ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಎರಡು ಕಣ್ಣು ಕಾಣದ್ದರಿಂದ ಬಸ್ ನಿಲ್ದಾಣದಲ್ಲಿ ಸಂಕಷ್ಟದಲ್ಲಿ ಕಾಲ ದೂಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮದ ಯುವಕರು ಹಣ ಸಂಗ್ರಹಿಸಿ ನಿರಾಶ್ರಿತರ ಆಶ್ರಮಕ್ಕೆ ಸೇರಿಸಿ ಹೃದಯ ವೈಶಾಲ್ಯತೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ರಾಜಣ್ಣ ಎಂಬವರಿಗೆ ಎರಡು ಕಣ್ಣು ಕಾಣಿಸುತ್ತಿರಲಿಲ್ಲ, ಇದರಿಂದ ಆತ ಗ್ರಾಮದ ಬಸ್ ನಿಲ್ದಾಣದಲ್ಲಿ ಜೀವನ ನಡೆಸುತ್ತಾ ಜನರು ನೀಡುವ ಆಹಾರ ಸೇವಿಸಿ ಬದುಕು ದೂಡತ್ತಿದ್ದ.
ಹಾಸನ ತಾಲೂಕಿನ ವರ್ತಿಕೆರೆ ಗ್ರಾಮದ ರಾಜಣ್ಣ ಕೆಲಸ ಅರಸಿ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಗ್ರಾಮಕ್ಕೆ ಬಂದು ಇಲ್ಲಿನ ಕೆಲವು ಹೊಟೇಲ್ ಗಳಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು.ನಂತರ ಚಿಕ್ಕಕೊಪ್ಪಲು ಗ್ರಾಮದ ಯುವತಿಯನ್ನು ಮದುವೆ ಆಗಿದ್ದ ಇವರು, ನಂತರ ಹೊಟೇಲ್ ಕೆಲಸ ಬಿಟ್ಟು ಚಿಕ್ಕಕೊಪ್ಪಲು ದೊಡ್ಡಕೊಪ್ಪಲು ಗ್ರಾಮದಲ್ಲಿ ಕೂಲಿ- ಮಾಡಿಕೊಂಡಿದ್ದರು, ಇವರ ಪತ್ನಿ ಹಲವಾರು ವರ್ಷಗಳ ಹಿಂದೆ ಕಾಣೆಯಾಗಿದ್ದರಿಂದ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದರು.
ಕೆಲ ತಿಂಗಳ ಹಿಂದೆ ಮಧುಮೇಹದಿಂದ ಒಂದು ಕಣ್ಣು ಕಳೆದ ಕೊಂಡಿದ್ದ ರಾಜಣ್ಣ, 15 ದಿನಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದಾಗ ಕಣ್ಣಿಗೆ ಕಡ್ಡಿ ತಾಕಿದ ಪರಿಣಾಮ ಇನ್ನೊಂದು ಕಣ್ಣನ್ನು ಕಳೆದುಕೊಂಡು ಬಸ್ ನಿಲ್ದಾಣದಲ್ಲಿ ಬದುಕು ಸಾಗಿಸುತ್ತಿದ್ದರು.ಇದನ್ನು ಗಮನಿಸಿದ ಗ್ರಾಮದ ಯುವಕ ಮಂಜುನಾಥ್ ಪ್ರಸಾದ್ ಅವರು ಕೆ.ಆರ್. ನಗರ ಮತ್ತು ಮೈಸೂರು ಹಾಗೂ ಬೆಂಗಳೂರಿನ ವಿವಿಧ ಆಶ್ರಮಗಳನ್ನು ಸಂಪರ್ಕಕಿಸಿ ಅಂದ ರಾಜಣ್ಣನವರನ್ನು ಸ್ಥಿತಿಯನ್ನು ಆಶ್ರಮದ ಮುಖ್ಯಸ್ಥರಿಗೆ ತಿಳಿಸಿದ್ದರು. ಆನಂತರ ಬೆಂಗಳೂರಿನ ದಾಸನಪುರ ಹೋಬಳಿಯ ಸೊಂಡೆಕೊಪ್ಪದ ಜನಸ್ನೇಹಿ ನಿರಾಶ್ರಿತರ ಆಶ್ರಮದ ಮುಖ್ಯಸ್ಥರಾದ ಯೋಗಿಶ್ ಅವರು ಇವರಿಗೆ ಉಚಿತವಾಗಿ ಆಶ್ರಯ ಕೊಡುವುದಾಗಿ ತಿಳಿಸಿದ್ದರು.
ಆನಂತರ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ವಾಹನ ಮತ್ತು ಔಷಧ ಉಪಚಾರದ ಅನುಕೂಲಕ್ಕಾಗಿ ಹಣದ ಅವಶ್ಯಕತೆ ಇದ್ದುದನ್ನು ಕಂಡು ಈ ಎರಡು ಗ್ರಾಮದ ಯುವಕರು ಬುಧವಾರ ಬೆಳಗ್ಗೆ ದೊಡ್ಡಕೊಪ್ಪಲು ಡೇರಿ ರಘು ಅವರ ಅಂಗಡಿ ಬಳಿ ಸಭೆ ನಡೆಸಿ ಎರಡು ಗ್ರಾಮದವರಿಂದ 10 ಸಾವಿರ ಹಣ ಸಂಗ್ರಹಿಸಿ ವಾಹನದ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಯಿತು.ರಾಜು ಮಾತನಾಡಿ, ಕಣ್ಣು ಕಾಣದ ಸಂದರ್ಭದಲ್ಲಿ ಅನ್ನ ನೀರು ಕೊಟ್ಟು, ಉದಾರತೆ ತೋರಿ ಈಗ ಆಶ್ರಮ ಸೇರಿಸಲು ಸಹಕಾರ ಕೊಟ್ಟ ಚಿಕ್ಕಕೊಪ್ಪಲು-ದೊಡ್ಡಕೊಪ್ಪಲು ಅವಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಚಿಕ್ಕಕೊಪ್ಪಲು- ದೊಡ್ಡಕೊಪ್ಪಲು ಗ್ರಾಮದ ಯುವಕರಾದ ಡಿ. ಪುನಿತ್, ಅರುಣ್ ಕಲ್ಲಹಟ್ಟಿ, ಸಿ.ಬಿ. ಸಂತೋಷ್, ಸಿ.ಎಸ್. ಗಿರೀಶ್, ಸಿ.ಎಚ್. ನವೀನ್, ಮನು, ಅಭಿ, ಮೋಹನ, ದರ್ಶನ್, ಅಶೋಕ್, ಡೇರಿ ರಘು, ಪುಟ್ಟರಾಜು, ಲೋಕಣ್ಣ, ಸುನಿಲ್, ಮಂಜ, ಚಂದ್ರಣ್ಣ, ಭರತ್, ಮಾವತ್ತೂರು ಉದಯ್, ಸ್ವಾಮಿ, ವೆಂಕಟೇಶ್, ಅರುಣ,ಅಮಿತ್ ಗಾಂಧಿ, ಡೇರಿ ಉಮೇಶ್, ಜೆಸಿಬಿ ದೀಪು, ಚರಣ್, ದಿಲೀಪ್, ಸಿ.ಬಿ. ಆಶೋಕ್, ಕೃಷ್ಣನಾಯಕ, ವಿಜಿ, ಚಿರಂತ್, ಕಾರ್ತಿಕ್, ಸತೀಶ್, ಲಕ್ಷ್ಮಣ್, ಶೇಖರ್, ರಘು ಸಹಕಾರ ನೀಡಿದರು.