ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ: ಸಂಸದ ಡಾ. ಕೆಸುಧಾಕರ್

| Published : Oct 07 2024, 01:38 AM IST / Updated: Oct 07 2024, 04:53 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಕೆಟ್ಟ ಮನಸ್ಥಿತಿಯಿಂದಾಗಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.  

 ಚಿಕ್ಕಬಳ್ಳಾಪುರ:  ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಅಧಿಕೃತವಾಗಿ ವೇದಿಕೆ ಹಂಚಿಕೊಳ್ಳುವುದಿಲ್ಲಾ ಎಂದು ಸಂಸದ ಡಾ.ಕೆಸುಧಾಕರ್ ಹೇಳಿದರು.

ನಗರ ಹೊರವಲಯದ ಕೆ.ವಿ.ಕ್ಯಾಂಪಸ್ ನಲ್ಲಿ ಶ್ರೀ ಕೆವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರಿಗೆ ಸುದ್ದಿಗಾರರು, ಶನಿವಾರ ನಡೆದ ಆರೋಗ್ಯ ಸಚಿವರ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು,

ಆಹ್ವಾನಿಸುವ ಸೌಜನ್ಯವೂ ಇಲ್ಲ

ತಮ್ಮ ಅವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳಿಗೆ ಶನಿವಾರ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಆಸ್ಪತ್ರೆಗಳ ಉದ್ಘಾಟನೆ ಸೇರಿದಂತೆ ಹಲವು ಕಾಮಗಾರಿಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗು ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೌಜನ್ಯಕ್ಕಾದರೂ ತಮ್ಮನ್ನು ಆಹ್ವಾನಿಸಲಿಲ್ಲ. ಎಂಟು ಕ್ಷೇತ್ತಗಳನ್ನು ಪ್ರತಿನಿಧಿಸುವ ಸಂಸದರನ್ನ ಕರೆಯುವ ಸೌಜನ್ಯ ಬೇಡವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಹ ಕೆಟ್ಟ ಮನಸ್ತಿತಿಯುಳ್ಳ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಜತೆ ಇನ್ನೆಂದಿಗೂ ಅಧಿಕೃತವಾಗಿ ವೇದಿಕೆ ಹಂಚಿಕೊಳ್ಳುವ ಕೆಲಸ ಮಾಡೊಲ್ಲ ಇದು ನನ್ನ ಅಚಲ ನಿರ್ಧಾರ. ತಾವು ಕೈಗೊಂಡಿದ್ದ ಅಭಿವೃದ್ದಿ ಕೆಲಸಗಳನ್ನೊಮ್ಮೆ ಆರೋಗ್ಯ ಸಚಿವರು ವೀಕ್ಷಿಸಲಿ ಆಗ ನಮ್ಮ ಅಭಿವೃದ್ದಿ ಏನೆಂದು ಗೊತ್ತಾಗುತ್ತೆ . ಅವರು ತಮ್ಮನ್ನು ಕಾರ್ಯಕ್ರಮಗಳಿಗೆ ಕರೆಯಲಿ ಬಿಡಲೀ, ಜನರಿಗೆ ಒಳ್ಳೆಯದಾದ್ರೆ ಸಾಕು. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.

ವೆಂಕಟರಾಯಪ್ಪ ಸೇವೆ ಸ್ಮರಣೆ

ಕೆ ವಿ ಮತ್ತು ಪಂಚಗಿರಿ ವಿದ್ಯಾದತ್ತಿಗಳ ಅಧ್ಯಕ್ಷ, ಬಿಎಂ ಟಿ ಸಿ ಮಾಜಿ ಉಪಾಧ್ಯಕ್ಷ ಹಾಗು ಬಿಜೆಪಿ ಮುಖಂಡ ಕೆ.ವಿ.ನವೀನ್ ಕಿರಣ್ ಹುಟ್ಟುಹಬ್ಬಕ್ಕೆ ಶುಭಕೋರಿದ ಸಂಸದ ಡಾ. ಕೆ.ಸುಧಾಕರ್, ಆತ್ಮೀಯರಾದ ನವೀನ್‌ ಕಿರಣ್‌ ಅವರ ತಾತ ಸಿ.ವಿ.ವೆಂಕಟರಾಯಪ್ಪ ನವರ ಕಾಲದಿಂದಲೂ ನಮ್ಮ ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕವಿದೆ. ಸಿ ವಿ ವೆಂಕಟರಾಯಪ್ಪ ನವರು ಶಿಕ್ಷಣ ಸಂಸ್ಥೆಗಳು ಬೆಳೆಸಿ ಅಕ್ಷರದಾತರಾಗಿರುವ ಇವರ ಕುಟುಂಬದ ಕುಡಿ ನವೀನ್ ಕಿರಣ್ ರಾಜಕಾರಣದೊಂದಿಗೆ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮನತುಂಬಿ ಮಾತನಾಡಿದ ಕೆ.ವಿ. ನವೀನ್ ಕಿರಣ್, ನಾನು ಜಮೀನು ಸಂಪಾದಿಸಿಲ್ಲ ಆಸ್ತಿ ಸಂಪಾದಿಸಿಲ್ಲ ಆದರೆ ಜನರ ಪ್ರೀತಿ ಸಂಪಾದಿಸಿದ್ದೇನೆ. ಈ ಪ್ರೀತಿಯೇ ನನಗೆ ಶ್ರೀರಕ್ಷೆ. ಇಷ್ಟೊಂದು ಜನ ನನ್ನ ಮನೆಗೆ ಬಂದು ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನಗೆ ಶುಭ ಹಾರೈಸುರುವುದು ಮನ ತುಂಬಿ ಬಂದಿದೆ ಎಂದು ಪ್ರತಿಕ್ರಿಸಿದರು.