ಸಾರಾಂಶ
ಹಾನಗಲ್ಲ: ಗೋಕುಲ ಯುವಜನರ ಸಂಘದ ಯುವಕರು ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಬಿಡಾರದಲ್ಲಿ ಕೆಸರಿನಲ್ಲಿ ಕಬಡ್ಡಿ ಆಡುವ ಮೂಲಕ ಮಳೆಗಾಲದ ಹೊಸ ಅನುಭವಕ್ಕೆ ಸಾಕ್ಷಿಯಾದರು.ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಬಿಡಾರದಲ್ಲಿ ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದ ಸಹಯೋಗದಲ್ಲಿ ಗೋಕುಲ ಯುವಜನರ ಸಂಘ ಆಯೋಜಿಸಿದ ಕಬಡ್ಡಿ ಸ್ಪರ್ಧೆಗೆ ಗ್ರಾಮದ ಗೊಲ್ಲರ ಸಮುದಾಯದ ಮುಖಂಡರಾದ ಮಲ್ಲಪ್ಪ ಗೊಲ್ಲರ ಹಾಗೂ ಬಾಬಣ್ಣ ಗೊಲ್ಲರ ಚಾಲನೆ ನೀಡಿ ಮಾತನಾಡಿ, ಯುವಜನರು ಕ್ರೀಡಾ ಮನೋಭಾವ ಹೊಂದಿದವರಾಗಿರಬೇಕು. ಪ್ರಕೃತಿಯ ನಡುವೆ ಬದುಕುವ ನಮಗೆ ಕಾಲ ಮಾನಕ್ಕೆ ತಕ್ಕಂತೆ ನಮ್ಮ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳಬೇಕು. ನಮ್ಮ ಕ್ರಿಯಾಶೀಲತೆಗೆ ಎಂದೂ ಕುಂದಾಗಬಾರದು. ನಮ್ಮ ಯುವಕರಲ್ಲಿ ಧೈರ್ಯ ಸಾಹಸದ ಮನೋಭಾವ ಕಡಿಮೆಯಾಗುತ್ತಿದೆ. ಶಾರೀರಿಕ ಮಾನಸಿಕ ಶಕ್ತಿಗೆ ಸಹಕಾರಿಯಾಗುವ ಕ್ರೀಡೆಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳಾಗಬೇಕು ಎಂದರು.ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಜೇಸಸ್ ಮಾತನಾಡಿ, ಯುವ ಪೀಳಿಗೆಯೇ ಈ ದೇಶದ ಶಕ್ತಿ. ನಾಡಿನ ಅಭಿವೃದ್ಧಿಯಲ್ಲಿಯೂ ಯುವಕದೆ ದೊಡ್ಡ ಪಾಲು. ದೇಶದ ಹಾಗೂ ನಮ್ಮ ಅಭಿವೃದ್ಧಿಗೆ ಒಳ್ಳೆಯ ಕನಸು ಕಟ್ಟಿಕೊಂಡು ಮುಂದಡಿ ಇಡಬೇಕು. ಕ್ರಿಯಾಶೀಲತೆಯೇ ನಿಜವಾದ ಶಕ್ತಿ. ಇದಕ್ಕೆ ಕ್ರಿಡಾ ಚಟುವಟಿಕೆಗಳು ಸಹಕಾರಿ. ಪರಸ್ಪರ ಹೊಂದಾಣಿಕೆಯನ್ನು ಕಲಿಸುವ ಸಾಮೂಹಿಕ ಆಟಗಳು ಎಲ್ಲ ಕಾಲದಲ್ಲಿಯೂ ಇವೆ. ಘನತೆಯ ಜೀವನಕ್ಕೂ ಇದು ಸಹಕಾರಿ ಎಂದರು.ಲಕ್ಷ್ಮೀಪುರ ಬಿಡಾರ ಸಂಘ ಪ್ರಥಮ, ಶೃಂಗೇರಿ ತಂಡದ ಯುವಕರು ದ್ವಿತೀಯ ಸ್ಥಾನ ಪಡೆದರು. ಲಕ್ಷ್ಮೀಪುರ ಬಿಡಾರ, ಲಕ್ಷ್ಮೀಪುರ ಗ್ರಾಮ, ಶೃಂಗೇರಿ, ಕತ್ರಿಕೊಪ್ಪ, ಬದನಗೋಡು ಸೇರಿದಂತೆ ವಿವಿಧ ಗ್ರಾಮಗಳ ೭೦ಕ್ಕೂ ಅಧಿಕ ಯುವಕರು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಲೋಯಲಾ ವಿಕಾಸ ಕೇಂದ್ರದ ಫಕ್ಕೀರೇಶ ಗೌಡಳ್ಳಿ ಇದ್ದರು.