ಸಾರಾಂಶ
ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಯ ಹಕ್ಕನ್ನೇ ಸರ್ಕಾರ ಮೊಟಕುಗೊಳಿಸುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಯಲ್ಲಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಅಭಿವೃದ್ಧಿ ಶೂನ್ಯವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಸರ್ಕಾರ ನೈತಿಕತೆ ಕಳೆದುಕೊಂಡಿದೆ. ಅದರಲ್ಲೂ ಸಂವಿಧಾನದ ಉಲ್ಲೇಖದಂತೆ ಇರುವ ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಯ ಹಕ್ಕನ್ನೇ ಸರ್ಕಾರ ಮೊಟಕುಗೊಳಿಸುತ್ತಿದೆ.ಸದಾ ಮೌಲ್ಯಾಧಾರಿತ ಮಾತನಾಡುವ ಸಿದ್ದರಾಮಯ್ಯ ತಮ್ಮ ಇಡೀ ಮಂತ್ರಿಮಂಡಳವನ್ನೇ ಭ್ರಷ್ಟಾಚಾರದಿಂದ ರಕ್ಷಿಸಲು ಸಿಬಿಐ ಬಾರದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇಡೀ ದೇಶವೇ ರಾಜ್ಯದ ಸ್ಥಿತಿಯನ್ನು ನೋಡಿ ತಲೆತಗ್ಗಿಸುವಂತೆ ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎ ಆಡಳಿತದ ಅವಧಿಯಲ್ಲಿ ೯ ರಾಜ್ಯಗಳಲ್ಲೂ ಇದೇ ರೀತಿ ಸಿಬಿಐ ನೇರವಾಗಿ ಬಾರದಂತೆ ಮಾಡಿದೆ. ಅದನ್ನೇ ನಮ್ಮ ರಾಜ್ಯ ಸರ್ಕಾರ ಮುಂದುವರಿಸಿದೆ. ರಾಜ್ಯಪಾಲರ ವಿರುದ್ಧವೇ ಹೋರಾಟ ನಡೆಸುವ ಅತ್ಯಂತ ಕೀಳುಮಟ್ಟದ ಅಪ್ರಬುದ್ಧ ರಾಜಕಾರಣದಲ್ಲಿ ತೊಡಗಿದೆ ಎಂದರು.ಮುಡಾ ಹಗರಣದಲ್ಲಿ ಕೇವಲ ೧೪ ಸೈಟ್ ವಿಚಾರವೇ ಅಲ್ಲ. ಅಲ್ಲಿ ₹೫೦೦೦ ಕೋಟಿಗೂ ಹೆಚ್ಚಿನ ಹಗರಣ ನಡೆದಿದೆ. ಅದು ತನಿಖೆಯಾಗಬೇಕಾದರೆ ಸಿಬಿಐ ಪ್ರವೇಶವಾಗಲೇಬೇಕು. ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಹಿಡಿತದಲ್ಲೇ ಇರುವುದರಿಂದ ಈ ಎಲ್ಲ ಅವ್ಯವಹಾರ ಮುಚ್ಚುವ ಉದ್ದೇಶದಿಂದಲೇ ಹಿಂದಿನ ಅವಧಿಯಲ್ಲಿ ಲೋಕಾಯುಕ್ತ ಮುಚ್ಚಿ, ಎಸ್ಐಟಿ ಸ್ಥಾಪಿಸಿದ್ದರು. ಹೀಗೆ ಯಾವ ರೀತಿಯಲ್ಲಿ ಹಗರಣ ಮುಚ್ಚಿಕೊಳ್ಳಲು ಸಾಧ್ಯವೋ ಆ ಎಲ್ಲ ತಂತ್ರಗಾರಿಕೆಯನ್ನು ಸಿದ್ದರಾಮಯ್ಯ ತಂಡ ತೊಡಗಿದೆ ಎಂದರು.
ಹಿರಿಯ ಮುಖಂಡರಾದ ಉಮೇಶ ಭಾಗ್ವತ, ಗಣಪತಿ ಮಾನಿಗದ್ದೆ, ಗೋಪಾಲಕೃಷ್ಣ ಗಾಂವ್ಕರ, ಪ್ರಸಾದ ಹೆಗಡೆ, ಕೆ.ಟಿ. ಹೆಗಡೆ, ಬಾಬಾಸಾಬ ಅಲನ್ ಉಪಸ್ಥಿತರಿದ್ದರು.