ಸಾರಾಂಶ
ಗದಗ: ಜಾಗತಿಕವಾಗಿ ಯುವ ಜನರು ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಯೌವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಯುವಕರು ಸದೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸುವತ್ತ ಗಮನ ನೀಡಬೇಕು ಎಂದು ಡಾ. ಅರುಂಧತಿ ಕೆ. ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಸೋಮವಾರದಂದು ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾನವನ್ನು ಕೈಗೊಂಡು ಸದೃಢವಾದ ದೇಶ ಕಟ್ಟುವಲ್ಲಿ ಕೈ ಜೋಡಿಸಬೇಕು, ರಕ್ತದಾನ ಮಾಡಲು ಯುವ ಸಮುದಾಯ ಮುಂದಾಗಬೇಕು ಎಂದರು.
ಆರೋಗ್ಯ ಇಲಾಖೆಯ ಬಿ.ಬಿ. ಲಾಳಗಟ್ಟಿ ಮಾತನಾಡಿ, ರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಎಚ್.ಐ.ವಿ. ಏಡ್ಸ್ ಕುರಿತು ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ನವೀನಕುಮಾರ ಕೆ.ಎಸ್.ಎಸ್. ಕಾಲೇಜ್ ಹಾಗೂ ಗಿರಿಮಲ್ಲಿಕಾ ಮಹಾಂತ ಎ.ಎಸ್.ಎಸ್. ಕಾಲೇಜ್ ಪ್ರಥಮ, ನಿರೂಪದಿ ಕೆ.ಎಸ್.ಎಸ್. ಕಾಲೇಜ್ ಹಾಗೂ ಮೇಘಾ ಪಾಟೀಲ ಎ.ಎಸ್.ಎಸ್. ಕಾಲೇಜ್ ದ್ವಿತೀಯ, ನವೀನ ಬಡಿಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಶಿರಹಟ್ಟಿ ತೃತೀಯ ಸ್ಥಾನ ಪಡೆದಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.ಕಾಲೇಜಿನ ಪ್ರಾಚಾರ್ಯ ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಎ.ಎಸ್.ಎಸ್. ಕಾಲೇಜಿನ ಪ್ರಾಧ್ಯಾಪಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಎ.ಎಸ್.ಎಸ್. ಕಾಲೇಜಿನ ಹಿರಿಯ ಎನ್.ಎಸ್.ಎಸ್. ಸೇವಕರು ಹಾಜರಿದ್ದರು. ಬಾಹುಬಲಿ ಜೈನರ ಸ್ವಾಗತಿಸಿದರು. ಮೇಘಾ ಪಾಟೀಲ ನಿರೂಪಿಸಿದರು. ಗಿರಿಮಲ್ಲಿಕಾ ವಂದಿಸಿದರು.