ಆಧುನಿಕತೆಯ ಪ್ರಭಾವ ಯುವ ಸಮೂಹವನ್ನು ಆವರಿಸಿದ್ದು, ಧಾರ್ಮಿಕ ಕಾರ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ದೂರ ಸರಿಯುತ್ತಿದ್ದಾರೆ. ಮಾನಸಿಕ ಶಾಂತಿ ಕದಡುವ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಯುವಕರು ಮುಗಿಬೀಳುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ವಿಷಾದ ವ್ಯಕ್ತಪಡಿಸಿದರು.
ಹಾನಗಲ್ಲ: ಆಧುನಿಕತೆಯ ಪ್ರಭಾವ ಯುವ ಸಮೂಹವನ್ನು ಆವರಿಸಿದ್ದು, ಧಾರ್ಮಿಕ ಕಾರ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ದೂರ ಸರಿಯುತ್ತಿದ್ದಾರೆ. ಮಾನಸಿಕ ಶಾಂತಿ ಕದಡುವ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಯುವಕರು ಮುಗಿಬೀಳುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ನರೇಗಲ್ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ಸಂದಿಗ್ಧ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಬುನಾದಿಯನ್ನು ಗಟ್ಟಿಗೊಳಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ. ಮಠ, ಮಂದಿರಗಳ ಸಾಮಿಪ್ಯದಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎನ್ನುವ ಸತ್ಯದ ಅರಿವನ್ನು ಯುವಕರಿಗೆ ಮಾಡಿಸುವ ಅನಿವಾರ್ಯತೆ ಇದೆ ಎಂದು ಹೇಳಿದ ಅವರು, ಪ್ರಪಂಚದ ಕೆಲವು ದೇಶಗಳು ಸಂಪತ್ತಿನಲ್ಲಿ ಶ್ರೀಮಂತವಾಗಿರಬಹುದು. ಆದರೆ ಅಂಥ ದೇಶಗಳ ಜನರು ಜೀವನದಲ್ಲಿ ಶಾಂತಿ, ನೆಮ್ಮದಿ ಅರಸಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿನ ಸಾಮರಸ್ಯದ ಬದುಕು ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದು, ಸಂಸ್ಕೃತಿ ಶ್ರೀಮಂತವಾಗಿದೆ. ಅದನ್ನು ಉಳಿಸಿ-ಬೆಳೆಸುವ ಮಹತ್ವದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶರಣರ ನಾಡಿನಲ್ಲಿ ಇಂದು ಜಾತಿ, ಧರ್ಮ, ಪಂಥ ಎಂದು ಬೇಧ ಎಣಿಸುವ ಮೂಲಕ ಸಾಮರಸ್ಯದ ಅಡಿಪಾಯಕ್ಕೆ ಕೊಡಲಿಪೆಟ್ಟು ಹಾಕಲಾಗುತ್ತಿದೆ. ಶಸ್ತ್ರಾಸ್ತ್ರದಿಂದ ಸಮಾಜ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಶಾಸ್ತ್ರದಿಂದ ಮಾತ್ರ ಪರಿವರ್ತನೆ ಸಾಧ್ಯವಿದೆ ಎನ್ನುವ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಆಧುನಿಕ ಜೀವನಶೈಲಿ ರೂಢಿಸಿಕೊಂಡ ನಾವಿಂದು ನಮ್ಮ ಪರಂಪರೆ ಮರೆತ ಪರಿಣಾಮ ನಮ್ಮದೇ ಆಚಾರ, ವಿಚಾರಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ಇಂದಿನ ನವ ಜನಾಂಗ ಬಹುಮಾಧ್ಯಮ, ಜಾಗತೀಕರಣ, ಉದಾರೀಕರಣಗಳ ತೆವಲಿಗೆ ಸಿಕ್ಕು ತಂದೆ-ತಾಯಿಯನ್ನು ನಿರ್ಲಕ್ಷಿಸುತ್ತಿರುವ ಪರಿಣಾಮವಾಗಿ ಕೌಟುಂಬಿಕ ಪ್ರೀತಿ, ವಾತ್ಸಲ್ಯ, ಸಹಬಾಳ್ವೆ, ಹೊಂದಾಣಿಕೆಗಳಿಂದ ವಿಮುಖರಾಗಿದ್ದಾರೆ. ಆತ್ಮೋನ್ನತಿಯ ದಿವಾಳಿತನದ ಅಂಚಿನಲ್ಲಿರುವ ಯುವ ಸಮೂಹಕ್ಕೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು. ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಸದ್ಭಕ್ತ ಮಂಡಳಿ ಸದಸ್ಯರು, ಗ್ರಾಮಸ್ಥರು ಇದ್ದರು.