ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನೀತಿ ಬಗ್ಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿರುವ ಹೊತ್ತಿನಲ್ಲೇ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನವನ್ನು ಏಕರೂಪವಾಗಿ ಶೇ.50ರಷ್ಟು ಏರಿಸುವ ಬದಲು ಹೊಸ ಸೂತ್ರವೊಂದನ್ನು ಅನುಸರಿಸುವ ಬಗ್ಗೆ ಕೇಂದ್ರ ಸರ್ಕಾರ ಸುಳಿವು
ನವದೆಹಲಿ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನೀತಿ ಬಗ್ಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿರುವ ಹೊತ್ತಿನಲ್ಲೇ, ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನವನ್ನು ಏಕರೂಪವಾಗಿ ಶೇ.50ರಷ್ಟು ಏರಿಸುವ ಬದಲು ಹೊಸ ಸೂತ್ರವೊಂದನ್ನು ಅನುಸರಿಸುವ ಬಗ್ಗೆ ಕೇಂದ್ರ ಸರ್ಕಾರ ಸುಳಿವು ನೀಡಿದೆ.
ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ ಸಿದ್ಧಪಡಿಸಿ ಸದ್ಯ ಪ್ರಧಾನಿಗಳ ಸಚಿವಾಲಯದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾದ ಕಾರ್ಯಪತ್ರದ ಅನ್ವಯ, ಪ್ರಸಕ್ತ ಇರುವ ಎಲ್ಲಾ 543 ಲೋಕಸಭಾ ಕ್ಷೇತ್ರಗಳನ್ನೂ ಮರುವಿಂಗಡಣೆ ಮಾಡುವ ಬದಲು ಜನಸಂಖ್ಯೆ ಹೆಚ್ಚಿರುವ ನಿರ್ದಿಷ್ಟವಾದ 170 ಲೋಕಸಭಾ ಸ್ಥಾನಗಳನ್ನು ಮರುವಿಂಗಡಣೆ ಮಾಡಿ, ಲೋಕಸಭಾ ಸ್ಥಾನಗಳನ್ನು 824ಕ್ಕೆ ಹೆಚ್ಚಿಸುವ ಮತ್ತು ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾಲುದಾರಿಕೆ ಹೆಚ್ಚಿಸುವ ಅಂಶಗಳಿವೆ.
ವರದಿಯಲ್ಲಿ ಏನಿದೆ?:
ಮುಂಬರುವ ಕ್ಷೇತ್ರ ಮರುವಿಂಗಡಣೆಯು, ಕೇವಲ ಏಕರೂಪ ಕ್ಷೇತ್ರ ವಿಭಜನೆ ನೀತಿಯ ಮೇಲಿನ ಅವಲಂಬನೆ ಬದಲಾಗಿ ಪ್ರಾತಿನಿಧ್ಯ ಮತ್ತು ಮತದಾನದ ಮೇಲೆ ಅತ್ಯಂತ ಗರಿಷ್ಠ ಪರಿಣಾಮ ಬೀರುವ ಬಗ್ಗೆ ಗಮನ ಹೊಂದಿರಬೇಕು ಎಂದು ಹೇಳಿದೆ.
543 ಕ್ಷೇತ್ರಗಳನ್ನು 824ಕ್ಕೆ ಏರಿಸುವ ಸಲುವಾಗಿ 170 ನಿರ್ದಿಷ್ಟ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಬೇಕು. ಈ ಪೈಕಿ 59 ಕ್ಷೇತ್ರಗಳನ್ನು 2 ಭಾಗ ಮತ್ತು 111 ಕ್ಷೇತ್ರಗಳನ್ನು 3 ಭಾಗ ಮಾಡಿ ಹೊಸ ಕ್ಷೇತ್ರ ರಚಿಸಬೇಕು. ಈ ರೀತಿಯ ಮರುವಿಂಗಡಣೆಯು ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತದಾನ ಪ್ರಮಾಣವನ್ನು ಶೇ.0.3 ರಿಂದ ಶೇ.2.3ರವರೆಗೆ ಹೆಚ್ಚಿಸಲು ನೆರವಾಗಲಿದೆ. ಅಂದರೆ 90 ಲಕ್ಷದಿಂದ 2.3 ಕೋಟಿ ಹೆಚ್ಚುವರಿ ಮತದಾರರ ಮತಚಲಾವಣೆಗೆ ಅನುವು ಮಾಡಿಕೊಡಲಿದೆ ಎಂದು ಡಾ.ಶಮಿಕಾ ರವಿ ಮತ್ತು ಮುದಿತ್ ಕಪೂರ್ ಅವರನ್ನೊಳಗೊಂಡ ಮಂಡಳಿಯ ವರದಿ ಪ್ರಸ್ತಾಪಿಸಿದೆ.
ಎಲ್ಲಿ ಹೆಚ್ಚು ವಿಭಜನೆ?:
ಮಂಡಳಿಯ ವರದಿ ಅನ್ವಯ ಎರಡು ಭಾಗಗಳಾಗಿ ವಿಭಜನೆಗೊಳ್ಳುವ 59 ಕ್ಷೇತ್ರಗಳ ಪೈಕಿ ಕೇರಳ ಮತ್ತು ತಮಿಳುನಾಡು ರಾಜ್ಯಗಳೇ 22 ಕ್ಷೇತ್ರಗಳನ್ನು ಹೊಂದಿವೆ.
ಇನ್ನು ಮೂರು ಭಾಗಗಳಾಗಿ ವಿಭಜನೆಗೊಳ್ಳಲಿರುವ 111 ಕ್ಷೇತ್ರಗಳ ಪೈಕಿ ಉತ್ತರಪ್ರದೇಶದ 17, ಮಹಾರಾಷ್ಟ್ರದ 12, ಬಿಹಾರದ 10, ಪಶ್ಚಿಮ ಬಂಗಾಳದ 10 ಕ್ಷೇತ್ರಗಳಿವೆ.
ಪ್ರಾತಿನಿಧ್ಯ ಕುಸಿತ ಇಲ್ಲ:
ಪ್ರಸ್ತಾಪಿತ ಮಾದರಿಯನ್ನು ಅನುಸರಿಸಿದರೆ ಲೋಕಸಭೆಯಲ್ಲಿ ದಕ್ಷಿಣ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪಶ್ಚಿಮ ಮತ್ತು ಉತ್ತರದ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆ ಆಗದು. ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ, ಪ್ರಸಕ್ತ ಇರುವ ಶೇ.23.6ರಿಂದ ಶೇ.23.7ಕ್ಕೆ ಹೆಚ್ಚಲಿದೆ, ಅದೇ ರೀತಿ ಉತ್ತರ ಮತ್ತು ಪಶ್ಚಿಮ ರಾಜ್ಯಗಳ ಪ್ರಾತಿನಿಧ್ಯ ಶೇ.45.2ರಿಂದ ಶೇ.45.6ಕ್ಕೆ ಹೆಚ್ಚಲಿದೆ ಎಂದು ವರದಿ ಹೇಳಿದೆ.
ಎಲ್ಲಿ? ಎಷ್ಟು ಸೀಟು ಹೆಚ್ಚಳ?:
ಪ್ರಸ್ತಾಪಿತ ಮಾದರಿ ಅನುಸರಿಸಿದರೆ ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದ ಲೋಕಸಭಾ ಸ್ಥಾನಗಳ ಸಂಖ್ಯೆ 28ರಿಂದ 42ಕ್ಕೆ, ತೆಲಂಗಾಣದ್ದು 17ರಿಂದ 26ಕ್ಕೆ, ಆಂಧ್ರಪ್ರದೇಶದ್ದು 25ರಿಂದ 38ಕ್ಕೆ, ತಮಿಳುನಾಡಿನದ್ದು 39ರಿಂದ 59ಕ್ಕೆ, ಕೇರಳದ್ದು 20ರಿಂದ 30ಕ್ಕೆ ಹೆಚ್ಚಳವಾಗಲಿದೆ.
ಇನ್ನು ಉತ್ತರ ಮತ್ತು ಪಶ್ಚಿಮದ ರಾಜ್ಯಗಳ ಪೈಕಿ ಉತ್ತರಪ್ರದೇಶದ್ದು 80ರಿಂದ 120ಕ್ಕೆ, ಮಹಾರಾಷ್ಟ್ರದ್ದು 48ರಿಂದ 72, ಬಿಹಾರದ್ದು 40 ರಿಂದ 60, ಮಧ್ಯಪ್ರದೇಶದ್ದು 29 ರಿಂದ 44, ಗುಜರಾತ್‌ನದ್ದು 26ರಿಂದ 39, ರಾಜಸ್ಥಾನದ್ದು 25ರಿಂದ 38ಕ್ಕೆ ಏರಲಿದೆ.
ಗಾತ್ರವೇ ಸವಾಲು:
ಪ್ರಸಕ್ತ ಲೋಕಸಭಾ ಕ್ಷೇತ್ರಗಳೇ ದೊಡ್ಡ ಬೆಳೆಯುತ್ತಿರುವ ಸವಾಲಾಗಿದೆ. ಲೋಕಸಭಾ ಕ್ಷೇತ್ರಗಳ ಸರಾಸರಿ ಮತದಾರರ ಪ್ರಮಾಣ 18.2 ಲಕ್ಷದಷ್ಟಿದೆ. ಅತಿ ದೊಡ್ಡ ಕ್ಷೇತ್ರದ ಮತದಾರರ ಸಂಖ್ಯೆ 32 ಲಕ್ಷದಷ್ಟಿದೆ. ಇತ್ತೀಚಿನ ಅಂಕಿ ಅಂಶಗಳ ಅನ್ವಯ, ಅತಿದೊಡ್ಡ ಲೋಕಸಭಾ ಕ್ಷೇತ್ರಗಳಲ್ಲೇ ಮತದಾನದ ಪ್ರಮಾಣ ಕಡಿಮೆ ಇದೆ ಎಂದು ವರದಿ ಹೇಳಿದೆ.
ಮತ ಕುಸಿತಕ್ಕೆ ಕಾರಣ?:
ಅತಿದೊಡ್ಡ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿತಕ್ಕೆ ಎಸ್‌ಸಿ ಮತ್ತು ಎಸ್ಟಿ ಮತದಾರರ ಪ್ರಮಾಣ; ಕ್ಷೇತ್ರ ನಗರ ಪ್ರದೇಶವೇ ಅಥವಾ ಗ್ರಾಮೀಣ ಪ್ರದೇಶವೇ?; ಕ್ಷೇತ್ರದ ಜನರು ಒಂದೇ ಭಾಷೆಯನ್ನು ಪ್ರಧಾನವಾಗಿ ಮಾತನಾಡುತ್ತಾರೋ ಅಥವಾ ಹಲವು ಭಾಷೆ ಬಳಕೆಯಲ್ಲಿದೆ ಎಂಬಿತ್ಯಾದಿ ಅಂಶಗಳು ಕಾರಣವಿರಬಹುದು.
ಅಂಕಿ ಅಂಶಗಳ ಅನ್ವಯ ಎಸ್ಟಿ ಸಮುದಾಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕಂಡುಬಂದಿದೆ. ಈ ಹಿಂದೆ ಎಸ್‌ಸಿ ಸಮುದಾಯ ಹೆಚ್ಚಿದ್ದ ಕಡೆ ಹೆಚ್ಚಿನ ಪ್ರಮಾಣದ ಮತದಾನವಾಗುತ್ತಿದ್ದು, ಆ ಸಂಪ್ರದಾಯ ಇದೀಗ ಕಂಡುಬರುತ್ತಿಲ್ಲ, ಇನ್ನು ನಗರ ಪ್ರದೇಶಗಳು ಹೆಚ್ಚಿರುವ ಕಡೆ ಮತದಾನದ ಪ್ರಮಾಣ ಕುಸಿತ ಕಂಡುಬರುತ್ತಿದೆ. ಭಾಷಾವಾರು ಲೆಕ್ಕಾಚಾರ ನೋಡಿದರೆ ಮಿಶ್ರ ಭಾಷೆ ಮಾತನಾಡುವ ಕಡೆ ಮತದಾನದ ಪ್ರಮಾಣ ಹೆಚ್ಚಿದೆ.
ಮಹಿಳೆಯರ ಕಥೆ?:
ಮಹಿಳೆಯರು ಎಲ್ಲಿ ಹೆಚ್ಚು ವಾಸ ಮಾಡುತ್ತಾರೆ ಎಂಬ ಅಂಶ ಅವರ ಒಟ್ಟಾರೆ ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುವುದು ಕಂಡುಬಂದಿದೆ. ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದರೆ ಅಲ್ಲಿ ಅವರ ಮತದಾನದ ಪ್ರಮಾಣ ಕಡಿಮೆ ದಾಖಲಾಗುತ್ತಿದೆ, ಆದರೆ ಗ್ರಾಮೀಣ ಪ್ರದೇಶ ಮತ್ತು ಎಸ್ಟಿ ಸಮುದಾಯದ ಮಹಿಳೆಯರು ಹೆಚ್ಚಿರುವ ಕಡೆ ಮತದಾನದ ಪ್ರಮಾಣವೂ ಹೆಚ್ಚು ದಾಖಲಾಗುತ್ತಿದೆ. ಹೀಗಾಗಿ 2027ರ ಜನಗಣತಿ ಬಳಿಕ ರಚಿಸಲಾಗುವ ಕ್ಷೇತ್ರ ಮರುವಿಂಗಡಣಾ ಆಯೋಗವು, ಕೇವಲ ಕ್ಷೇತ್ರದ ಗಾತ್ರವನ್ನು ಮಾತ್ರ ಪರಿಗಣಿಸಿ ಮರುವಿಂಗಡಣೆ ಮಾಡುವ ಬದಲು ಜನಸಂಖ್ಯಾರಚನೆ, ಭಾಷಾ ಬಳಕೆ ಸೇರಿದಂತೆ ಮೇಲ್ಕಂಡ ಅಂಶಗಳನ್ನು ಪರಿಗಣಿಸಿ ಕ್ಷೇತ್ರ ಮರುವಿಂಗಡಣೆ ಆಗಬೇಕು ಎಂದು ನಾವು ಶಿಫಾರಸು ಮಾಡುತ್ತೇವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ಷೇತ್ರಗಳ ಸರಾಸರಿ ಮತದಾರರ ಗಾತ್ರ
18.2 ಲಕ್ಷ ಲೋಕಸಭಾ ಕ್ಷೇತ್ರಗಳ ಸರಾಸರಿ ಮತದಾರರು
32 ಲಕ್ಷ ಅತಿದೊಡ್ಡ ಲೋಕಸಭಾ ಕ್ಷೇತ್ರದ ಮತದಾರರು
- ದೇಶದ ಒಟ್ಟು ಕ್ಷೇತ್ರ 50% ಹೆಚ್ಚಿಸುವ ಬದಲಿಗೆ ನಿರ್ದಿಷ್ಟ ಕ್ಷೇತ್ರಗಳ ವಿಭಜನೆಗೆ ಶಿಫಾರಸು
- ದಕ್ಷಿಣ-ಉತ್ತರ ಪ್ರಾತಿನಿಧ್ಯ ಈಗಿರುವಷ್ಟೆ ಉಳಿಸಿಕೊಳ್ಳಲು ಪ್ರಧಾನಿ ಸಲಹಾ ಮಂಡಳಿ ವರದಿ
59 ಕ್ಷೇತ್ರ 2 ಭಾಗವಾಗಿ ವಿಂಗಡಣೆ
111 ಕ್ಷೇತ್ರ 3 ಭಾಗವಾಗಿ ವಿಂಗಡಣೆ
ಹೊಸ ಸೂತ್ರದನ್ವಯ ರಾಜ್ಯಗಳ ಕ್ಷೇತ್ರ
ದಕ್ಷಿಣದ ರಾಜ್ಯಗಳು
ರಾಜ್ಯ ಹಾಲಿ ಪ್ರಸ್ತಾಪಿತ
ತಮಿಳುನಾಡು 39 59
ಕರ್ನಾಟಕ 28 42
ಆಂಧ್ರಪ್ರದೇಶ 25 38
ಕೇರಳ 20 30
ತೆಲಂಗಾಣ 17 26
ಇತರೆ ಪ್ರಮುಖ ರಾಜ್ಯಗಳು
ರಾಜ್ಯ ಹಾಲಿ ಪ್ರಸ್ತಾಪಿತ
ಉತ್ತರಪ್ರದೇಶ 80 120
ಮಹಾರಾಷ್ಟ್ರ 48 72
ಬಿಹಾರ 40 60
ಮಧ್ಯಪ್ರದೇಶ 29 44
ಗುಜರಾತ್ 26 39
ರಾಜಸ್ಥಾನ 25 38
==
ಲೋಕಸಭೆಯಲ್ಲಿ ಪ್ರಾತಿನಿಧ್ಯ
ವಲಯ ಹಾಲಿ ಪ್ರಸ್ತಾಪಿತ
ದಕ್ಷಿಣ ಶೇ.23.6 ಶೇ.23.7
ಉತ್ತರ-ಪಶ್ಚಿಮ ಶೇ.45.2 ಶೇ.45.6
ಹೊಸ ಸೂತ್ರ ಏನು?
- ಲೋಕಸಭಾ ಕ್ಷೇತ್ರಗಳನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸುವ ಬದಲು ನಿರ್ದಿಷ್ಟ ಕ್ಷೇತ್ರಗಳ ಮರುವಿಂಗಡಣೆ
- ಹೆಚ್ಚು ಮತದಾರರಿರುವ 170 ಲೋಕಸಭಾ ಕ್ಷೇತ್ರಗಳನ್ನಷ್ಟೇ 2 ಅಥವಾ 3 ಭಾಗವಾಗಿ ವಿಂಗಡಣೆಯ ಉದ್ದೇಶ
- 170ರ ಪೈಕಿ 59 ಕ್ಷೇತ್ರಗಳನ್ನು 2 ಭಾಗ ಹಾಗೂ 111 ಕ್ಷೇತ್ರಗಳನ್ನು 3 ಭಾಗ ಮಾಡಿ ಹೊಸ ಕ್ಷೇತ್ರಗಳನ್ನು ರಚಿಸಬೇಕು
- ಹೀಗೆ ಮಾಡಿದರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543ರಿಂದ 824ಕ್ಕೆ ಹೆಚ್ಚಿಸಲು ಸಾಧ್ಯ: ಪ್ರಧಾನಿ ಸಲಹಾ ಮಂಡಳಿ
- ಇದರಿಂದ ಉತ್ತರ ಹಾಗೂ ದಕ್ಷಿಣ ಪ್ರಾತಿನಿಧ್ಯದಲ್ಲಿ ಭಾರಿ ವ್ಯತ್ಯಾಸವೇನೂ ಆಗುವುದಿಲ್ಲ ಎಂದು ಮಂಡಳಿಯ ವರದಿ
ಈವರೆಗೆ ಏನಿತ್ತು?
- ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಏಕರೂಪವಾಗಿ 50% ಏರಿಸಲು ಸರ್ಕಾರದ ಪ್ರಸ್ತಾಪ
- ಈ ನಡೆಯಿಂದ ಹಾಲಿ ಇರುವ 543 ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗರಿಷ್ಠ 850ಕ್ಕೇರಿಸಲು ಉದ್ದೇಶ
- ಇದರಿಂದ ಎಲ್ಲ ರಾಜ್ಯಗಳ ಲೋಕಸಭಾ ಕ್ಷೇತ್ರ ಈಗಿರುವುದಕ್ಕಿಂತ 50% ಏರಿಕೆಗೆ ಅವಕಾಶ
- ಆದರೆ ರಾಜ್ಯಗಳ ಪ್ರಾತಿನಿಧ್ಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ದಕ್ಷಿಣ ರಾಜ್ಯಗಳಿಂದ ತೀವ್ರ ವಿರೋಧ
