ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮಕ್ಕೆ ಬುಧುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಬೆಳಗ್ಗೆ ಭೇಟಿ ನೀಡಿ, ಗ್ರಾಮದ ಹಲವು ಪ್ರದೇಶಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- ಗ್ರಾಮದ ಆಸ್ಪತ್ರೆ, ತ್ಯಾಜ್ಯ ವಿಲೇವಾರಿ ಘಟಕ, ನೀರಿನ ನಲ್ಲಿ ವ್ಯವಸ್ಥೆಗಳ ಪರಿಶೀಲನೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸಂತೆಬೆನ್ನೂರು ಗ್ರಾಮಕ್ಕೆ ಬುಧುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಬೆಳಗ್ಗೆ ಭೇಟಿ ನೀಡಿ, ಗ್ರಾಮದ ಹಲವು ಪ್ರದೇಶಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಘನತ್ಯಾಜ್ಯ ಶೇಖರಣೆಯಾಗಿರುವ ಪ್ರದೇಶ, ಬೀದಿನಾಯಿಗಳ ಹಾವಳಿ, ಗ್ರಾಮದ ಚರಂಡಿಗಳ ನೀರು ನೇರವಾಗಿ ಕೆರೆಗೆ ಸೇರುತ್ತಿರುವುದು ಮತ್ತು ನಲ್ಲಿನೀರಿನ ವಿತರಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆಗಳ ಅವಲೋಕಿಸಿದರು.

ಗ್ರಾಮದಲ್ಲಿರುವ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿ ಚಿಕಿತ್ಸೆ, ಸ್ವಚ್ಛತೆ ಹಾಗೂ ಮಹಿಳೆಯರಿಗೆ ಆರೋಗ್ಯ ಸೇವೆ ನೀಡುತ್ತಿರುವ ವಿಚಾರದ ಬಗ್ಗೆ ಆಸ್ಪತ್ರೆಯಲ್ಲಿದ್ದ ಮಹಿಳೆಯರಿಂದ ಮಾಹಿತಿ ಪಡೆದು ಆಸ್ಪತ್ರೆಯ ಸೇವಾ ಕಾರ್ಯಗಳ ಬಗ್ಗೆ ಪ್ರಶಂಶಿಸಿದರು.

ಗ್ರಾಮದ ಜನರು ಮಾತನಾಡಿ, ಗ್ರಾಮದಲ್ಲಿ ಎಲ್ಲಿಬೇಕೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎಂದರು. ರೈತರು ನೀಡಿದ ದೂರಿನ ಮೇರೆಗೆ ಸಿಇಒ ಅವರು ಗ್ರಾಮದ ಸಾಸಲು ರಸ್ತೆಯ ಪಕ್ಕದಲ್ಲಿ ಸುರಿದಿದ್ದ ತ್ಯಾಜ್ಯದ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದು ತಾಕೀತು ಮಾಡಿದರು.

ಸೆಲೋನ್ ಶಾಪ್, ಮದ್ಯದ ಅಂಗಡಿ, ಹೊಟೇಲ್ ಮತ್ತು ಕಲ್ಯಾಣ ಮಂಟಪದ ತ್ಯಾಜ್ಯಗಳನ್ನು ಅಸಮರ್ಪಕವಾಗಿ ಸುರಿಯುತ್ತಿರುವವರಿಗೆ ₹5 ಸಾವಿರ ದಂಡವನ್ನು ಹಾಕಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮದ ಚರಂಡಿಯ ನೀರು ನೇರವಾಗಿ ಕೆರೆಗೆ ಸೇರುತ್ತಿರುವ ಸ್ಥಳವನ್ನೂ ಪರಿಶೀಲನೆ ನಡೆಸಿದರು. ತ್ಯಾಜ್ಯದ ನೀರು ಕೆರೆಗೆ ಸೇರದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡು ಬೇರೆ ಕಡೆಗೆ ತ್ಯಾಜ್ಯದ ನೀರು ಹರಿಯುವಂತೆ ಮಾಡಲು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಜಿಪಂ ಸಿಇಒ, ತ್ಯಾಜ್ಯ ಸಂಗ್ರಹಣೆ ಮತ್ತು ತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ ತುಂಬಿದ್ದ ಪ್ಲಾಸ್ಟಿಕ್, ರಬ್ಬರ್ ಹಾಗೂ ಗಾಜಿನಿಂದ ತುಂಬಿದ ತ್ಯಾಜ್ಯವನ್ನು ಶೀಘ್ರವಾಗಿ ವಿಲೇ ಮಾಡುವಂತೆ ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಿದರು.

ಈ ಗ್ರಾಮಕ್ಕೆ ಸೂಳೆಕೆರೆಯಿಂದ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿದೆ. ಆದರೆ, ಗ್ರಾಮದ ಅರ್ಧ ಭಾಗಕ್ಕೆ ಮಾತ್ರ ನೆಲ್ಲಿ ನೀರಿನ ವ್ಯವಸ್ಥೆ ಮೂಲಕ ನೀರು ತಲುಪುತ್ತಿದೆ. ಉಳಿದ ಅರ್ಧಭಾಗಕ್ಕೆ ಕೊಳವೆಬಾವಿ ನೀರನ್ನೇ ಅವಲಂಬಿಸಿರುವ ಬಗ್ಗೆ ಮತ್ತು ಗ್ರಾಮಕ್ಕೆ ಯುಜಿಡಿ ಯೋಜನೆ ಬೇಕಾಗಿದೆ ಎಂಬ ಬಗ್ಗೆ ಗ್ರಾಮದ ಜನರಿಂದ ದೂರುಗಳು ಬಂದಿದ್ದವು. ಆದಕಾರಣ ಈ ಬಗ್ಗೆ ವರದಿ ತಯಾರಿಸಿ ಕ್ಷೇತ್ರದ ಶಾಸಕರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ತಾಪಂ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್, ಅಭಿಯಂತರರಾದ ಲೋಹಿತ್, ಗಿರೀಶ್, ಭಾನುಪ್ರಕಾಶ್, ಪಿಡಿಒ ಉಮೇಶ್, ಕಾರ್ಯದರ್ಶಿ ನಾಗರಾಜ್, ಬಸವರಾಜ್, ರವಿಕುಮಾರ್, ಸದಸ್ಯರಾದ ರಹಮತ್ ಉಲ್ಲಾ, ಅಂಜದ್, ಗಿರೀಶ್, ರಾಮಪ್ಪ, ಅಶೀಫ್ ಸೇರಿದಂತೆ ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.

- - -

(ಟಾಪ್‌ ಕೋಟ್‌) ಜನರು ಮನೆ, ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯ ಕಸದ ವಾಹನಕ್ಕೆ ನೀಡಬೇಕು. ಪ್ರತಿದಿನ 2 ಬಾರಿ ತ್ಯಾಜ್ಯ ಸಂಗ್ರಹ ವಾಹನ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಜಾಗೃತರಾಗಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ತ್ಯಾಜ್ಯವನ್ನು ನೀಡಬೇಕು. ಆ ಮೂಲಕ ಗ್ರಾಮದಲ್ಲಿ ಶುದ್ಧ ಪರಿಸರ ನಿರ್ಮಾಣಮಾಡಲು ಎಲ್ಲರೂ ಸಹಕರಿಸಬೇಕು.

- ಗಿತ್ತೆ ಮಾಧವ ವಿಠಲ ರಾವ್‌, ಜಿಪಂ ಸಿಇಒ.

- - -

(ಈ ವರದಿಗೆ ಪೋಟೋ ಇದೆ ಪೈಲ್ ನಂ.3ಕೆಸಿಎನ್ಜಿ1)(ತಾಲೂಕಿನ ಸಂತೆಬೆನ್ನೂರು ಗ್ರಾಮದ ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹಣೆಯಾದ ಪ್ರದೇವನ್ನು ವಿಕ್ಷಿಸುತ್ತೀರುವ ಜಿ.ಪಂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗಿತ್ತಿ ಮಾದವ ವಿಠಲರಾವ್)