ಸಾರಾಂಶ
ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯುವಜನರು ಕಡ್ಡಾಯವಾಗಿ ಮತದಾನ ಮಾಡುವುದಲ್ಲದೇ ನೈತಿಕ ಮತದಾನ ಬೆಂಬಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯುವಜನರು ಕಡ್ಡಾಯವಾಗಿ ಮತದಾನ ಮಾಡುವುದಲ್ಲದೇ ನೈತಿಕ ಮತದಾನ ಬೆಂಬಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ನೀಡಿದರು. ನಗರದ ಶ್ರೀಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಲ್ಲೂ ೧೮ ವರ್ಷ ತುಂಬಿದ ನೂತನ ಮತದಾರರನ್ನು ನೈತಿಕ ಮತದಾನಕ್ಕಾಗಿ ಪ್ರೇರೇಪಿಸಲಾಗುತ್ತಿದೆ. ಯುವ ಮತದಾರರು ನೈತಿಕ ಮತದಾನದ ಮಹತ್ವವನ್ನು ಮನಗಂಡು ಈ ಬಗ್ಗೆ ಇತರರಿಗೂ ಅರಿವು ಮೂಡಿಸಲು ಮುಂದಾಗಬೇಕು ಎಂದರು. ಬಿಆರ್‌ಟಿಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ.ಕಂಟ್ರಾಕ್ಟರ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುವ ಯುವ ಮತದಾರರು ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸಬೇಕು. ಸಾಕಷ್ಟು ಯುವಕ, ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಮತದಾನದ ಮಹತ್ವದ ಅರಿವಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾದ್ಯಂತ ಹಲವಾರು ಬಗೆಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವಜನರನ್ನು ಮತದಾನಕ್ಕೆ ಉತ್ತೇಜಿಸಲಾಗುತ್ತದೆ. ಜಾಗೃತಿ ಕಾರ್ಯಕ್ರಮದ ಭಾಗವಾಗಿ ಇಂದು ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಪ್ರತಿಯೊಬ್ಬರು ಯಾವುದೇ ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನ ಮಾಡಬೇಕು ಎಂದರು. ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ ಮಾತನಾಡಿ, ೧೮ ವರ್ಷ ತುಂಬಿದ ಬಹಳಷ್ಟು ಯುವಜನರು ಚುನಾವಣೆಯ ಮುಖ್ಯ ಭೂಮಿಕೆಯಲ್ಲಿ ಮತದಾನ ಮಾಡಲು ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಬಲ ತುಂಬುವುದು ಜಾಥಾದ ಪ್ರಮುಖ ಉದ್ದೇಶವಾಗಿದೆ. ಬಲಿಷ್ಠ ಪ್ರಜಾಪ್ರಭುತ್ವದ ದೇಶ ಕಟ್ಟಲು ಇದು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು. ಜಿಲ್ಲಾ ಸ್ವೀಪ್ ಯುವ ರಾಯಭಾರಿ ದೀಪಾ ಬುದ್ದೆ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಅವಿರತವಾಗಿ ಶ್ರಮಿಸುತ್ತಿದೆ. ಸಂವಿಧಾನದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ನಮ್ಮೆಲ್ಲರಿಗೂ ಮತದಾನದ ಅಮೂಲ್ಯ ಹಕ್ಕು ನೀಡಿದ್ದಾರೆ. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಮತದಾನದ ಮೌಲ್ಯ ಅರಿಯಬೇಕು. ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಕೃಷ್ಣಪ್ರಸಾದ್, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕ ಬಸವಯ್ಯ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಳಿಕ ಚಾಮರಾಜೇಶ್ವರ ದೇವಾಲಯದಲ್ಲಿಯೇ ಮುಕ್ತಾಯಗೊಂಡಿತು. ಜಾಥಾದಲ್ಲಿ ಭಾಗವಹಿಸಿದ್ದ ಎಲ್ಲರು ನನ್ನ ನಡೆ, ಮತಗಟ್ಟೆ ಕಡೆ, ನನ್ನ ಮತ ನನ್ನ ಹಕ್ಕು, ನೈತಿಕ ಮತದಾನ ಬೆಂಬಲಿಸಿ, ಇನ್ನಿತರೆ ಘೋಷಣೆಗಳನ್ನು ಮೊಳಗಿಸಿ ಮತದಾನದ ಜಾಗೃತಿ ಮೂಡಿಸಿದರು.