ಸಾರಾಂಶ
ಕೆ.ಆರ್.ಪೇಟೆ : ಮೂರು ದಿನಗಳ ಹಿಂದೆಯೇ ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್ (28) ಹೃದಯಾಘಾತದಿಂದ ಮೃತಪಟ್ಟ ನವ ವಿವಾಹಿತ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶಶಾಂಕ್ ತಮ್ಮದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಜಾರ್ಖಂಡ್ ಮೂಲದ ಅಶ್ನಾ ಎಂಬ ಯುವತಿಯನ್ನು ಪ್ರೀತಿಸಿ ಕಳೆದ ಮೂರು ದಿನಗಳ ಹಿಂದೆ ( ಭಾನುವಾರ ) ವಿವಾಹವಾಗಿದ್ದರು.
ಮಂಗಳವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಎಚ್.ಎಸ್. ಆರ್ ಲೇಔಟ್ ನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ಶಶಾಂಕ್ 28ನೇ ವಯಸ್ಸಿನಲ್ಲಿಯೇ ಅಕಾಲಿಕವಾಗಿ ಸಾವನ್ನಪ್ಪಿರುವುದು ಆತನ ತಂದೆ, ತಾಯಿ, ಸ್ನೇಹಿತರು, ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.
ವಿವಾಹವಾದ ಮೂರೇ ದಿನಕ್ಕೆ ಸಾವನ್ನಪ್ಪಿದ ಶಶಾಂಕ್ ಮೃತ ದೇಹವನ್ನು ನೋಡಿ ಸಂತಾಪ ಸೂಚಿಸಲು ಸಾವಿರಾರು ಜನರು ತಂಡೋಪ ತಂಡವಾಗಿ ಆಗಮಿಸಿದ್ದರು. ಮೃತರ ಪೋಷಕರಾದ ವನಿತಾ ಮಂಜುನಾಥ್ ದಂಪತಿಗೆ ಸಾಂತ್ವನ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಮಂಜುನಾಥ್ ಅವರ ಜಮೀನಿನಲ್ಲಿ ಮೃತ ಶಶಾಂಕ್ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಯಿತು.
ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್. ದೇವರಾಜು, ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ, ಮನ್ಮುಲ್ ನಿರ್ದೇಶಕರಾದ ಡಾಲುರವಿ, ಎಂ.ಬಿ.ಹರೀಶ್, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಪುರಸಭೆ ಅಧ್ಯಕ್ಷೆ ಪಂಕಜಾ, ಮುಖ್ಯಾಧಿಕಾರಿ ನಟರಾಜ್, ತಾಪಂ ಮಾಜಿ ಅಧ್ಯಕ್ಷ ಜಯರಂಗ ಸೇರಿದಂತೆ ಸಾವಿರಾರು ಜನರು ಶಶಾಂಕ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಸಂತಾಪ ಸೂಚಿಸಿದರು.
;Resize=(128,128))
;Resize=(128,128))