ಹೋಟೆಲ್‌ನ ಆಹಾರ ಸಾಗಾಣಿಕೆ ಲಿಫ್ಟ್‌ನಲ್ಲಿ ತೆರಳುವಾಗ ಮಹಡಿಗೆ ತಲೆ ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಹುಬ್ಬಳ್ಳಿ ನಿವಾಸಿ ರಾಜೇಶ್ ಮೃತ ಯುವಕ

 ಬೆಂಗಳೂರು : ಹೋಟೆಲ್‌ನ ಆಹಾರ ಸಾಗಾಣಿಕೆ ಲಿಫ್ಟ್‌ನಲ್ಲಿ ತೆರಳುವಾಗ ಮಹಡಿಗೆ ತಲೆ ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಹುಬ್ಬಳ್ಳಿ ನಿವಾಸಿ ರಾಜೇಶ್ ಮೃತ ಯುವಕ

ಹುಬ್ಬಳ್ಳಿ ನಿವಾಸಿ ರಾಜೇಶ್ (22) ಮೃತ ಯುವಕ. ಜಯನಗರದ 4ನೇ ಹಂತದಲ್ಲಿರುವ ದಕ್ಷಿಣ ಉಪಾಹಾರ ಕೆಫೆಯಲ್ಲಿ ಗುರುವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿಂಗಳ ಹಿಂದಷ್ಟೇ ಕೆಫೆ ಆರಂಭ

ತಿಂಗಳ ಹಿಂದಷ್ಟೇ ಜಯನಗರದ 4ನೇ ಹಂತದ ಬಳಿ ಎರಡು ಅಂತಸ್ತಿನ ಕಟ್ಟಡದಲ್ಲಿ ಕೆಫೆ ಆರಂಭವಾಗಿತ್ತು. ಕೆಳ ಮಹಡಿಯಲ್ಲಿರುವ ಅಡುಗೆ ಮನೆಯಿಂದ 2ನೇ ಮಹಡಿಗೆ ಆಹಾರ ಸಾಗಿಸಲು ಲಿಫ್ಟ್ ಅನ್ನು ಅಳವಡಿಕೆ ಮಾಡಲಾಗಿತ್ತು. ಈ ಲಿಫ್ಟ್‌ನಲ್ಲಿ ರಾಜೇಶ್ ತೆರಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಕಿರಿದಾದ ಲಿಫ್ಟ್‌ನಲ್ಲಿ ಹೋಗುವಾಗ ತಿಳಿಯದೆ ಮೊದಲ ಮಹಡಿಯಲ್ಲಿ ಆತನ ತಲೆಗೆ ಪೆಟ್ಟಾಗಿದೆ.

ಕೂಡಲೇ ರಾಜೇಶ್‌ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಹೋಟೆಲ್ ಸಿಬ್ಬಂದಿ ಯತ್ನಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ತನ್ನೂರು ಹುಬ್ಬಳ್ಳಿಯಲ್ಲಿ ಹೋಟೆಲ್ ಆರಂಭಿಸಲು ಮೃತ ರಾಜೇಶ್ ಯೋಜಿಸಿದ್ದ. ಇದಕ್ಕಾಗಿ ತನ್ನ ಗೆಳೆಯನ ಕೆಫೆಯಲ್ಲಿ ಹೋಟೆಲ್‌ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಲು ಆತ ಬಂದಿದ್ದ. ಈ ಘಟನೆ ಸಂಬಂಧ ಕೆಫೆ ಮಾಲಿಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.