ಕನ್ನಡಪ್ರಭ ವಾರ್ತೆ ಬೆಳಗಾವಿ ಕಟ್ಟಡಕ್ಕೆ ಬಣ್ಣ ಬಳಿಯುವಾಗ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆದರೆ, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಟ್ಟಡಕ್ಕೆ ಬಣ್ಣ ಬಳಿಯುವಾಗ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆದರೆ, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ಶಿವು ಕಮ್ಮಾರ (22) ಮೃತ ಯುವಕ. ಬ್ರಹ್ಮ ನಗರದಲ್ಲಿ ಕಟ್ಟಡಕ್ಕೆ ಬಣ್ಣ ಬಳಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದ ಶಿವುವಿನ ಕೈ ಮತ್ತು ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ಯುವಕನನ್ನು ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿತ್ತು. ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆತ ಮೃತಪಟ್ಟಿದ್ದಾನೆ. ತೀವ್ರ ಗಾಯಗೊಂಡಿದ್ದ ಯುವಕನಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ನಂತರವೂ ಯುವಕನಿಗೆ ತಕ್ಷಣ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಯಲ್ಲಿ ಏಳು ಜನ ವೈದ್ಯರಿದ್ದರೂ ಯಾರೂ ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ರಾತ್ರಿ ಪಾಳೆಯಲ್ಲಿದ್ದ ವೈದ್ಯರು ಚಿಕಿತ್ಸೆ ನೀಡದೆ ಹೋದ ಕಾರಣ ಗಾಯಾಳುವಿನ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ನನ್ನ ಮಗ ಬದುಕುತ್ತಿದ್ದ ಎಂದು ಮೃತನ ತಂದೆ-ತಾಯಿ ಕಣ್ಣೀರಿಟ್ಟಿದ್ದಾರೆ. ಸಂಬಂಧಪಟ್ಟ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಆಸ್ಪತ್ರೆ ಆಡಳಿತದ ಸ್ಪಷ್ಟನೆ:
ಕುಟುಂಬದವರ ಆರೋಪವನ್ನು ಬಿಮ್ಸ್ ಆಡಳಿತ ಮಂಡಳಿ ತಳ್ಳಿಹಾಕಿದೆ. ವೈದ್ಯರಿಂದ ನಿರ್ಲಕ್ಷ್ಯ ಆಗಿಲ್ಲ. ಅವರು ಘಟನೆ ನಡೆದ ಮೂರು ದಿನಗಳ ಬಳಿಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮೊದಲೇ ಕರೆತಂದಿದ್ದರೆ ಬದುಕಿಸಬಹುದಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.