ಸಾರಾಂಶ
ರಾಜ್ಯದಲ್ಲಿ ಉತ್ತಮ ರಾಜಕಾರಣಿಗಳನ್ನು ತಯಾರು ಮಾಡುವ ದೃಷ್ಟಿಯಿಂದ ರಾಜಕೀಯ ಕಾಲೇಜು ಆರಂಭಿಸುವ ಚಿಂತನೆ ನಡೆಸಿರುವುದಾಗಿ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಉತ್ತಮ ರಾಜಕಾರಣಿಗಳನ್ನು ತಯಾರು ಮಾಡುವ ದೃಷ್ಟಿಯಿಂದ ರಾಜಕೀಯ ಕಾಲೇಜು ಆರಂಭಿಸುವ ಚಿಂತನೆ ನಡೆಸಿರುವುದಾಗಿ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ವಿದ್ಯಾರ್ಥಿಗಳಿಗೆ ವಿಜ್ಞಾನ, ಕಾನೂನು, ಹಣಕಾಸು ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯ, ಕೋರ್ಸುಗಳ ಅಧ್ಯಯನಕ್ಕೆ ಅವಕಾಶವಿದೆ.
ಆದರೆ, ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಇಚ್ಛಿಸುವವರಿಗೆ ಅಧ್ಯಯನಕ್ಕೆ ಅಷ್ಟು ಅವಕಾಶಗಳಿಲ್ಲ. ಹಾಗಾಗಿ ಉತ್ತಮ ರಾಜಕಾರಣಿಗಳನ್ನು ಹೊರತರಲು ರಾಜಕೀಯ ಕಾಲೇಜು ಆರಂಭಿಸಿ ಸೂಕ್ತ ತರಬೇತಿ ನೀಡುವ ಚಿಂತನೆ ಇದೆ. ಈ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ನಡೆಸಿ ಅನುಷ್ಠಾನದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ಇದಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ದನಿಗೂಡಿಸಿ, ನಾನು ಮತ್ತು ಸ್ಪೀಕರ್ ಸೇರಿ ರಾಜಕೀಯ ಅಧ್ಯಯನಕ್ಕೆ ಕಾಲೇಜು ಆರಂಭಿಸುವ ಚಿಂತನೆ ಮಾಡಿದ್ದೆವು. ಅದು ಇನ್ನೂ ಒಂದು ಹಂತಕ್ಕೆ ಬರಬೇಕಾಗಿದೆ. ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಹಾಗೂ ಇತರರೊಂದಿಗೆ ಚರ್ಚಿಸಿ ನಮ್ಮ ಮಕ್ಕಳಿಗೆ ರಾಜಕೀಯ ಕ್ಷೇತ್ರದಲ್ಲೂ ಅಧ್ಯಯನಕ್ಕೆ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.