ಯುವಕರು ವ್ಯಕ್ತಿತ್ವ, ಸಂವಹನ ಕೌಶಲ್ಯತೆ ಬೆಳೆಸಿಕೊಳ್ಳಿ

| Published : Feb 28 2024, 02:35 AM IST

ಸಾರಾಂಶ

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವಾಗ ಹಂತ ಹಂತವಾಗಿ ಶ್ರಮಪಟ್ಟಾಗ ಯಶಸ್ಸು ಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕೊನೆಯವರೆಗೂ ಛಲ ಬಿಡಬಾರದು ಎಂದು ಡಾ. ಜಿ.ಬಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಯುವಜನತೆ ವ್ಯಕ್ತಿತ್ವ, ಸಂವಹನ ಕೌಶಲ್ಯ ಬೆಳೆಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿವಿಯ ಕುಲಸಚಿವ ಡಾ. ಜಿ.ಬಿ. ಪಾಟೀಲ ಹೇಳಿದರು.

ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಗುರುಸಿದ್ದಪ್ಪಾ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾನೂನು ಮಹಾವಿದ್ಯಾಲಯಗಳ ಯುವಜನೋತ್ಸವದ (ಹುಬ್ಬಳ್ಳಿ ವಲಯ)ದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವಾಗ ಹಂತ ಹಂತವಾಗಿ ಶ್ರಮಪಟ್ಟಾಗ ಯಶಸ್ಸು ಸಾಧ್ಯ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕೊನೆಯವರೆಗೂ ಛಲ ಬಿಡಬಾರದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ ಆತ್ಮಚರಿತ್ರೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ ಜಾನಪದ ಕಲಾವಿದ ಡಾ. ರಾಮು ಮೂಲಗಿ ಮಾತನಾಡಿ, ಜಾನಪದ ಇತ್ತೀಚಿನ ದಿನಗಳಲ್ಲಿ ಹುಟ್ಟಿಲ್ಲ. ಇದು ಪುರಾತನ ಕಾಲದಿಂದಲೂ ಬಂದಿದೆ. ಜನಪದವು ಮೂಲ ಪಾರಂಪರಿಕ ಸಂಸ್ಕೃತಿ ಉಳಿಸುತ್ತಿದೆ. ಜಾನಪದಗೀತೆಯು ಅದು ಯಾವ ರೀತಿಯಲ್ಲಿದೆ ಅದೇ ರೀತಿಯಲ್ಲಿ ಹೇಳಬೇಕು.

ಜನಪ್ರಿಯ ಗೀತೆ ಮತ್ತು ಮೂಲ ಜನಪದ ಗೀತೆಯ ಕುರಿತ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಜನಪದ ಗೀತೆಯು ದುರುಪಯೋಗವಾಗುತ್ತಿರುವುದು ನೋವಿನ ಸಂಗತಿ. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವು, ಸೋಲು ಮುಖ್ಯವಲ್ಲ ಎಂಬುದನ್ನು ಅರಿತುಕೊಳ್ಳಿ ಎಂದರು.

ಈ ಯುವಜನೋತ್ಸವದಲ್ಲಿ ಹುಬ್ಬಳ್ಳಿ ವಲಯದ 13 ತಂಡಗಳು ಭಾಗವಹಿಸಿದ್ದವು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಉಮೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಾಚಾರ್ಯೆ ಡಾ. ಜ್ಞಾನೇಶ್ವರ ಚೌರಿ, ಕವಿತಾ ಬೆಳಗಲಿ, ಶ್ರದ್ಧಾ ಪಂಡಿತ ಸೇರಿದಂತೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಇದ್ದರು.