ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸಂವಿಧಾನ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಂಗಳವಾರ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ತಾಲೂಕು ಆಡಳಿತದಿಂದ ಮಾಲಾರ್ಪಣೆ ಸಲ್ಲಿಸಿ, ನೆರೆದಿದ್ದವರಿಗೆ ಸಂವಿಧಾನದ ಪೀಠಿಕೆ ಬೋಧಿಸಲಾಯಿತು.ನಂತರ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಭಾವೈಕ್ಯತೆ, ಸಹೋದರತೆ, ಸಮಾನತೆ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಡಾ.ಅಂಬೇಡ್ಕರ್‌ರವರು ರಚಿಸಿದ ವಿಶ್ವಕ್ಕೆ ಮಾದರಿ ಹಾಗೂ ಉತ್ಕೃಷ್ಟವಾದ ಸಂವಿಧಾನ ನಮ್ಮದು. ಭಾರತಕ್ಕೆ ೧೯೪೯ ರ ನವೆಂಬರ್ ೨೬ ರಂದು ಭಾರತದ ಸಂವಿಧಾನ ದಿನದಂದು ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದ ಕೀರ್ತಿ ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ. ಸಂವಿದಾನವನ್ನು ಡಾ.ಅಂಬೇಡ್ಕರ್‌ರವರು ದೇಶಕ್ಕೆ ಸಮರ್ಪಿಸಿ ೭೫ ವರ್ಷವಾಗಿದ್ದು, ಈ ದಿನವನ್ನು ದೇಶವೇ ಆಚರಿಸುತ್ತಿದೆ. ನಮ್ಮ ಸಂವಿಧಾನದ ಆಶಯಗಳು ಈಡೇರಬೇಕು, ಎಲ್ಲರಿಗೂ ತಿಳಿಸಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ೨೦೦೯ರಿಂದ ಸಂವಿಧಾನ ಕಟ್ಟುನಿಟ್ಟಾಗಿ ಪಾಲನೆಯಾಗಬೇಕೆಂದು ಅಂಬೇಡ್ಕರ್‌ರವರ ಬೃಹತ್ ಪ್ರತಿಮೆ ನಿರ್ಮಿಸಿ ಕೊಡುಗೆ ನೀಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥೈಸಿ ಸಂವಿಧಾನದ ತತ್ವಗಳನ್ನು ಮೈಗೂಡಿಸಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನ ವಿಧಾನವಾಗಿಸಿಕೊಳ್ಳಬೇಕು. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವು ಅಧಿಕಾರ, ಹಕ್ಕುಗಳನ್ನು ನೀಡಿದ್ದರಿಂದಲೇ ಇಂದು ಪ್ರತಿಯೊಬ್ಬರೂ ಉತ್ತಮ ಬದುಕು ಕಟ್ಟಿಕೊಂಡಿದ್ದೇವೆ. ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಜತೆಗೆ ಸಂವಿಧಾನದ ಆಶಯದಂತೆ ಮುಂದೆ ಸಾಗಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಬಾಬಾ ಸಾಹೇಬ್ ಡಾ.ಅಂಬೇಡ್ಕರ್‌ರವರು ಸಂವಿಧಾನ ರಚಿಸಿ ಅಂಗಿಕರಿಸಿ ೭೫ ವರ್ಷ ತುಂಬಿದೆ. ಸಂವಿಧಾನದ ಬಗ್ಗೆ ನಾವು ಅಲ್ಪ ಸ್ವಲ್ಪ ತಿಳಿದಿದ್ದೇವೆ. ಅಂಬೇಡ್ಕರ್ ಸಾಹೇಬರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದ್ದರಿಂದಲೇ ನಾವು ಇಂದು ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಗೌರವಿಸಿ, ಕಾನೂನುಗಳನ್ನು ಪಾಲಿಸಿ ಮುನ್ನಡೆಯಬೇಕು ಎಂದರು.ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಸಂವಿಧಾನ ಅಂಗಿಕಾರವಾದ ದಿನವನ್ನು ಆಚರಿಸಿದರೆ ಸಾಲದು. ಇದಕ್ಕೆ ಕಾರಣರಾದ ಡಾ.ಅಂಬೇಡ್ಕರ್‌ರವರನ್ನು ಪ್ರತಿದಿನ ನೆನಪಿಸಿಕೊಳ್ಳಬೇಕು. ಜತೆಗೆ ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಅಂಶಗಳನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಂವಿಧಾನದ ಆಶಯಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ದಲಿತ ಮುಖಂಡರಾದ ಮರಿಯಪ್ಪ, ಪರ್ವತಯ್ಯ, ದಸಂಸ(ಅಂಬೇಡ್ಕರ್ ವಾದ) ಮುಖಂಡ ಬಿ.ಎಲ್.ಲಕ್ಷ್ಮಣ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಸಿಬ್ಬಂದಿ ನಾಗೆಶ್, ಯೋಗಯ್ಯ, ಅಶ್ವಿನಿ, ಅಭಿ, ಲಕ್ಷ್ಮಿ, ಆಶಾ ಸೇರಿದಂತೆ ಇತರರಿದ್ದರು.