ಸಾರಾಂಶ
ಆಸ್ತಿ ವಿಚಾರವಾಗಿ ಹಾದಿಬೀದಿಯಲ್ಲಿ ಮಾತನಾಡುವುದಲ್ಲ, ಸದನದಲ್ಲಿ ದಾಖಲೆ ಸಮೇತ ಚರ್ಚೆಗೆ ಬನ್ನಿ, ಸಾರ್ವಜನಿಕ ಚರ್ಚೆಯೇ ಬೇಕಿದ್ದರೆ ಯಾವುದಾದರೂ ಸುದ್ದಿವಾಹಿನಿಯಲ್ಲಿ ಕೂತು ಚರ್ಚೆಗೆ ನಾನು ಸಿದ್ಧ
ಚನ್ನಪಟ್ಟಣ : ನಾನು ಕೃಷಿ ಜತೆಗೆ ಉದ್ಯಮವನ್ನೂ ನಡೆಸುತ್ತಿದ್ದೇನೆ. ನೀವು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ನಿಮ್ಮ ಕುಟುಂಬದ ಆಸ್ತಿ ಕುರಿತು ಲೆಕ್ಕ ಕೊಡಿ. ಆಸ್ತಿ ವಿಚಾರವಾಗಿ ಹಾದಿಬೀದಿಯಲ್ಲಿ ಮಾತನಾಡುವುದಲ್ಲ, ಸದನದಲ್ಲಿ ದಾಖಲೆ ಸಮೇತ ಚರ್ಚೆಗೆ ಬನ್ನಿ, ಸಾರ್ವಜನಿಕ ಚರ್ಚೆಯೇ ಬೇಕಿದ್ದರೆ ಯಾವುದಾದರೂ ಸುದ್ದಿವಾಹಿನಿಯಲ್ಲಿ ಕೂತು ಚರ್ಚೆಗೆ ನಾನು ಸಿದ್ಧ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸವಾಲು ಹಾಕಿದರು.
ಅಕ್ರಮ ಆಸ್ತಿ ಮಾಡಿಲ್ಲ ಎಂದು ಅಜ್ಜಯ್ಯನ ಮುಂದೆ ಪ್ರಮಾಣ ಮಾಡಲಿ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಭಾನುವಾರ ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ನ ಜನಾಂದೋಲನ ಸಮಾವೇಶದಲ್ಲಿ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್ ಅವರು, ಕೇಂದ್ರ ಸಚಿವ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕುಮಾರಣ್ಣ ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಮೊದಲು ನಿಮ್ಮ ಸೋದರ ಬಾಲಕೃಷ್ಣಗೌಡ ಅವರ ಕುಟುಂಬ ಮೈಸೂರು, ಶ್ರೀರಂಗಪಟ್ಟಣದಲ್ಲಿ ಸಂಬಂಧಿಕರ ಹೆಸರಲ್ಲಿ ಬೇನಾಮಿಯಾಗಿ ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ಹೇಳಲಿ. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿ ಆಸ್ತಿ ಹೊಂದಿದ್ದಾನೆ? ಯಾವ ಈರುಳ್ಳಿ, ಆಲೂಗಡ್ಡೆಯಲ್ಲಿ ಅಷ್ಟೊಂದು ಸಂಪಾದನೆ ಆಯ್ತು ಎಂದು ಲೆಕ್ಕ ಕೊಡಲಿ ಎಂದು ಕಿಡಿಕಾರಿದರು.
ನಿಮ್ಮ ಆಸ್ತಿ ಪಟ್ಟಿ ಮಾಡ್ತೇನೆ:
ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ದಿಮೆದಾರ ಎಂದು ಹೇಳಿದ್ದೇನೆ. ನೀವು ಮಾತ್ರ ತಮ್ಮನ್ನು ಪಂಚೆಯುಟ್ಟು ಉಳುಮೆ ಮಾಡುವವ, ಮಣ್ಣಿನ ಮಗ ಎಂದು ಹೇಳಿಕೊಂಡಿದ್ದೀರಿ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀವಲ್ಲ ಎಂದ ಡಿ.ಕೆ.ಶಿವಕುಮಾರ್ ನಾನು, ನನ್ನ ಧರ್ಮಪತ್ನಿ, ನನ್ನ ಸಹೋದರಿ ಮತ್ತು ನನ್ನ ಸಹೋದರನ ಮೇಲೆ ನೀವು ಕೇಸ್ ದಾಖಲಿಸಿ ಏನು ಮಾಡಿದಿರಿ? ಮಿಲಿಟರಿಯವರು ಬಂದು ನನ್ನನ್ನು ಕರೆದುಕೊಂಡು ಹೋಗಲಿದ್ದಾರೆಂದು ಹೇಳಿದ್ದೀರಿ. ಹಾಗಿದ್ದರೆ ನಾನು ಜೈಲಲ್ಲಿದ್ದಾಗ ಯಾಕೆ ಬಂದು ಭೇಟಿಯಾದಿರಿ? ನನ್ನ ಹಾಗೂ ಕುಟುಂಬದ ಮೇಲಿನ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅದು ನಿಮಗೆ ಗೊತ್ತಿದೆಯೇ? ನಾನು ನಿಮ್ಮ ಡಿನೋಟಿಫಿಕೇಶನ್ ಪ್ರಕರಣ, ಗಣಿ ಕೇಸ್, ನಿಮ್ಮ ಕುಟುಂಬದ ಆಸ್ತಿ ವಿಚಾರ ಇನ್ನೂ ಚರ್ಚೆ ಮಾಡಿಲ್ಲ. ಇನ್ನು ಎಲ್ಲವನ್ನೂ ಪಟ್ಟಿ ಮಾಡಿ ಬಿಡುಗಡೆ ಮಾಡುತ್ತೇನೆ ಎಂದು ಹರಿಹಾಯ್ದರು.
ಆಸ್ತಿ ವಿಚಾರ ಹಾದಿಬೀದಿಯಲ್ಲಲ್ಲ, ಮುಖ್ಯ ವೇದಿಕೆಗಳಲ್ಲಿ ಚರ್ಚೆ ಆಗಬೇಕು. ನಾವು ಮಾಡುವ ಚರ್ಚೆ ದಾಖಲೆಯಾಗಿ ಉಳಿಯಬೇಕು. ಅದಕ್ಕಾಗಿಯೇ ಸದನದಲ್ಲಿ ಚರ್ಚೆಗೆ ಆಹ್ವಾನ ನೀಡುತ್ತಿದ್ದೇನೆ. ಹಿಂದೆಯೂ ಎರಡು ಬಾರಿ ಇದೇ ರೀತಿ ಆಹ್ವಾನ ನೀಡಿದ್ದೆ. ಅವರು ಬರಲಿಲ್ಲ, ಈಗ ಅವರ ಸಹೋದರ ಹಾಗೂ ಅವರ ಪಕ್ಷದ ಶಾಸಕರು ಸದನದಲ್ಲಿದ್ದಾರೆ. ಅವರ ಬಳಿ ದಾಖಲೆಗಳನ್ನು ಕೊಟ್ಟು ಕಳುಹಿಸಿ ಚರ್ಚೆ ಮಾಡಿಸಲಿ. ಇದೆಲ್ಲವೂ ಮುಂದಿನ ಪೀಳಿಗೆಗೂ ತಿಳಿಯಲಿ. ಯಾವುದಾದರೂ ಸುದ್ದಿವಾಹಿನಿಯಲ್ಲಿ ಕೂತು ಚರ್ಚಿಸಬೇಕೆಂದಿದ್ದರೆ ಸಿದ್ಧ ಎಂದು ಸವಾಲು ಹಾಕಿದರು.