ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಗುರುವಾರ ತಾಲೂಕಿನಲ್ಲಿ ವಿವಿಧ ಗ್ರಾಪಂ, ಸರ್ಕಾರಿ ಕಟ್ಟಡ ಹಾಗೂ ಕಾಮಗಾರಿ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಗುರುವಾರ ತಾಲೂಕಿನಲ್ಲಿ ವಿವಿಧ ಗ್ರಾಪಂ, ಸರ್ಕಾರಿ ಕಟ್ಟಡ ಹಾಗೂ ಕಾಮಗಾರಿ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದರು.ತಾಲೂಕಿನ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲಿಸಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಸ್ಥಳೀಯವಾಗಿ ಖಾಸಗಿ ಕೆಲಸಗಳಲ್ಲಿ ನರೇಗಾಕ್ಕಿಂತಲೂ ಕೂಲಿ ದರ ಹೆಚ್ಚಾಗಿದ್ದು, ಯೋಜನೆಯಡಿ ಕೂಲಿ ದರವನ್ನು ಹೆಚ್ಚಿಸಬೇಕು ಮತ್ತು ಬೇಸಿಗೆಯಲ್ಲಿ ರಿಯಾಯಿತಿ ನೀಡಬೇಕೆಂಬ ಕೂಲಿಕಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಆಯುಕ್ತಾಲಯದ ಗಮನಕ್ಕೆ ತರುವುದಾಗಿ ತಿಳಿಸಿದರು. ಬಳಿಕ ಮಳಗಿ ಹಾಗೂ ಪಾಳಾ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಮತ್ತು ಪ್ರಮುಖ ಕಡತಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡಿದರು. ಇದೇ ವೇಳೆ ಗ್ರಂಥಾಲಯ, ಕೂಸಿನ ಮನೆ ಪರಿವೀಕ್ಷಣೆ ಮಾಡಿದರು. ಪಾಳಾ ಐಟಿಐ ಕಾಲೇಜಿಗೆ ಭೇಟಿ ನೀಡಿ, ಆಡಳಿತ ಕಚೇರಿ, ಲ್ಯಾಬ್, ಬೋಧನಾ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕಾಲೇಜಿನಲ್ಲಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿದರು. ನಂತರ ಇಂದೂರು ಗ್ರಾಪಂ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಬೂದು ನೀರು ನಿರ್ವಹಣೆಗಾಗಿ ಸಮುದಾಯ ಮಟ್ಟದಲ್ಲಿ ಚರಂಡಿಯಲ್ಲಿ ನೀರು ಸಂಸ್ಕರಣಾ ಘಟಕ ವೀಕ್ಷಣೆ ಮಾಡಿ, ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದರು.ಈ ಸಂದರ್ಭ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರರಾದ ದೀಪಾ ಎಸ್. ಶೆಡಗೇರಿ, ಕಿರಿಯ ಅಭಿಯಂತರರಾದ ಪ್ರದೀಪ್ ಭಟ್, ಸಂಬಂಧಪಟ್ಟ ಗ್ರಾಪಂ ಪಿಡಿಒ, ನರೇಗಾ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.