ಹಾಡಿಗೆ ಹೆಜ್ಜೆ ಹಾಕುತ್ತಾ ಮೊಹರಂ ಆಚರಿಸಿದ ಯುವಕರು

| Published : Jul 18 2024, 01:41 AM IST

ಹಾಡಿಗೆ ಹೆಜ್ಜೆ ಹಾಕುತ್ತಾ ಮೊಹರಂ ಆಚರಿಸಿದ ಯುವಕರು
Share this Article
  • FB
  • TW
  • Linkdin
  • Email

ಸಾರಾಂಶ

ಮಹಮ್ಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಸಂಗಡಿಗರು ಯಜೀದನೆಂಬುವವನ ವಿರುದ್ದ ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತಾ ಜೀವ ಬಿಟ್ಟರು.ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಶುರುವಾಯಿತು

ಶಿರಹಟ್ಟಿ: ಮೊಹರಂ ಹಬ್ಬದ ನಿಮಿತ್ತ ಬುಧವಾರ ಪಟ್ಟಣದ ಅಂಬೇಡ್ಕರ್ ನಗರದ ನೂರಾರು ಯುವಕರು ಜಾನಪದ ಹಾಡು ಹಾಡುತ್ತಾ ಹೆಜ್ಜೆ ಮೇಳದೊಂದಿಗೆ ಕುಣಿತ, ಸವಾಲ್ ಪದಗಳೊಂದಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಮೊಹರಂ ಆಚರಣೆ ಮಾಡಿದರು.

ಒಂದೇ ತರಹದ ಹೊಸ ಬಟ್ಟೆ ಧರಿಸಿ ಕೈಯಲ್ಲಿ ಶೃಂಗರಿಸಿದ ಕೋಲು ಹಿಡಿದು ವಿವಿಧ ಬಗೆಯ ಜಾನಪದ ಹಾಡು ಹಾಡುತ್ತಾ ಅಂಬೇಡ್ಕರ್ ನಗರದಿಂದ ಬೆಳಗ್ಗೆ ೧೦-೩೦ರಿಂದ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ತೆರಳಿ ಮಾರುಕಟ್ಟೆಯಲ್ಲಿ ವಿಜೃಂಭಣೆಯಿಂದ ಗಂಟೆಗಟ್ಟಲೆ ಹಿಂದೂ, ಮುಸ್ಲಿಂ ಯುವಕರು ಸೇರಿ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.

ಮುಸ್ಲಿಂ ಮುಖಂಡರೊಬ್ಬರು ಹೇಳುವಂತೆ ಮಹಮ್ಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಸಂಗಡಿಗರು ಯಜೀದನೆಂಬುವವನ ವಿರುದ್ದ ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತಾ ಜೀವ ಬಿಟ್ಟರು.ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಶುರುವಾಯಿತು.

ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಉತ್ತರ ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಈ ಹಬ್ಬವನ್ನು ಎಲ್ಲೆಡೆಯೂ ಎಲ್ಲ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರ ಹಬ್ಬವಾಯಿತು. ಹೀಗಾಗಿ ಮುಸ್ಲಿಂರೇ ಇಲ್ಲದ ಬಹುತೇಕ ಊರುಗಳಲ್ಲಿ ಮೊಹರಂ ನಡೆಯುತ್ತದೆ.

ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ, ಕುಸಲಾಪೂರ, ಮಾಚೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೊಹರಂ ಎನ್ನುವುದು ಮುಸ್ಲಿಂ ಹಬ್ಬವಾಗಿಲ್ಲ. ಬದಲಾಗಿ ಈ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಂರು ಸೇರಿ ಭಾವೈಕ್ಯದಿಂದ ಆಚರಿಸುತ್ತಿದ್ದಾರೆ. ಜಾತಿ, ಧರ್ಮದ ಸಂಕೋಲೆ ಮೀರಿ ಅಸ್ಮಿತೆ ಸೃಷ್ಟಿಸಿಕೊಂಡ ಮುಸ್ಲಿಂರ ಪವಿತ್ರ ಹಬ್ಬವಾಗಿದೆ.

ಮೊಹರಂನಲ್ಲಿ ಶೋಕಗೀತೆ ರಚನೆ, ಹಾಡಿಕೆ, ಕುಣಿತ ಹುಲಿ ವೇಷಗಾರಿಕೆ, ಮೆರವಣಿಗೆ ವಿಶೇಷ ಆಹಾರಗಳ ಆಯಾಮಗಳಿವೆ. ಪಟ್ಟಣದ ಅಂಬೇಡ್ಕರ್ ನಗರದ ಯುವಕರು ಸುಮಾರು ವರ್ಷಗಳಿಂದ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಅಂಬೇಡ್ಕರ್ ನಗರದಲ್ಲಿಯೇ ಅನೇಕರು ಹಾಡು ಕಟ್ಟಿ ಹಾಡುತ್ತಾರೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ತನ್ನದೇ ಆಚರಣೆ ರೂಢಿಸಿಕೊಂಡಿವೆ.

ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾಗಿದ್ದರಿಂದ ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ.

ಹೆಜ್ಜೆ ಮೇಳದಲ್ಲಿ ಉಡಚಪ್ಪ ನೀಲಣ್ಣವರ, ರಂಗಪ್ಪ ಗುಡಿಮನಿ, ಮಹಾಂತೇಶ ಗುಡಿಮನಿ, ಚಂದ್ರು ಗೋಡೆಣ್ಣವರ, ಮಹಾಂತೇಶ ಗೋಡೆಣ್ಣವರ, ದೇವಪ್ಪ ಗುಡಿಮನಿ, ರೇವಣೆಪ್ಪ ಗುಡಿಮನಿ, ಹನಮಂತ ಬಡೆಣ್ಣವರ, ರವಿ ಗುಡಿಮನಿ, ಉಮೇಶ ಬಡೆಣ್ಣವರ ಸೇರಿದಂತೆ ನೂರಾರು ಅಂಬೇಡ್ಕರ್ ನಗರದ ಯುವಕರು ಭಾಗವಹಿಸಿದ್ದರು.