ಸಾರಾಂಶ
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಜೆಡಿಎಸ್- ಬಿಜೆಪಿ ಮೈತ್ರಿ ಕೂಟಕ್ಕೆ ಪ್ರತಿಷ್ಠೆಯ ವಿಷಯವಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು. ಈ ವಿಷಯದಲ್ಲಿ ಜಾಗರೂಕತೆವಹಿಸಿ ಗೆಲ್ಲುವಂತಹ ಅಭ್ಯರ್ಥಿಗಳನ್ನೇ ಗುರುತಿಸಿ ಜಿಲ್ಲಾ ಮಟ್ಟಕ್ಕೆ ಹಾಗೂ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುವುದು.
ಕನ್ನಡಪ್ರಭ ವಾರ್ತೆ ಟೇಕಲ್
ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗೆ ಸಜ್ಜಾಗಲು ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಭೆ ಕರೆದು ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಸರ್ವಸಮ್ಮತದಿಂದ ಸೂಚಿಸುವಂತೆ ಮುಖಂಡರಿಗೆ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡರು ತಿಳಿಸಿದರು.ಅರ್ಹರನ್ನು ಕಣಕ್ಕಿಸಿ
ಅವರು ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್.ಯಲ್ಲಪ್ಪನವರ ನಿವಾಸದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿ, ಜಿಪಂ, ತಾಪಂ ಚುನಾವಣೆ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು. ಈ ವಿಷಯದಲ್ಲಿ ಜಾಗರೂಕತೆವಹಿಸಿ ಗೆಲ್ಲುವಂತಹ ಅಭ್ಯರ್ಥಿಗಳನ್ನೇ ಗುರುತಿಸಿ ಜಿಲ್ಲಾ ಮಟ್ಟಕ್ಕೆ ಹಾಗೂ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುವುದು ಎಂದರು.ಇದರ ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪರವಾಗಿ ಮತ ಚಲಾಯಿಸಿ, ನಂತರ ಬರುವ ಸ್ಥಳೀಯ ಸಂಸ್ಥೆ, ಸಹಕಾರ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮತ್ತೊಂದು ಪಕ್ಷದವರ ಕಡೆ ಒಲವು ತೋರಿ ಅವರ ಪರವಾಗಿ ಜಯಕಾರ ಹೇಳುವಂತಹ ಪ್ರವೃತ್ತಿ ಬಿಡಬೇಕು. ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಪಕ್ಷ ನಿಷ್ಠೆ ಮುಖ್ಯ ಎಂದರು.
ಮತ ಮರು ಎಣಿಕೆ ಪ್ರಕರಣಕಳೆದ ವಿಧಾನಸಭಾ ಚುನಾವಣೆಯಲ್ಲಿನ ಎಣಿಕೆ ಬಗ್ಗೆ ನ್ಯಾಯಾಲಯದ ಅಂಗಳದಲ್ಲಿದೆ. ಈ ತೀರ್ಪು ಮುಂದಿನ ದಿನಗಳಲ್ಲಿ ನನಗೆ ಶುಭ ಸೂಚನೆಯ ಅಂಶ ಕಂಡು ಬರುತ್ತಿದೆ. ಮಾಲೂರು ತಾಲೂಕಿನ ಜನತೆಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಲಿದೆ. ತಾವು ಮಾಲೂರು ಪಟ್ಟಣದಲ್ಲಿ ಮನೆ ಮಾಡುವ ಬದಲು ಹಳ್ಳಿಗಳಿಗೆ ತೆರಳಿ ಕಾರ್ಯಕರ್ತರ ಯೋಗಕ್ಷೇಮ ಮತ್ತು ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ತಾ.ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ತಾ.ಜೆಡಿಎಸ್ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಟಿಪಿಎಸ್ ಮಾಜಿ ಸದಸ್ಯರಾದ ಕೆ.ಎಂ.ರಾಮಕೃಷ್ಣಪ್ಪ, ಸೊಣ್ಣಪ್ಪ, ಗ್ರಾ.ಪಂ.ಅಧ್ಯಕ್ಷರಾದ ಎಸ್.ಆರ್.ಯಲ್ಲಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಆರ್.ನಾರಾಯಣಸ್ವಾಮಿ, ಗ್ರಾಪಂ.ಸದಸ್ಯರಾದ ಕೆ.ಎಂ.ನಾರಾಯಣಸ್ವಾಮಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ನಂಜುಂಡಪ್ಪ, ಮಡಿವಾಳ ಚಂದ್ರು, ಮುಖಂಡ ಬಿ.ಜಿ.ಮುನಿಶಾಮಿಗೌಡ, ಗೋಪಾಲಪ್ಪ ಇನ್ನೂ ಮುಂತಾದವರು ಹಾಜರಿದ್ದರು.