯಮಿ ವಿಜಯ ಶೆಟ್ಟಿ, ಚಂದನ ಪಾಟೀಲ, ಜಗನ್ನಾಥ ರಾವಳ ಸೇರಿದಂತೆ ಇತರರಿದ್ದರು.ಚಂದ್ರು ಕಲ್ಲೂರ ಸ್ವಾಗತಿಸಿದರು. ಶೃತಿ ಜಾಧವ ಕಾರ್ಯಕ್ರಮ ನಿರೂಪಿಸಿದರು. ಎಂ.ಎನ್.ಕರಡಿಗುಡ್ಡ ವಂದಿಸಿದರು.