ಯುವ ಜನತೆಯು ಮಾದಕ ವ್ಯಸನಿಗಳಾಗದಿರಿ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕರೆ

| Published : Aug 02 2024, 12:57 AM IST

ಸಾರಾಂಶ

ಮಾದಕ ವಸ್ತುವನ್ನು ನಾನು ಹೇಗೆ ಸೇವಿಸುವುದಿಲ್ಲವೋ, ಹಾಗೇ ನನ್ನ ಮನೆಯಲ್ಲಿ ನಾನು ಅದನ್ನು ಇತರರಿಗೆ ಕೊಡುವುದೂ ಇಲ್ಲ ಎಂದು ನಿರ್ಧರಿಸಬೇಕು. ಸ್ನೇಹಿತ, ಸಹೋದ್ಯೋಗಿಗಳಿಗೆ ತಿಳಿವಳಿಕೆ ನೀಡಿ ಅವರೂ ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಯ ಗರ್ಭದಿಂದ ಜನಿಸಿ ಭೂ ಮಂಡಲಕ್ಕೆ ಬರುವಾಗ ಕೇವಲ ಉಸಿರು ಇರುತ್ತದೆ. ಭೂಮಿ ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ. ಅದರ ಮಧ್ಯೆ ಈ ಮಾನವ ಕುಲಕ್ಕೆ ನೀನು ಕೊಡುಗೆ ನೀಡಿದ್ದರೆ ಮಾತ್ರ ನಿನ್ನ ಹೆಸರಿರುತ್ತದೆ, ಇಲ್ಲದಿದ್ದರೆ ಬದುಕಿದ್ದು ವ್ಯರ್ಥ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಟೈಟಾನ್ ಕಂಪನಿ ಲಿಮಿಟೆಡ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಟೈಟಾನ್ ಕಂಪನಿ ಲಿಮಿಟೆಡ್ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮುನಿಪ್ರ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವ್ಯಸನಮುಕ್ತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಭಾರತ ದೇಶದ ಭವಿಷ್ಯವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಆದರೆ, ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಮಾದಕ ವಸ್ತುಗಳ ಮೇಲೆ ಹಾನಿಕಾರಕ ಎಂಬ ಮಾಹಿತಿ ಇದ್ದರೂ ಸಹಿತ ಅದರಿಂದ ಯುವಜನತೆ ದೂರವಾಗದಿರುವುದು ವಿಷಾದನೀಯ ಸಂಗತಿ. ಇದರಿಂದ ದೇಶದಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಆದ್ದರಿಂದ ಯುವಕರು ಮಾದಕ ವ್ಯಸನಿಗಳಾಗದೇ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸನ್ನದ್ಧರಾಗಬೇಕು ಎಂದರು.

ನೈತಿಕ ಅಧಃಪತನ:

ಆಸ್ಕೋಹಾಲ್, ಗಾಂಜಾ ಇನ್ನಿತರ ಮಾದಕ ವಸ್ತುಗಳು ವ್ಯಕ್ತಿಯಲ್ಲಿ ಚಟ ಬೆಳೆಸಲು ಕೆಲವು ತಿಂಗಳುಗಳು ಮತ್ತು ವರ್ಷಗಳನ್ನು ತೆಗೆದುಕೊಂಡರೆ, ಹೆರಾಯಿನ್ ಬ್ರೌನ್ ಶುಗರ್ ವ್ಯಸನಿಗಳಾಗಲು ಕೇವಲ ಮೂರು ದಿನಗಳು ಸಾಕು. ವ್ಯಸನಿಯಾಗಿ ಮಾದಕ ವಸ್ತುಗಳ ಸೇವನೆಗೆ ಎಷ್ಟಾದರೂ ಹಣ ಕೊಡಲು, ಯಾವುದೇ ಅಪರಾಧ ಮಾಡಲು ಸಿದ್ಧನಾಗುತ್ತಾನೆ. ಹೀಗಾಗಿ ಜಗತ್ತಿನಾದ್ಯಂತ ಯುವ ಜನ ಹೆರಾಯಿನ್‌ನ ಮೋಹಜಾಲಕ್ಕೆ ಬಲಿಯಾಗಿ, ಕೊಲೆ, ದರೋಡೆ, ಲೈಂಗಿಕ ಅತ್ಯಾಚಾರಗಳಂತಹ ಹೀನ ಅಪರಾಧಗಳಲ್ಲಿ ತೊಡಗುತ್ತಾರೆ. ಅವರು ನೈತಿಕ ಅಧಃಪತನ ಹೊಂದಿ ಸೈತಾನರಾಗುತ್ತಿದ್ದಾರೆಂದರು.

ನಿವಾರಣೆ, ಮುಂಜಾಗ್ರತೆ ಕ್ರಮಗಳು:

ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗದಿರಲು ಸುಲಭ ಮಾರ್ಗವೆಂದರೆ ಅವುಗಳನ್ನು ದೂರದಲ್ಲೇ ಇಟ್ಟಿರುವುದು. ಎಂತಹ ಆಕರ್ಷಣೆ ಇರಲಿ, ಪರಿಸರದಿಂದ ಎಂತಹ ಒತ್ತಡಗಳೇ ಬರಲಿ, ಮಾದಕ ವಸ್ತುವನ್ನು ಸೇವಿಸುವುದಿಲ್ಲ ಎಂದು ಶಪಥ ಮಾಡಬೇಕು. ಮಾದಕ ವಸ್ತುವನ್ನು ಸೇವಿಸಲು ಒತ್ತಾಯಿಸುವ ಸ್ನೇಹಿತ, ಸ್ನೇಹಿತನಲ್ಲ, ಹಿತ ಶತ್ರು ಎಂದು ವ್ಯಕ್ತಿ ತಿಳಿಯಬೇಕು. 16 ರಿಂದ 30 ವರ್ಷ ವಯಸ್ಸಿನ ಶಾಲಾ- ಕಾಲೇಜು ವಿದ್ಯಾರ್ಥಿಗಳೇ ಈ ಚಟಕ್ಕೆ ಬಲಿಯಾಗುತ್ತಿರುವರು. ಮಾದಕ ವಸ್ತುಗಳ ಮಾರಾಟ ಮಾಡುವವರಿಗೆ 10 ರಿಂದ 20 ವರ್ಷ ಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷ ರುಪಾಯಿ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ.

ಮಾದಕ ವಸ್ತುವನ್ನು ನಾನು ಹೇಗೆ ಸೇವಿಸುವುದಿಲ್ಲವೋ, ಹಾಗೇ ನನ್ನ ಮನೆಯಲ್ಲಿ ನಾನು ಅದನ್ನು ಇತರರಿಗೆ ಕೊಡುವುದೂ ಇಲ್ಲ ಎಂದು ನಿರ್ಧರಿಸಬೇಕು. ಸ್ನೇಹಿತ, ಸಹೋದ್ಯೋಗಿಗಳಿಗೆ ತಿಳಿವಳಿಕೆ ನೀಡಿ ಅವರೂ ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಮನೋವೈದ್ಯ ಡಾ. ಜಿ.ಹೇಮಂತ್‌ ಕುಮಾರ್ ವಿಶೇಷ ಉಪನ್ಯಾಸ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್ ಪ್ರತಿಜ್ಞಾವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಅಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ವಾರ್ತಾ ಸಹಾಯಕ ಮಂಜುನಾಥ್, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಜಿ,ಹರೀಶ್, ಟೈಟಾನ್ ಕಂಪನಿ ಲಿಮಿಟೆಡ್ ನ ಕಾರ್ಖಾನೆ ಮುಖ್ಯಸ್ಥ ಸುಬ್ರತ ಕುಮಾರ್ ಭದ್ರ, ವ್ಯವಸ್ಥಾಪಕ ಎಂ. ಪ್ರತಾಬನ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಶಭಾನಾ ಅಜ್ಮಿ, ಮಂಜುಳಾ, ಮತ್ತಿತರರು ಇದ್ದರು.