ಸತ್ಯದ ಆಚರಣೆ ದೂರವಾಗಿ ಯುವ ಸಮುದಾಯ ವ್ಯಸನಗಳಿಗೆ ಬಲಿಯಾಗಿ ಮಾನವೀಯತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸತ್ಯದ ಆಚರಣೆ ದೂರವಾಗಿ ಯುವ ಸಮುದಾಯ ವ್ಯಸನಗಳಿಗೆ ಬಲಿಯಾಗಿ ಮಾನವೀಯತೆ ಕಳೆದುಕೊಳ್ಳುತ್ತಿದ್ದಾರೆ ಎಂದು ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಗರದ ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದುಷ್ಚಟಗಳ ದಾಸರಾಗುತ್ತಿರುವ ಯುವ ಜನರು ತಮ್ಮ ವಿಷಯುಕ್ತ ವ್ಯಸನಗಳಿಂದ ಕುಟುಂಬವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತಂದೆ- ತಾಯಿ, ಗುರು- ಹಿರಿಯರಿಗೂ ಗೌರವ ಕೊಡದಂತಹ ದುಷ್ಟರಾಗಿ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಚಿತ್ತರಗಿಯ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳು ಇಂತಹ ವ್ಯಸನಗಳನ್ನು ದೂರ ಮಾಡಲು ಊರೂರು ತಿರುಗಿ ಜೋಳಿಗೆಯಲ್ಲಿ ಚಟಗಳನ್ನು ಭಿಕ್ಷೆ ಬೇಡಿ ಹಲವಾರು ಕುಟುಂಬಗಳನ್ನು ಉಳಿಸಿದ್ದಾರೆ. ಹಲವು ಭಕ್ತರ ಸನ್ನಡತೆಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಸಮುದಾಯ ವ್ಯಸನಗಳಿಂದ ಮುಕ್ತರಾಗಿ ತಮ್ಮ ಮನಸ್ಸು, ದೇಹಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಈ ಮೂಲಕ ಸಮಾಜದಲ್ಲಿ ಸತ್ರ್ಪಜೆಗಳಾಗಿ ಬದುಕಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಮಾತನಾಡಿ, ಬಹುಕಾಲದಿಂದಲೂ ತಲೆಮಾರುಗಳ ಅಂತರದಲ್ಲಿ ಸಾಕಷ್ಟು ವ್ಯಸನಯುಕ್ತ ಬೆಳವಣಿಗೆಗಳು ನಡೆದಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಹೊಸ ತಲೆಮಾರಿನ ಯುವ ಸಮುದಾಯ ಮಾದಕ ವಸ್ತುಗಳು ತಮಗೆ ಸ್ಫೂರ್ತಿ ಎಂದು ತಪ್ಪಾಗಿ ತಿಳಿದಿದ್ದಾರೆ. ಆದರೆ ಇದರಿಂದ ತಮ್ಮ ದೇಹ ಮತ್ತು ತಮ್ಮ ಪರಿಸರ ಹಾಳಾಗುವುದನ್ನು ಗಮನಿಸುತ್ತಿಲ್ಲ. ಇದರ ಪರಿಣಾಮ ಸಮಾಜದ ಮೇಲೆ ವ್ಯತಿರಿಕ್ತ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಹೇಳಿದರು.

ಯಾರು ತಾವು ವ್ಯಸನಿಗಳು ಎಂದು ಒಪ್ಪಿಕೊಂಡು ಅದರಿಂದ ದೂರಾಗಲು ಸ್ವಯಂ ಪ್ರೇರೇಪಣೆ ಪಡೆಯುತ್ತಾರೋ ಅವರು ಮಾತ್ರ ಇಂತಹ ಮಾರಕ ವ್ಯಸನದಿಂದ ಮುಕ್ತರಾಗಲು ಸಾಧ್ಯ.

ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕಿ ಪ್ರೊ. ರಮ್ಯಾ ಕಲ್ಲೂರು ಕೆ.ವಿ. ಅವರು, ಯುವ ಸಮುದಾಯಕ್ಕೆ ಧನಾತ್ಮಕ ಆಲೋಚನೆಗಳೇ ಉತ್ತಮ ಬದುಕಿಗೆ ಬುನಾದಿ ಎಂದು ಹೇಳಿದರು.

ಸಹ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಎಂ.ಆರ್. ಅವರು ವಿಶೇಷ ಉಪನ್ಯಾಸ ನೀಡಿದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ನಾಗಭೂಷಣ್ ಎಚ್., ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಕೆ.ಜಿ. ಪರಶುರಾಮ್, ಅಚರ್ಡ್ ಮದ್ಯವರ್ಜನ ಕೇಂದ್ರದ ಮುಖ್ಯಸ್ಥ ಸದಾಶಿವ, ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜಶೇಖರ್ ಉಪಸ್ಥಿತರಿದ್ದರು.