ಸಾರಾಂಶ
-ಇಗ್ಗಲೂರಲ್ಲಿ ಸ್ವಾಸ್ಥ್ಯ ಸಂಕಲ್ಪ, ಮಾದಕ ವಸ್ತು ವಿರೋಧಿ ದಿನ
-ಆರೋಗ್ಯಪೂರ್ಣ ಚಟುವಟಿಕೆಗಳಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿಕನ್ನಡಪ್ರಭ ವಾರ್ತೆ ಚನ್ನಪಟ್ಟಣಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಪೂರ್ಣ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿಚಾರವಾದಿ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ತಿಳಿಸಿದರು.
ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಗಾಲ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ, ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಬೆನ್ನೆಲುಬಾಗಿರುವ ಯುವಕರು ದಾರಿತಪ್ಪುತ್ತಿರುವುದು ದುರಂತದ ಸಂಗತಿ. ಹದಿಹರೆಯ ತುಂಬಾ ಅಪಾಯಕಾರಿ ವಯಸ್ಸು. ಈ ವಯಸ್ಸಿನಲ್ಲಿ ಮಾದಕ ವ್ಯಸನಕ್ಕೆ ಬಿದ್ದವರ ಸಂಖ್ಯೆ ಅಪಾರ. ಇಂತಹ ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಮತ್ತೆ ಹೊರಬರುವುದು ಕಷ್ಟ. ಆದ್ದರಿಂದ ಯುವಜನತೆ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆಸಕ್ತಿ ವಹಿಸಬೇಕು ಎಂದು ಹೇಳಿದರು.ಮದ್ಯಪಾನ, ಮಾದಕ ವಸ್ತುಗಳು ಮನುಷ್ಯನ ದೇಹವನ್ನು ಜಿಗುಪ್ಸೆಗೆ ತಳ್ಳುತ್ತವೆ, ಮಾದಕ ವಸ್ತುಗಳ ದಾಸರಾದವರಿಗೆ ಆತ್ಮಹತ್ಯೆ, ಅಪಘಾತ, ಅಕಾಲಿಕ ಮರಣ ಕಟ್ಟಿಟ್ಟ ಬುತ್ತಿಯಾಗಿದೆ. ಯಾವ ಜಾತಿಯಲ್ಲೂ, ಧರ್ಮದಲ್ಲೂ ಮದ್ಯಪಾನ, ಮಾದಕ ವಸ್ತುಗಳ ಬಳಕೆ ಮಾಡುವಂತೆ ಹೇಳುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸ್ವಾಸ್ಥ್ಯ ಸಂಕಲ್ಪ ಮಾಡಿ ಹಾಗೂ ಉತ್ತಮ ಆಹಾರ, ಹವ್ಯಾಸ ಬೆಳೆಸಿಕೊಂಡು ಆರೋಗ್ಯಕರ ಹೊಸನಾಡನ್ನು ನವಚೈತನ್ಯದಿಂದ ಕಟ್ಟಬೇಕು ಎಂದು ಕರೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚನ್ನಪಟ್ಟಣ ವಲಯದ ಯೋಜನಾಧಿಕಾರಿ ರೇಷ್ಮಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಪ್ರಾರಂಭಕ್ಕೆ ತಮಾಷೆಗಾಗಿ ಮಾದಕ ವಸ್ತುಗಳಿಗೆ ಮೋಹಿತರಾಗಿ ನಂತರ ಅದರೊಳಗೆ ಜಾರಿ ಬಿಡುತ್ತಾರೆ. ಇದರಿಂದ ಅಂತಹವರ ಕುಟುಂಬ ಬೀದಿಪಾಲಾಗುವುದರ ಜೊತೆಗೆ ಜನರ ನಗೆಪಾಟಲಿಗೆ ಬಲಿಯಾಗುತ್ತಾರೆ ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳಾದ ನೀವುಗಳು ಇಪ್ಪತ್ತನೆಯ ವಯಸ್ಸಿನ ತನಕ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮಾದಕ ವಸ್ತುಗಳಿಂದ ದೂರವಿದ್ದಲ್ಲಿ ಮುಂದಿನ ನಿಮ್ಮ ಜೀವನ ಪರಿಪಕ್ವವಾಗಲಿದೆ. ಆದ್ದರಿಂದ ಮೊದಲು ನಿಮ್ಮ ಮನೆ, ಕುಟುಂಬ, ಗ್ರಾಮಗಳಿಂದ ಮಾದಕ ವಸ್ತುಗಳ ನಿರ್ಮೂಲನೆ ಮಾಡಬೇಕು. ಆಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ .ಇದಕ್ಕಾಗಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.
ಪ್ರಾಂಶುಪಾಲ ರವಿಚಂದ್ರ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ದುಶ್ಚಟಗಳಿಗೆ ಬಲಿಯಾಗಿ ಹಣ ಕೊಟ್ಟು ಆನಾರೋಗ್ಯವನ್ನು ಪಡೆದುಕೊಳ್ಳುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು, ಸಾರ್ವಜನಿಕರಿಗೂ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಗಾಲ ವಲಯದ ಮೇಲ್ವಿಚಾರಕಿ ಭಾಗ್ಯ ಮಾತನಾಡಿದರು. ಇಗ್ಗಲೂರು ವಲಯದ ಒಕ್ಕೂಟ ಅಧ್ಯಕ್ಷ ನಾಗರಾಜು, ಸೇವಾ ಪ್ರತಿನಿಧಿ ಛಾಯಾಕುಮಾರಿ, ಉಪನ್ಯಾಸಕರಾದ ಚಂದ್ರಕಲಾ, ಅಂಬುಜಾ, ಮಹದೇವಸ್ವಾಮಿ, ಶಿವನಂಜೇಗೌಡ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವಿಧ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು ಸಮಾಜದ ಸತ್ಪ್ರಜೆಗಳಾಗಿ ಬಾಳುವೆ ಮಾಡುತ್ತೇವೆಂದು ಗಣ್ಯರ ಎದುರು ಪ್ರಮಾಣ ಸ್ವೀಕರಿಸಿದರು.
ಹದಿಹರೆಯ ತುಂಬಾ ಅಪಾಯಕಾರಿ ವಯಸ್ಸು. ಯುವಕರು ಈ ವಯಸಲ್ಲಿ ಆರೋಗ್ಯ ಪೂರ್ಣ ಚಟುವಟಿಕೆಗಳಲ್ಲಿ ತೊಡಗಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಅದು ವೈಯಕ್ತಿಕ ಬದುಕಿಗೆ, ಕುಟುಂಬಕ್ಕೆ, ಸಮಾಜಕ್ಕೂ ಒಳ್ಳೆಯದು.
-ಯೋಗೇಶ್ ಚಕ್ಕೆರೆ, ಶಿಕ್ಷಣ ಸಂಯೋಜಕ