ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
2047ರಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದು, ಆ ಹೊತ್ತಿಗೆ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಉನ್ನತೀಕರಿಸುವ ಭವಿಷ್ಯದ ಹೊಣೆಗಾರಿಕೆ ದೇಶದ ಯುವಕರ ಮೇಲಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಶಾದ್ಯಂತ ಒಂದೇದಿನ 13 ಸಾವಿರ ಕೋಟಿ ರು. ಮೊತ್ತದ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಸಮಾರಂಭದ ಭಾಗವಾಗಿ ಇಲ್ಲಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವರ್ಚುವಲ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ದೇಶದ ಯುವಕರ ಶಕ್ತಿಯ ಮೇಲೆ ಪ್ರಧಾನಿ ಮೋದಿ ಅವರಿಗೆ ವಿಪರೀತ ವಿಶ್ವಾಸವಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮಂಡನೆಯಾದ ಮಧ್ಯಂತರ ಮುಂಗಡ ಪತ್ರದಲ್ಲಿ ಸಂಶೋಧನೆ ಮತ್ತು ಅನ್ವೇಷಣಾ ಕ್ಷೇತ್ರದಲ್ಲಿ ಯುವಕರು ತಮ್ಮ ಪ್ರತಿಭೆ ಅನಾವರಣಗೊಳಿಸಲು ಅನುಕೂಲ ಆಗುವಂತೆ ಒಂದು ಲಕ್ಷ ಕೋಟಿ ರು. ಅನುದಾನ ಮೀಸಲಿರಿಸಿದ್ದಾರೆ. ಹಾಗಾಗಿ, ಯುವಕರು ದೇಶಕ್ಕಾಗಿ ತಮ್ಮ ಪರಿಶ್ರಮದ ಮೂಲಕ ಸಕಾರಾತ್ಮಕ ಕೊಡುಗೆ ನೀಡಬೇಕೆಂದು ಕಿವಿಮಾತು ಹೇಳಿದರು.ಇಂದು ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಜಿಡಿಪಿ ಜಗತ್ತಿನ ಗಮನ ಸೆಳೆಯುವಂತಿದೆ. ಇದಕ್ಕೆ ಪೂರಕವಾಗಿ 2 ಲಕ್ಷ 60 ಸಾವಿರ ತಜ್ಞರು ಹಾಗೂ ಸಾರ್ವಜನಿಕ ಕ್ಷೇತ್ರದ ಪರಿಣತರಿಂದ ಸಲಹೆ ಪಡೆದು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದಾಗಿ, ದೇಶದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಗುಣಮಟ್ಟದ ಶಿಕ್ಷಣ ದೊರಕುವಂತಾಗಿದೆ. ಇದೇ ಮಾನದಂಡದ ಮೇಲೆ ದೇಶ 2047ರ ಹೊತ್ತಿಗೆ ಭಾರತದ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಅಪಾರ ಜ್ಞಾನ ಬೋಧಿಸಲಾಗುತ್ತಿತ್ತು. ಭಾರತೀಯ ವಿಜ್ಞಾನ, ಸಂಸ್ಕೃತಿ, ಅಧ್ಯಾತ್ಮ, ಯೋಗ ಹಾಗೂ ಗಣಿತಶಾಸ್ತ್ರ, ಚಿಕಿತ್ಸಾ ಕ್ಷೇತ್ರದಲ್ಲಿ ಭಾರತದ ಕೊಡುಗೆ ಇತಿಹಾಸದಲ್ಲಿ ಮಹೋನ್ನತ ಸ್ಥಿತಿಯಲ್ಲಿತ್ತು. ಹಾಗಾಗಿ, ಅಂದು ವಿಶ್ವಗುರು ಆಗಿದ್ದ ಭಾರತ ಮುಂದಿನ 25 ವರ್ಷಗಳಲ್ಲಿ ಮತ್ತೊಮ್ಮೆ ವಿಶ್ವಗುರು ಆಗಿ ಹೊರಹೊಮ್ಮಲಿದೆ ಎಂದು ಸಚಿವ ಖೂಬಾ ನುಡಿದರು. ನಮ್ಮ ಸಂಸ್ಕೃತ ಶ್ಲೋಕಗಳಲ್ಲಿ ಭೂಮಿಯ ಆಕಾರ, ವೈಮಾನಿಕ ತಂತ್ರಜ್ಞಾನದ ಉಲ್ಲೇಖವಿದೆ. ಚಂದ್ರಯಾನ-3 ಯಶಸ್ವೀ ಉಡಾವಣೆ ಬಳಿಕ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಸ್ವತಃ ಅಂದಿನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸದ್ದನ್ನು ಸಚಿವ ಖೂಬಾ ಉಲ್ಲೇಖಿಸಿದರು. ಕಳೆದ 50 ವರ್ಷಗಳಲ್ಲಿ ದೇಶ ಕಂಡ ಅಭಿವೃದ್ಧಿಗೆ ಹೋಲಿಸಿದರೆ, ಕೇವಲ 10 ವರ್ಷಗಳ ತಮ್ಮ ಕಾರ್ಯಾವಧಿಯಲ್ಲಿ ಪ್ರಧಾನಿ ಮೋದಿ, ದೇಶವನ್ನು ದುಪ್ಪಟ್ಟು ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿದ್ದಾರೆ ಎಂದರು.ಸಿಯುಕೆ ಉಪಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿದರು. ಕುಲಸಚಿವ ಆರ್.ಆರ್. ಬಿರಾದಾರ್ ವೇದಿಕೆಯಲಿದ್ದರು. ಡಾ. ಅಂಕಿತಾ ಸಪ್ತಪತಿ ಹಾಗೂ ಡಾ.ಸ್ವಪ್ನಿಲ್ ಚಾಪೆಕರ್ ಕಾರ್ಯಕ್ರಮ ನಿರ್ವಹಿಸಿದರು.
ದೇಶ ಒಗ್ಗೂಡಿಸಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಲವು ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಿವೆ. ಕೆಲವು ಸಂಘಟನೆಗಳು ದೇಶದ ಜನರನ್ನು ವಿಭಜಿಸುವ ಯತ್ನ ನಡೆಸುತ್ತಿವೆ. ಇಂತಹ ಆಘಾತಕಾರಿ ಯತ್ನದ ಬದಲು ದೇಶ ಒಗ್ಗೂಡಿಸುವ ಕೆಲಸ ಮಾಡಬೇಕೆಂದು ಅವರು ಸಂಘಟನೆಗಳ ಹೆಸರು ಉಲ್ಲೇಖಿಸದೆ ಸಲಹೆ ನೀಡಿದರು.ನಾಲ್ಕು ಕಟ್ಟಡಗಳ ಲೋಕಾರ್ಪಣೆ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದಲ್ಲಿ 84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ನೂತನ ಕಟ್ಟಡಗಳನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೋಡ್ ಮೂಲಕ ಲೋಕಾರ್ಪಣೆಗೊಳಿಸಿದರು.
ಇಂಜಿನಿಯರಿಂಗ್ ಲ್ಯಾಬ್, ಇನ್ ಕ್ಯೂಬೇಷನ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಕ್ಲಾಸ್ ರೂಮ್ ಕಾಂಪ್ಲೆಕ್ಸ್, ಇನ್ ಸ್ಟ್ರೂಮೆಂಟೇಷನ್ ಸೆಂಟರ್ ಕಟ್ಟಡಗಳು ಈ ವೇಳೆ ಲೋಕಾರ್ಪಣೆಗೊಂಡವು