ಯುವಜನೋತ್ಸವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ನಡೆಯಲಿ

| Published : Oct 17 2025, 01:00 AM IST

ಯುವಜನೋತ್ಸವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ನಡೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನೋತ್ಸವ ನಗರ ಪ್ರದೇಶಕ್ಕೆ ಸೀಮಿತವಾಗುವುದಕ್ಕಿಂತ ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಹಾಯಕವಾಗುತ್ತವೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

- ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಸವಂತಪ್ಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯುವಜನೋತ್ಸವ ನಗರ ಪ್ರದೇಶಕ್ಕೆ ಸೀಮಿತವಾಗುವುದಕ್ಕಿಂತ ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಹಾಯಕವಾಗುತ್ತವೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾ ವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲಾ ವಿಜ್ಞಾನಾಸಕ್ತರ ಬಳಗದ ಆಶ್ರಯದಲ್ಲಿ ನಡೆದ ದಾವಣಗೆರೆ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಯುವಜನೋತ್ಸವ ಆಯೋಜಿಸುವುದರಿಂದ ಕೋಲಾಟ, ಬಯಲಾಟ, ಸಣ್ಣಾಟ, ದೊಡ್ಡಾಟ, ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಶಿಲ್ಪಕಲೆ ಸೇರಿದಂತೆ ಜಾನಪದ ಕಲೆಗಳು ಅನಾವರಣಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯುವಜನೋತ್ಸವ ಆಯೋಜಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವಜನರು ಮನಸ್ಸು ಮಾಡಿದರೆ, ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಪ್ರಸ್ತುತ ಮೊಬೈಲ್ ಗೀಳಿಗೆ ದಾಸರಾಗಿ ಸಾಧನೆಗಳು, ಜಾನಪದ ಕಲೆಗಳು, ಕಮರಿಹೋಗುತ್ತಿವೆ. ಮಕ್ಕಳು ಮತ್ತು ಯುವಜನತೆ ಪುಸಕ್ತಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಯುವಜನೋತ್ಸವ ಆಚರಿಸಲು ಸರ್ಕಾರ ಲಕ್ಷಾಂತರ ರು. ಅನುದಾನ ನೀಡುತ್ತದೆ. ಆದರೆ, ಈ ಹಿಂದೆ ನಡೆದಂತಹ ಯುವಜನೋತ್ಸವಗಳು ಯುವಜನತೆ ಒಳಗೊಳ್ಳುವ ಕಾರ್ಯಕ್ರಮವಾಗದೇ ಆಯೋಜಕರು ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆ ರೀತಿ ಆಗಬಾರದು. ಸರ್ಕಾರ ಯಾವ ಉದ್ದೇಶಕ್ಕೆ ನೀಡುತ್ತದೆಯೋ ಆ ಹಣ ಕಾರ್ಯಕ್ರಮಕ್ಕೆ ವಿನಿಯೋಗವಾದರೆ ಯುವಜನೋತ್ಸವ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕುಂಬಾರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಮಾಗನಹಳ್ಳಿ ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.

- - -

(ಕೋಟ್) ಯುವಜನೋತ್ಸವ ನಿರುತ್ಸಾಹಕರಾಗಿರುವ ಯುವಜನತೆಯನ್ನು ಬಡಿದೆಬ್ಬಿಸಬೇಕೇ ಹೊರತು, ಕಾಟಾಚಾರದ ಕಾರ್ಯಕ್ರಮವಾಗಿ ಸರ್ಕಾರದ ಹಣ ಪೋಲಾಗುವಂತೆ ಆಗಬಾರದು. ಈ ಹಿಂದೆ ಹಣ ಪೋಲು ಮಾಡುವಂತಹ ಕಾರ್ಯಕ್ರಮಗಳು ನಡೆದಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಗಮನಹರಿಸಬೇಕು.

- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.

- - -

-15ಕೆಡಿವಿಜಿ41:

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಇತರರು ಇದ್ದರು.