ಯುವಕರ ಕಾರ್ಯ ಶ್ಲಾಘನೀಯ: ಶ್ರೀಗಳು

| Published : Jan 03 2025, 12:33 AM IST

ಸಾರಾಂಶ

ಸಂಘ ರಚನೆ ಮಾಡಿದವರು ಯುವಕರೇ ಇದ್ದು ನಾಲ್ಕಾರು ಯುವಕರಿಗೆ ಉದ್ಯೋಗ ನೀಡಿದ್ದು ಮೆಚ್ಚುಗೆಗೆ ಪಾತ್ರ

ಗದಗ: ಸರ್ಕಾರಿ ಉದ್ಯೋಗವೇ ಬೇಕು ಎಂದು ನಿರುದ್ಯೋಗಿಗಳಾಗುವ ಯುವಕರ ನಡುವೆ ಸೌಹಾರ್ದ ಸಹಕಾರಿ ಸಂಘ ಸ್ಥಾಪಿಸಿ ಉದ್ಯೋಗ ಕಂಡುಕೊಂಡ ಯುವಕರ ಕಾರ್ಯ ಶ್ಲಾಘನೀಯ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಸ್ವಾಮಿಗಳು ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಲಕ್ಷ್ಮೀ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಘದ 2025ರ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು.

ಈ ಸಂಘ ರಚನೆ ಮಾಡಿದವರು ಯುವಕರೇ ಇದ್ದು ನಾಲ್ಕಾರು ಯುವಕರಿಗೆ ಉದ್ಯೋಗ ನೀಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ದಿಸೆಯಲ್ಲಿ ಗ್ರಾಮಸ್ಥರು ತಾವು ದುಡಿದ ಹಣ ದುಶ್ಚಟಕ್ಕೆ ವಿನಿಯೋಗಿಸದೇ ಕೂಡಿಟ್ಟ ಹಣವನ್ನು ಇಂತಹ ಸಂಘದಲ್ಲಿ ಠೇವಣಿ ಇಟ್ಟು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಲಿಂಗ ಪೂಜೆ ಮಾಡಿದ ಸ್ವಾಮಿಗಳ ಕೈ ಎಷ್ಟು ಪವಿತ್ರವೋ ನ್ಯಾಯ, ನೀತಿ, ಧರ್ಮದಿಂದ ಈ ಸಂಘ ಮುನ್ನೆಡೆಸಿಕೊಂಡು ಪವಿತ್ರವಾಗಬೇಕು. ಸಾಲ ಕೊಡುವವರು ಮತ್ತು ತೆಗೆದುಕೊಳ್ಳುವವರು ಜವಾಬ್ದಾರಿಯುತವಾಗಿ ವ್ಯವಹರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸಂಘವು ಸಾಲ ನೀಡುವಲ್ಲಿ ಕಾನೂನಿನಡಿಯಲ್ಲಿ ಎಲ್ಲರನ್ನು ಸಮಾನವಾಗಿ ಕಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕಲಿ ಎಂದರು.

ನಿವೃತ್ತ ಯೋಧ ದತ್ತಣ್ಣ ಜೋಶಿ ಮಾತನಾಡಿ, ಸರ್ವರ ಪಾಲುಗಾರಿಕೆಯಿಂದ ಈ ಸಂಘವು ರಚನೆಯಾಗಿದ್ದು, ಇಲ್ಲಿ ಕೇವಲ ಹಣಕಾಸು ವ್ಯವಹಾರಕ್ಕಿಂತ ಆತ್ಮಿಯತೇ ಮತ್ತು ಸದ್ಭಳಕೆಗೆ ಪ್ರಾಮುಖ್ಯತೆ ಇರಲಿ ಬಂದ ಲಾಭದಲ್ಲಿ ಸಾಮಾಜಿಕ ಸೇವೆಗೂ ಸಹ ವಿನಿಯೋಗಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಉಚಿತವಾಗಿ ನೂತನ ವರ್ಷದ ದಿನದರ್ಶಿಕೆ ಹೊರ ತಂದಿದ್ದು ಸಂತಸ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಸವರಾಜ ಮುಳ್ಳಾಳ ಮಾತನಾಡಿದರು. ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎನ್. ಇನಾಮದಾರ, ಗ್ರಾಪಂ ಸದಸ್ಯ ಸಿದ್ದು ಮುಳಗುಂದ, ಮಹಾಂತೇಶ ಕಮತರ, ವೀರಯ್ಯ ನಡುವಿನಮಠ, ಚನ್ನಪ್ಪ ಹುಬ್ಬಳ್ಳಿ, ಕಳಕಪ್ಪ ಟೆಂಗಿನಕಾಯಿ, ನಿಂಗಪ್ಪ ಗುಂಜಳ, ಐ.ಎಸ್. ಮಟ್ಟಿ, ಪಿ.ಡಿ.ಒ ರಾಜಕುಮಾರ ಭಜಂತ್ರಿ, ಗ್ರಾಪಂ ಕಾರ್ಯದರ್ಶಿ ಪ್ರದೀಪ ನವಲಗುಂದ, ತುಕಾರಾಮ ಹುಲಗಣ್ಣವರ, ವೀರಣ್ಣ ಅರಹುಣಶಿ, ವಿನಾಯಕ ಡಿಗ್ಗಾವಿ ಉಪಸ್ಥಿತರಿದ್ದರು. ಪ್ರವೀಣ ಕಲಾಲ ಸ್ವಾಗತಿಸಿದರು. ವಿರುಪಾಕ್ಷಪ್ಪ ಬೆಟಗೇರಿ ನಿರೂಪಿಸಿದರು. ಬಸವರಾಜ ಕವಲೂರ ವಂದಿಸಿದರು.