ರಾಜಧಾನಿಗೆ ವರುಣಾಘಾತ ; 50 ಬಡಾವಣೆಗಳು ಜಲಾವೃತ

| N/A | Published : May 20 2025, 02:33 AM IST / Updated: May 20 2025, 04:16 AM IST

ಸಾರಾಂಶ

ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದ್ದು,  50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡು ಜನರು ಪರದಾಡಿದರು. ಮಳೆಯಿಂದಾಗಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಐದು ಜಾನುವಾರುಗಳು ಸಾವನ್ನಪ್ಪಿವೆ.

 ಬೆಂಗಳೂರು : ಮುಂಗಾರು ಪೂರ್ವ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿದ್ದು, ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಭಾರೀ ಮಳೆಗೆ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡು ಜನರು ಪರದಾಡಿದರು. ಮಳೆಯಿಂದಾಗಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಐದು ಜಾನುವಾರುಗಳು ಸಾವನ್ನಪ್ಪಿವೆ.

ಭಾನುವಾರ ಮಧ್ಯರಾತ್ರಿ 12ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಸುರಿದ ಭಾರೀ ಮಳೆಗೆ ನಗರದ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡವು. ಮಳೆ ಆರಂಭವಾಗುತ್ತಿದ್ದಂತೆ ಮಳೆ ನೀರು ಸರಾಗವಾಗಿ ಹರಿಯಲು ಸ್ಥಳವಿಲ್ಲದ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಜಾಗರಣೆ ಮಾಡಿದರು. ಸಿಲ್ಕ್‌ಬೋರ್ಡ್‌ ಜಂಕ್ಷನ್‌, ನಾಯಂಡಹಳ್ಳಿ ಜಂಕ್ಷನ್‌, ಶಾಂತಿನಗರ ಕೆಎಚ್‌ ರಸ್ತೆ, ಕೋರಮಂಗಲ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಸೋಮವಾರವೂ ರಸ್ತೆ ಹಾಗೂ ಬಡಾವಣೆಗಳಲ್ಲಿ ಶೇಖರಣೆಯಾಗಿದ್ದ ನೀರು ತೆರವಾಗದೆ ಜನರು ಪರದಾಡಿದರು.

ಮತ್ತೆ ಮುಳುಗಿದ ಬಡಾವಣೆಗಳು

ಪ್ರತಿ ಮಳೆಗಾಲದಲ್ಲೂ ಮುಳುಗುವ ಸಾಯಿ ಲೇಔಟ್‌, ಐಡಿಯಲ್‌ ಹೋಮ್ಸ್‌ ಲೇಔಟ್‌ಗಳು ಭಾನುವಾರ ಮಧ್ಯರಾತ್ರಿ ಮಳೆಗೆ ಮತ್ತೆ ಮುಳುಗಿವೆ. ಮಳೆ ಆರಂಭವಾಗುತ್ತಿದ್ದಂತೆ ಈ ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನರು ರಾತ್ರಿಯಿಡೀ ಆತಂಕಕ್ಕೆ ಒಳಗಾದರು. ಸೋಮವಾರ ಈ ಬಡಾವಣೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಿದ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಸಾಯಿ ಲೇಔಟ್‌ ಒಂದರಲ್ಲೇ 150 ಜನರನ್ನು ಬೋಟ್‌, ಟ್ರ್ಯಾಕ್ಟರ್‌ಗಳ ಮೂಲಕ ಬೇರೆಡೆಗೆ ಸ್ಥಳಾಂತರಿಸಿದರು. ಇನ್ನು, ವೃಷಭಾವತಿ ಕಾಲುವೆಯ ನೀರು ಉಕ್ಕಿ ಹರಿದ ಪರಿಣಾಮ ರಾಜರಾಜೇಶ್ವರಿನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯ ಬಹುತೇಕ ಭಾಗ ಜಲಾವೃತವಾಗಿತ್ತು.

50ಕ್ಕೂ ಹೆಚ್ಚಿನ ಬಡಾವಣೆ ಜಲಾವೃತ

ರಸ್ತೆ ಬದಿಯ ಚರಂಡಿ ಹಾಗೂ ರಾಜಕಾಲುವೆಗಳಲ್ಲಿನ ಹೂಳು ತೆಗೆಯದ ಪರಿಣಾಮ ಹಾಗೂ ಏಕಾಏಕಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಕಾರಣಕ್ಕಾಗಿ ನಗರದ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿತ್ತು. ಪ್ರಮುಖವಾಗಿ ಇಬ್ಬಲೂರು ಲೇಔಟ್‌, ಬಾಲಾಜಿ ಲೇಔಟ್‌, ಕೊತ್ತನೂರು, ಎಚ್‌ಬಿಆರ್‌ ಲೇಔಟ್‌, ಬೈರಸಂದ್ರ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ 6 ಮತ್ತು 7ನೇ ಸೆಕ್ಟರ್‌, ಯಲಚೇನಹಳ್ಳಿ, ಈಜೀಪುರ, ಕೋರಮಂಗಲ 6ನೇ ಬ್ಲಾಕ್‌, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಬಳಿಯ ಬಾಪೂಜಿ ನಗರ, ಡಿಫೆನ್ಸ್‌ ಲೇಔಟ್‌, ದ್ವಾರಕಾ ನಗರ, ಕೆಂಗೇರಿ ಬಳಿಯ ಕೋಟೆ ಲೇಔಟ್‌ ಹೀಗೆ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿವೆ. ಈ ಬಡಾವಣೆಯ ಮನೆಗಳಲ್ಲಿ ಸುಮಾರು ಮೂರು ಅಡಿಗೂ ಹೆಚ್ಚಿನ ನೀರು ನಿಂತು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನೀರು ಪಾಲಾಗಿದ್ದವು. ಸೋಮವಾರ ಬೆಳಗ್ಗೆಯಿಂದಲೇ ಮನೆಯೊಳಗಿನ ನೀರು ಹೊರಹಾಕಲು ಬಿಬಿಎಂಪಿ ಸಿಬ್ಬಂದಿ ಮುಂದಾದರಾದರೂ ಕೆಲ ಬಡಾವಣೆಗಳಲ್ಲಿ ರಾತ್ರಿಯಾದರೂ ನೀರು ಖಾಲಿಯಾಗಿರಲಿಲ್ಲ.

ಕೆ-100 ರಾಜಕಾಲುವೆ ಬಳಿಯೇ ಪ್ರವಾಹ

ಕೋರಮಂಗಲ ವ್ಯಾಲಿಯ ರಾಜಕಾಲುವೆ ಅಭಿವೃದ್ಧಿ ಮಾಡಿ ಮಳೆ ನೀರು ಸರಾಗವಾಗಿ ಹರಿಯಲು ಕೆ-100 ಮತ್ತು ಕೆ-200 ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ, ಈ ಅಭಿವೃದ್ಧಿ ಕಾರ್ಯವೂ ಪ್ರವಾಹ ಪರಿಸ್ಥಿತಿ ತಡೆಯಲು ಸಾಧ್ಯವಾಗಿಲ್ಲ. ಕೆ-100 ರಾಜಕಾಲುವೆ ಅಕ್ಕಪಕ್ಕದ ಹಲವು ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅದರಲ್ಲೂ ಮಡಿವಾಳ, ಕೋರಮಂಗಲ ಭಾಗದ ಐದಕ್ಕೂ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳ ತಳ ಮಹಡಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ವೈಟ್‌ಫೀಲ್ಡ್‌ ಬಳಿಯ ಚೆನ್ನಸಂದ್ರದ ಇಸ್ಮೋ ಮೈಕ್ರೋ ಸಿಸ್ಟ್‌ ಸಂಸ್ಥೆಗೆ ಸೇರಿದ 10 ಅಡಿ ಎತ್ತರದ ಕಾಂಪೌಂಡ್‌ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಹಾಪುರ ಮೂಲದ ಶಶಿಕಲಾ (35) ಮೃತ ದುರ್ದೈವಿ. ಇಸ್ಮೋ ಮೈಕ್ರೋ ಸಿಸ್ಟ್‌ನಲ್ಲೇ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದ ಶಶಿಕಲಾ ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಕಾಂಪೌಂಡ್‌ ಗೋಡೆ ಕುಸಿದು ಸ್ಥಳದಲ್ಲೇ ಮೃತಪಟ್ಟರು. ದುರ್ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ರು. ಪರಿಹಾರ ಘೋಷಿಸಲಾಗಿದೆ. ಮತ್ತೊಂದೆಡೆ, ವೃಷಭಾವತಿ ವ್ಯಾಲಿಯ ಹೂಳು ತೆಗೆಯದ ಕಾರಣ ಮಳೆ ನೀರು ಐಡಿಯಲ್‌ ಹೋಮ್ಸ್‌ ಬಡಾವಣೆಗೆ ನುಗ್ಗಿದ್ದು, ಅದರಿಂದ 3 ಹಸು, ತಲಾ 1 ಕರು ಮತ್ತು ಎಮ್ಮೆ ಸೇರಿ ಒಟ್ಟು ಐದು ಜಾನುವಾರುಗಳು ಸಾವನ್ನಪ್ಪಿವೆ.

ಕೆರೆಯಂತಾದ ರಸ್ತೆಗಳು

ಮಳೆಯ ಪರಿಣಾಮ ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು. ಸಿಲ್ಕ್‌ಬೋರ್ಡ್‌ ಜಂಕ್ಷನ್‌, ನಾಯಂಡಹಳ್ಳಿ ಜಂಕ್ಷನ್‌, ಶಾಂತಿನಗರ, ಕೋರಮಂಗಲ, ಈಜಿಪುರ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಕೆರೆಯಂತಾಗಿದ್ದವು. ಮಳೆ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನಗಳೊಳಗೆ ನೀರು ನುಗ್ಗಿ ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಂತಿದ್ದವು. ನಾಯಂಡಹಳ್ಳಿ ಕೆಳಸೇತುವೆ ಬಳಿ ನೀರು ನಿಂತಿದ್ದು ತಿಳಿಯದ ಕಾರಣ ಬಿಎಂಟಿಸಿ ಬಸ್ಸೊಂದು ಸಿಲುಕಿತ್ತು. ಹಾಗೆಯೇ, ಸಿಲ್ಕ್‌ಬೋರ್ಡ್‌ ಜಂಕ್ಷನ್‌ ಬಳಿ ಬಿಎಂಟಿಸಿ ವಜ್ರ ಬಸ್‌ ಸಿಲುಕಿದ್ದು, ಕ್ರೇನ್‌ ಮೂಲಕ ಹೊರತೆಗೆಯಲಾಯಿತು.

ಹೆಚ್ಚಾದ ಸಂಚಾರ ದಟ್ಟಣೆ

ಪ್ರಮುಖ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸೋಮವಾರ ಬಹುತೇಕ ಎಲ್ಲೆಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಅದರಲ್ಲೂ ಹೆಬ್ಬಾಳ, ಹೆಣ್ಣೂರು, ಕೋರಮಂಗಲ, ಮೈಸೂರು ರಸ್ತೆ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಹೊಸೂರು ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡಿದರು. ಕೆಲ ರಸ್ತೆಗಳಲ್ಲಿ ಸೋಮವಾರ ರಾತ್ರಿವರೆಗೂ ಸಂಚಾರ ದಟ್ಟಣೆ ಮುಂದುವರಿದಿತ್ತು.

30ಕ್ಕೂ ಹೆಚ್ಚಿನ ಮರಗಳು ಧರೆಗೆ:

ಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ 30ಕ್ಕೂ ಹೆಚ್ಚಿನ ಮರಗಳು, 45ಕ್ಕೂ ಹೆಚ್ಚಿನ ಕೊಂಬೆಗಳು ಬಿದ್ದಿವೆ. ಅಲ್ಲದೆ, ಮೇಖ್ರಿ ವೃತ್ತ ಬಳಿ ಬಳ್ಳಾರಿ ರಸ್ತೆಗೆ ಭಾರಿ ಗಾತ್ರದ ಮರ ಬಿದ್ದ ಪರಿಣಾಮ ಸೋಮವಾರ ಮಧ್ಯಾಹ್ನದವರೆಗೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೆ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿತ್ತು. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಮರಗಳ ತೆರವಿಗೆ ಬಿಬಿಎಂಪಿ 30 ತಂಡಗಳನ್ನು ನಿಯೋಜಿಸಿತ್ತಾದರೂ, ರಸ್ತೆಗಳ ಮೇಲೆ ಬಿದ್ದ ಮರವನ್ನು ಕತ್ತರಿಸಿ ನಂತರ ಪಾದಚಾರಿ ಮಾರ್ಗದಲ್ಲಿಯೇ ತಂಡಗಳು ಬಿಟ್ಟಿದ್ದವು. ಅದರಿಂದಾಗಿ ಪಾದಚಾರಿಗಳು ಓಡಾಡಲು ಪರದಾಡಿದರು.

ಟ್ರ್ಯಾಕ್ಟರ್‌ನಲ್ಲಿ ಆಡಳಿತಾಧಿಕಾರಿ ಸಂಚಾರ

ಭಾರೀ ಮಳೆ ಸುರಿದು ಸಾಯಿ ಲೇಔಟ್‌ ಮತ್ತೊಮ್ಮೆ ಜಲಾವೃತವಾದದ್ದನ್ನು ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ಬಿಡಿಎ ಆಯುಕ್ತ ಎನ್‌. ಜಯರಾಂ ಸೋಮವಾರ ಬೆಳಗ್ಗೆ ಟ್ರ್ಯಾಕ್ಟರ್‌ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು. ಅವರನ್ನು ನೋಡುತ್ತಿದ್ದಂತೆ ಜನರು ಪ್ರವಾಹಕ್ಕೆ ಮುಕ್ತಿ ನೀಡುವಂತೆ ಮನವಿ ಮಾಡಿಕೊಂಡರು ಮತ್ತು ಕೆಲವರು ಹರಿಹಾಯ್ದರು.

ಪೊಲೀಸ್‌ ಠಾಣೆ, ಬಸ್‌ ಡಿಪೋಗಳು ಜಲಾವೃತ

ಮಳೆಯ ಪರಿಣಾಮ ಶಾಂತಿನಗರದ ಸಿಸಿಬಿ ಕಚೇರಿ, ಸಂಪಂಗಿರಾಮ ನಗರ ಪೊಲೀಸ್‌ ಠಾಣೆಗಳು ಜಲಾವೃತವಾಗಿ ಪೊಲೀಸರು ಕೆಲಸ ಮಾಡಲಾಗದ ಸ್ಥಿತಿ ಉಂಟಾಗಿತ್ತು. ಅಲ್ಲದೆ ಶಾಂತಿನಗರ ಕೆಎಸ್ಸಾರ್ಟಿಸಿ ಡಿಪೋ ಕೂಡ ಜಲಾವೃತವಾಗಿ, ಸಿಬ್ಬಂದಿ ದೈನಂದಿನ ಕಾರ್ಯ ಮಾಡಲು ಸಾಧ್ಯವಾಗಲಿಲ್ಲ.

ಮುಳುಗಿದ ರಸ್ತೆಯಲ್ಲೇ ದೇವರ ಮೆರವಣಿಗೆ

ಹೊರಮಾವು ಬಳಿಯ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಅದರ ನಡುವೆಯೇ ಹೊರಮಾವು ನಿವಾಸಿಗಳು ಊರ ದೇವರ ಮೆರವಣಿಗೆ ನಡೆಸಿದರು. ಊರ ಹಬ್ಬ ಇದ್ದ ಕಾರಣದಿಂದಾಗಿ ದೇವರ ಮೆರವಣಿಗೆಯನ್ನು ನಿಲ್ಲಿಸದೆ ಟ್ರ್ಯಾಕ್ಟರ್‌ ಮೂಲಕ ಜಲಾವೃತವಾಗಿದ್ದ ರಸ್ತೆಯಲ್ಲಿಯೇ ಮೆರವಣಿಗೆ ಮಾಡಲಾಯಿತು.

ಸೋಮವಾರವೂ ಭಾರೀ ಮಳೆ

ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಯ ಪರಿಣಾಮವನ್ನು ಪರಿಹರಿಸುವುದಕ್ಕೂ ಮುನ್ನವೇ ಸೋಮವಾರ ಮಧ್ಯಾಹ್ನ ಭಾರೀ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಸತತ 1 ಗಂಟೆಗೂ ಹೆಚ್ಚಿನ ಕಾಲ ನಗರದ ಬಹುತೇಕ ಕಡೆ ಮಳೆಯಾಗಿದೆ. ಅದರಿಂದಾಗಿ ಪ್ರವಾಹ ಪರಿಸ್ಥಿತಿ ತಗ್ಗಿದ್ದ ಬಡಾವಣೆಗಳಲ್ಲಿನ ನೀರಿನ ಶೇಖರಣೆ ಹೆಚ್ಚಾಗಿತ್ತು. ಈ ನಡುವೆ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಎಲ್ಲೆಲ್ಲಿ ಎಷ್ಟು ಮಳೆ

ನಗರದಲ್ಲಿ ಭಾನುವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ 66 ಮಿಮೀ ಮಳೆ ಸುರಿದಿದೆ. ಅದರಲ್ಲಿ ಅತಿಹೆಚ್ಚು ಕೆಂಗೇರಿಯಲ್ಲಿ 132 ಮಿಮೀ ಮಳೆಯಾಗಿದೆ. ಉಳಿದಂತೆ ಕೋರಮಂಗಲ 96.50, ಎಚ್‌ಎಎಲ್‌ 93, ಕೊಟ್ಟಿಗೆಪಾಳ್ಯ, ವಿದ್ಯಾಪೀಠ 92.50, ಮಾರತಹಳ್ಳಿ 91.50, ಹಂಪಿನಗರ 91, ಬಾಗಲಗುಂಟೆ 89, ಕಾಟನ್‌ಪೇಟೆ 88.50, ವಿವಿ ಪುರ 88, ಬಾಣಸವಾಡಿ 85, ನಾಗಪುರ 82, ರಾಜರಾಜೇಶ್ವರಿನಗರ, ಸಂಪಂಗಿರಾಮನಗರ 79.50 ಮಿಮೀ ಮಳೆ ಸುರಿದಿದೆ.

ಬಿಬಿಎಂಪಿ ಸಹಾಯವಾಣಿ

ಸಾರ್ವಜನಿಕರು ಮಳೆಯಿಂದಾಗುವ ಸಮಸ್ಯೆಗಳನ್ನು ವರದಿ ಮಾಡಲು ಬಿಬಿಎಂಪಿ ಸಹಾಯವಾಣಿ ಆರಂಭಿಸಿದೆ. ಯಾವುದೇ ದೂರುಗಳಿದ್ದರೂ ಜನರು ಬಿಬಿಎಂಪಿ ಸಹಾಯವಾಣಿ 1533ಗೆ ಕರೆ ಮಾಡಿ ದೂರು ನೀಡುವಂತೆ ಮನವಿ ಮಾಡಲಾಗಿದೆ.

ಮಳೆ ಹಾನಿ ಪ್ರದೇಶಕ್ಕೆ ಸಿಎಂ ಭೇಟಿ ರದ್ದು

ಭಾನುವಾರ ರಾತ್ರಿಯಿಂದ ಮುಂಜಾನೆವರೆಗೆ ಸುರಿದ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾದ ಪ್ರದೇಶಗಳಿಗೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಲಿದ್ದಾರೆಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿತ್ತು. ಆದರೆ, ಪರಿಶೀಲನೆಗೆ ತೆರಳುವ ಸಮಯದಲ್ಲಿಯೇ ಭಾರೀ ಮಳೆ ಸುರಿದ ಪರಿಣಾಮ ನಗರ ಪರಿವೀಕ್ಷಣೆಯನ್ನು ರದ್ದು ಮಾಡಿದ ಸಿದ್ದರಾಮಯ್ಯ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಮೇ 21ರಂದು ಮಳೆ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲಿಸುವುದಾಗಿ ತಿಳಿಸಿದರು.

Read more Articles on