ಜಾನಪದದತ್ತ ಯುವಪೀಳಿಗೆ ಸೆಳೆಯಬೇಕು

| Published : Apr 18 2025, 12:30 AM IST / Updated: Apr 18 2025, 12:31 AM IST

ಸಾರಾಂಶ

ಇಂದು ರಿಯಾಲಿಟಿ ಇಲ್ಲದಿರುವುದನ್ನು ಶೋಗಳನ್ನು ರಿಯಾಲಿಟಿ ಶೋ ಎಂದು ಕರಿಯುತ್ತಿದ್ದೇವೆ. ಯಾವ ಕಡೆ ನಮ್ಮ ನಡೆ ಪ್ರಾರಂಭವಾಗಿದೆ ಎಂದರೆ ರಿಯಾಲಿಟಿ ಇಲ್ಲದಿರುವುದನ್ನು ನಾವೇ ಮಾತನಾಡಿ ಜನರನ್ನು ಒಪ್ಪಿಸುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಬಹಳ ಆತಂಕಕಾರಿ ವಾತಾವರಣ ಸೃಷ್ಟಿಸಲಿದೆ.

ಕೊಪ್ಪಳ:

ಯುವಪೀಳಿಗೆಗೆ ಜಾನಪದ ತರಬೇತಿ ಅತ್ಯವಶ್ಯಕವಾಗಿದ್ದು, ಮೊದಲು ಅವರನ್ನು ಜಾನಪದದತ್ತ ಸೆಳೆಯಬೇಕು. ಇದಕ್ಕಾಗಿ ಜಾನಪದ ಅಕಾಡೆಮಿಯಿಂದ ಜಾನಪದ ಸಂಭ್ರಮ, ವಿವಿಧ ವಿಚಾರ ಸಂಕೀರ್ಣ ಮತ್ತು ತರಬೇತಿ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ನಗರದ ಶ್ರೀಗವಿಸಿದ್ಧೇಶ್ವರ ಬಿ.ಇಡಿ ಮಹಾವಿದ್ಯಾಲಯದಲ್ಲಿ ಗುರುವಾರ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಗಿಡ-ಗಿಡಕ ಕೂತು ಕೈಮಾಡಿ ಕರೀತಾವ... ಉಪನ್ಯಾಸ ಹಾಗೂ ಜಾನಪದ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ರಿಯಾಲಿಟಿ ಇಲ್ಲದಿರುವುದನ್ನು ಶೋಗಳನ್ನು ರಿಯಾಲಿಟಿ ಶೋ ಎಂದು ಕರಿಯುತ್ತಿದ್ದೇವೆ. ಯಾವ ಕಡೆ ನಮ್ಮ ನಡೆ ಪ್ರಾರಂಭವಾಗಿದೆ ಎಂದರೆ ರಿಯಾಲಿಟಿ ಇಲ್ಲದಿರುವುದನ್ನು ನಾವೇ ಮಾತನಾಡಿ ಜನರನ್ನು ಒಪ್ಪಿಸುತ್ತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಬಹಳ ಆತಂಕಕಾರಿ ವಾತಾವರಣ ಸೃಷ್ಟಿಸಲಿದೆ. ಇದನ್ನು ತಪ್ಪಿಸಲು ಇಂತಹ ಕಾರ್ಯಕ್ರಮ ಅತ್ಯವಶ್ಯಕವಾಗಿದೆ. ಮುಂದೊಂದು ದಿನ ಸಂಬಂಧಗಳನ್ನು ಸಾಲದ ರೂಪದಲ್ಲಿ ತರಬೇಕಾಗಿದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಸಂಬಂಧ ಬಹಳ ದೊಡ್ಡದಾಗಿದ್ದು ಅದನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಸಾಹಿತಿ ಡಾ. ಸಿದ್ದಲಿಂಗಪ್ಪ ಕೊಟ್ಟೆಕಲ್, ಕೊಪ್ಪಳ ಪರಿಸರದ ಜನಪದ ಭಾಷಾ ವೈಶಿಷ್ಟತೆ ಕುರಿತು ಉಪನ್ಯಾಸ ನೀಡಿ, ಜನಪದ ಎಂದರೆ ಒಂದು ಭಾಗವಾಗಿದೆ. ಜನಪದ ಸಾಹಿತ್ಯ, ಸಂಗೀತ, ಸಂಸ್ಕೃತಿ, ಊಟೋಪಚಾರ, ಉಡುಗೆ-ತೊಡುಗೆ, ಜನಪರ ವಾದ್ಯಗಳ ಸಮಗ್ರವೇ ಜಾನಪದ. ಸಿಂಪಿ ಲಿಂಗಣ್ಣ ಮತ್ತು ದ.ರಾ. ಬೇಂದ್ರ ಹಳ್ಳಿ-ಹಳ್ಳಿಗಳಿಂದ ಅನೇಕ ಹಾಡು, ಕಥೆ, ಅಂತಿ ಪದ ಸಂಗ್ರಹಿಸಿ ಜನಪದ ಉಳಿವಿಗೆ ಶ್ರಮಿಸಿದ್ದಾರೆ. ಜನಪದದ ಬಗ್ಗೆ ಅಧ್ಯಯನ ಹೆಚ್ಚಾಗಲಿ ಎಂದ ಅವರು, ಕೊಪ್ಪಳ ಭಾಗದಲ್ಲಿ ಕಡಿಮೆ ಅಕ್ಷರದಲ್ಲಿ ಬರುವ ಶಬ್ದಗಳ ಬಳಕೆ ಮಾಡಲಾಗುತ್ತದೆ. ಇಲ್ಲಿಯ ಪರಿಸರ ಭಾಷೆ ವಿಶಿಷ್ಟವಾಗಿದ್ದು, ಅದನ್ನು ತಿಳಿದುಕೊಂಡು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ್ ಬಿನ್ನಾಳ ಪ್ರಾಸ್ತಾವಿಕ ಮಾತನಾಡಿ, ಶಿವರಾಜ ತಂಗಡಗಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಇಂತಹ ಕಾರ್ಯಕ್ರಮ ನಮ್ಮ ಭಾಗದಲ್ಲಿ ನಡೆಯುತ್ತಿವೆ ಮತ್ತು ವಿವಿಧ ಅಕಾಡೆಮಿಗೆ ನಮ್ಮ ಭಾಗದವರು ಸದಸ್ಯರಾಗಲು ಅವಕಾಶ ಸಿಕ್ಕಿದೆ. ಇತಿಹಾಸದಲ್ಲಿ ಜಿಲ್ಲೆಯಿಂದ 12 ಜನರನ್ನು ವಿವಿಧ ಅಕಾಡೆಮಿಗೆ ನೇಮಿಸಿರುವ ಕೀರ್ತಿ ಸಚಿವರಿಗೆ ಸಲ್ಲುತ್ತದೆ ಎಂದರು.

ಕನ್ನಡ ನಾಡಿನ ಅಸ್ಮಿಯತೆ ಜನಪದ. ಜಾನಪದ ತಾಯಿ ಹಲವಾರು ಬಹುತ್ವ, ಸಾಮರಸ್ಯ, ಸೌಂದರ್ಯ, ಸಹೋದರತ್ವ ಹಾಗೂ ಕೂಡಿ ಬಾಳುವುದನ್ನು ತನ್ನ ಒಡಲಿನೊಳಗೆ ಹೋದಗಿಸಿಕೊಂಡಿದೆ. ಇಂತಹ ಜಾನಪದ ಸಂಸ್ಕೃತಿಯನ್ನು ನಾಡಿನುದಕ್ಕೂ ಬಿತ್ತರಿಸಲು ಬಹುದೊಡ್ಡ ಅಕಾಡೆಮಿ ರಾಜ್ಯದಲ್ಲಿ ಆರಂಭವಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಎಸ್.ಬಿ. ಕಂಬಾರ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವ ಶಿಳ್ಳೆಕ್ಯಾತರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಮತ್ತು ಎ.ಎಂ. ಮದರಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಜಾನಪದ ಅಕಾಡೆಮಿ ಸದಸ್ಯರಾದ ಮೆಹಬೂಬ ಕಿಲ್ಲೆದಾರ, ಕರ್ನಾಟಕ ಜಾನಪದ ಪರಿಷತ್ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹಿರಿಯ ಕಲಾವಿಧ ಶರಣಪ್ಪ ವಡಿಗೇರಿ ಸೇರಿದಂತೆ ಮಂಜುನಾಥ ಗೊಂಡಬಾಳ, ಕರ್ನಾಟಕ ಚಲಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜಮದಾರ ಸೇರಿದಂತೆ ಹಾಡು ಹಕ್ಕಿ ಬಳಗದವರು ಇದ್ದರು. ವಿಭಿನ್ನ ಶೀರ್ಷಿಕೆನಾವು ಆಪ್ತರು, ಇಷ್ಟವಾದರು, ಸ್ನೇಹಿತರು ಹಾಗೂ ಬಂಧುಗಳನ್ನು ಕರೆಯಬಹುದು. ಆದರೆ, ಗಿಡದ ಮೇಲೆ ಕುಳಿತ ಪಕ್ಷಿ, ಸಸ್ತನಿಗಳು ಅವರ ಬಂಧುಗಳನ್ನು ಮಾತ್ರ ಕರೆಯದೆ ಜಗತ್ತಿನ್ನೇ ಕರೆಯುತ್ತವೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಗಿಡ-ಗಿಡಕ ಕೂತು ಕೈ ಮಾಡಿ ಕರೀತಾವ.. ಹಾಡುವ ಹಕ್ಕಿ ಬಳಗ ಎಂಬ ಶೀರ್ಷಿಕೆ ನೀಡಲಾಗಿದೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು. ಚಾಮರಾಜನಗರದಲ್ಲಿ `ಮತೀಗಲ ಧರಣಿಸೋ ಮಹಾದೇವ, ಕೋಲಾರದಲ್ಲಿ ನಾದವಾದಿಸೇ ಮನಸೇ ನಾದವಾದಿಸೆ, ಚಿತ್ರದುರ್ಗದಲ್ಲಿ ಕಿಲಾರಿ ಕಲರವ ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕಡೆ ನಮ್ಮ ನಡೆ ಎನ್ನುವ ವಿಶೇಷ ಶೀರ್ಷಿಕೆಯಡಿ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.