ಮನುಷ್ಯ ತನ್ನ ಆರೋಗ್ಯವನ್ನು ಭಾಗ್ಯ ಎನ್ನುವುದಕ್ಕಿಂತಲೂ ಅದರ ಸ್ಥಾನ ಹೆಚ್ಚಿನದ್ದಾಗಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಳಜಿಗಾಗಿ ಸಮಯ ನೀಡಲೇಬೇಕು. ಇಂದಿನ ಯುವ ಜನತೆ ಅಗತ್ಯವಾಗಿ ತಮ್ಮ ಮುಂದಿನ ಆರೋಗ್ಯಕರವಾದ ಬದುಕಿಗಾಗಿ ಇಂದೇ ಆರೋಗ್ಯದ ಕಾಳಜಿ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಜನತೆ ಆರೋಗ್ಯಕರ ಜೀವನ ಶೈಲಿ ಕುರಿತು ಹೆಚ್ಚು ಗಮನಹರಿಸಬೇಕು ಎಂದು ಮಿಷನ್ ಹೆಲ್ತಿ ಭಾರತ್ (ಎಂಎಚ್‌ಬಿ) ಸಂಸ್ಥೆಯ ಸ್ಥಾಪಕರು ಹಾಗೂ ಬೊಜ್ಜು ಮುಕ್ತ ಭಾರತ ಅಭಿಯಾನದ ರುವಾರಿಗಳಾದ ತಾಪ್ಸಿ ಉಪಾಧ್ಯಾಯ್‌ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಬೊಜ್ಜು ಮುಕ್ತ ಭಾರತ ಅಭಿಯಾನದಡಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಸೇವನೆಯು ಜನರನ್ನು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತಿದೆ. ಇದರಿಂದ ಯುವ ಜನತೆ ಚಿಕ್ಕ ವಯಸ್ಸಿನಲ್ಲಿಯೇ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.

ಮನುಷ್ಯ ತನ್ನ ಆರೋಗ್ಯವನ್ನು ಭಾಗ್ಯ ಎನ್ನುವುದಕ್ಕಿಂತಲೂ ಅದರ ಸ್ಥಾನ ಹೆಚ್ಚಿನದ್ದಾಗಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಳಜಿಗಾಗಿ ಸಮಯ ನೀಡಲೇಬೇಕು. ಇಂದಿನ ಯುವ ಜನತೆ ಅಗತ್ಯವಾಗಿ ತಮ್ಮ ಮುಂದಿನ ಆರೋಗ್ಯಕರವಾದ ಬದುಕಿಗಾಗಿ ಇಂದೇ ಆರೋಗ್ಯದ ಕಾಳಜಿ ಮಾಡಬೇಕಿದೆ. ದೈಹಿಕ ಚಟುವಟಿಕೆ, ಧ್ಯಾನ, ಯೋಗ, ಕರಿದ ಪದಾರ್ಥಗಳು ಹಾಗೂ ಹೊರಗಿನ ತಿಂಡಿಗಳ ತ್ಯಜಿಸುವಿಕೆ, ಮೊಬೈಲ್ ವೀಕ್ಷಣೆಯ ಸಮಯವನ್ನು ಕಡಿತಗೊಳಿಸುವುದು ಹಾಗೂ ಇತರರನ್ನು ಕಾಳಜಿವಹಿಸುವುದರ ಜೊತೆಗೆ ತಮ್ಮ ಆರೋಗ್ಯಕರ ಭಾವನೆಗಳನ್ನು ಇತರರೊಡನೆ ಹಂಚಿಕೊಳ್ಳುವುದು-ಈ ಪಂಚ ಸೂತ್ರಗಳನ್ನು ಯುವ ಸಮುದಾಯವು ಅನುಸರಿಸಬೇಕು. ರಾಸಾಯನಿಕ ಮುಕ್ತ ಸಾವಯವ ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳ ಬಳಕೆಯಿಂದ ನಮ್ಮ ಆರೋಗ್ಯ ಮತ್ತಷ್ಟು ಹೆಚ್ಚುತ್ತದೆ. ಮನೆಯ ಆಹಾರ ಪದಾರ್ಥಗಳನ್ನು ಹೊರತುಪಡಿಸಿ, ಹೊರಗಿನ ಆಹಾರ ಪದಾರ್ಥಗಳ ಸೇವನೆಯನ್ನು ನಿಲ್ಲಿಸಬೇಕು. ಕೆಲವು ಉದ್ಯಮಗಳು ತಮ್ಮ ಲಾಭಕ್ಕಾಗಿ ಕೆಲವು ಡೈರಿ ಉತ್ಪನ್ನಗಳನ್ನು ತಯಾರಿಸುತ್ತಿವೆ. ಅವು ಕೂಡ ಇಂದು ಜನರ ಆರೋಗ್ಯವನ್ನು ಹಾಳುಮಾಡುತ್ತಿವೆ. ಒಳ್ಳೆಯ ಉತ್ಪನ್ನಗಳನ್ನು ಮಾತ್ರ ಆಯ್ಕೆ ಮಾಡಿ ಬಳಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಭಾರತದ ಜನಸಂಖ್ಯೆ ಇಂದು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು; ಜನರ ಆರೋಗ್ಯದ ಕಾಳಜಿಗಳು ಕೂಡ ಹೆಚ್ಚಾಗಬೇಕಿದೆ. ಆಧುನಿಕತೆಗೆ ತಕ್ಕಂತೆ ಸಂಪ್ರದಾಯ, ಸಂಸ್ಕೃತಿಯಲ್ಲಿ ಬದಲಾವಣೆಯಾಗುತ್ತಿರುವಂತೆ ಇಂದಿನ ಜನರ ಜೀವನ ಶೈಲಿಯಲ್ಲಿಯೂ ಆಗುತ್ತಿವೆ. ಅದರಲ್ಲಿ ಆಹಾರ ಪದ್ಧತಿಯೂ ಒಂದು. ಇಂದಿನ ಆಲೊಚನರಹಿತ ಅನಿಯಂತ್ರಿತ ಆಹಾರ ಕ್ರಮದಿಂದ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಅದರಲ್ಲಿ ಈ ಅತಿಯಾದ ಬೊಜ್ಜಿನ ಸಮಸ್ಯೆಯು ಒಂದಾಗಿದೆ. ಅತಿಯಾದ ಬೊಜ್ಜಿನಿಂದ ಮಾರಣಾಂತಿಕ ಹೃದಯದ ಸಮಸ್ಯೆಗಳು ಯುವ ವಯಸ್ಕರಲ್ಲಿಯೇ ಕಾಣಿಸುತ್ತಿರುವುದು ಅತ್ಯಂತ ಅಪಾಯಕಾರಿ. ಭಾರತವು ಇಂತಹ ಸಮಸ್ಯೆಗಳಿಂದ ಪಾರಾಗಿ ಆರೋಗ್ಯಯುತ ಹಾಗೂ ಶಕ್ತಿಯುತ ರಾಷ್ಟ್ರವಾಗಬೇಕಾದರೆ ಯುವ ಜನತೆಯಲ್ಲಿ ಆರೋಗ್ಯದ ಕಾಳಜಿಯು ಹೆಚ್ಚಬೇಕು ಎಂದರು.

ಈ ನಿಟ್ಟಿನಲ್ಲಿ ತಾಪ್ಸಿ ಉಪಾಧ್ಯಾಯ್‌ ಅವರು ಹಮ್ಮಿಕೊಂಡಿರುವ ಈ ಯೋಜನೆ ದೇಶದ ಯುವ ಜನತೆಗೆ ಅತ್ಯಂತ ಉಪಯುಕ್ತವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಪ್ರಭಾರ ಪ್ರಾಂಶುಪಾಲ ಡಾ. ಮಂಜುನಾಥ ಹಾಗೂ ಮಿಷನ್ ಹೆಲ್ತಿ ಭಾರತ್‌ ಸಹಭಾಗಿಗಳಾಗಿರುವ ಚಿದಾನಂದ ಇದ್ದರು. ಪೂರ್ವಿಕ ಮತ್ತು ಸಹನ ತಂಡ ಪ್ರಾರ್ಥಿಸಿದರು. ಅಧ್ಯಾಪಕ ಎಂ.ಪಿ. ಸೋಮಶೇಖರ್‌ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.