ಕುಮಾರಸ್ವಾಮಿ ಅವರು ಮಾತನಾಡುವಾಗ ವಿವೇಚನೆಯಿಂದ ಮಾತನಾಡಬೇಕು. ಇಲ್ಲಿ ಯಾರೂ ದಡ್ಡರಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಸರ್ಕಾರದ ಮುಂದೆಯಾಗಲೀ ಅಥವಾ ಜಿಲ್ಲಾಡಳಿತದ ಮುಂದೆಯಾಗಲಿ ಒಂದೇ ಒಂದು ಪ್ರಸ್ತಾವನೆಯನ್ನು ಇಟ್ಟಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ನಾನು ಮಳವಳ್ಳಿ ಕ್ಷೇತ್ರದಲ್ಲಿ 400 ರಿಂದ 500 ಎಕರೆ ಜಾಗ ಕೊಡುವುದಕ್ಕೆ ನಾನು ಸಿದ್ಧನಿದ್ದೇನೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.ಕುಮಾರಸ್ವಾಮಿ ಅವರು ಮಾತನಾಡುವಾಗ ವಿವೇಚನೆಯಿಂದ ಮಾತನಾಡಬೇಕು. ಇಲ್ಲಿ ಯಾರೂ ದಡ್ಡರಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಸರ್ಕಾರದ ಮುಂದೆಯಾಗಲೀ ಅಥವಾ ಜಿಲ್ಲಾಡಳಿತದ ಮುಂದೆಯಾಗಲಿ ಒಂದೇ ಒಂದು ಪ್ರಸ್ತಾವನೆಯನ್ನು ಇಟ್ಟಿಲ್ಲ. ನಿರ್ದಿಷ್ಟವಾಗಿ ಈ ಕೈಗಾರಿಕೆಯನ್ನು ತರುತ್ತೇನೆಂದು ಹೇಳಿಲ್ಲ. ರಾಜ್ಯಸರ್ಕಾರ ಜಾಗ ಕೊಡುತ್ತಿಲ್ಲ, ಸಹಕಾರ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಕೈಗಾರಿಕೆಯನ್ನು ಜಿಲ್ಲೆಗೆ ತರಲಾಗದಿರುವ ತಮ್ಮ ದೌರ್ಬಲ್ಯವನ್ನು ಸರ್ಕಾರವನ್ನು ಟೀಕಿಸುವ ಮೂಲಕ ತೋರ್ಪಡಿಸುತ್ತಿದ್ದಾರೆ ಎಂದು ಮೂದಲಿಸಿದರು.
ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಹಣ ಪಾವತಿಯಲ್ಲಿ ಸರ್ಕಾರ ಮೊದಲ ಸ್ಥಾನದಲ್ಲಿದ್ದರೂ ಕೇಂದ್ರ ನೀಡಬೇಕಾದ ಹಣದಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಜ್ಯಸರ್ಕಾರದ ಬೇಡಿಕೆಗಳಿಗೆ ಮನ್ನಣೆ ನೀಡದೆ ಕಿರುಕುಳ ನೀಡುತ್ತಿದೆ. ಕೇಂದ್ರಸರ್ಕಾರ ಶಿಕ್ಷಣ ವ್ಯವಸ್ಥೆಗೆ ನೀಡಬೇಕಾದ ಹಣವನ್ನೂ ನೀಡದೆ ವಂಚಿಸುತ್ತಿದೆ. ಕೇಂದ್ರದ ಸಹಕಾರದಿಂದ ಶೈಕ್ಷಣಿಕವಾಗಿ ಎಷ್ಟು ಉನ್ನತ ಸಂಸ್ಥೆಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ನಮ್ಮ ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.ಡಿ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಜಾಸೌಧಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. ಇದೇ ಸಮಯದಲ್ಲಿ ಸಾಧ್ಯವಾದರೆ ತಾಲೂಕು ಪತ್ರಕರ್ತರ ಸಂಘಕ್ಕೆ ಸರ್ಕಾರದಿಂದ ಮಂಜೂರಾಗಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗುವುದು. ನೀರಾವರಿಗೆ 800 ಕೋಟಿ ರು. ನೀಡಿರುವ ಸಿಎಂ ಅವರಿಂದ ಮಳವಳ್ಳಿಯಲ್ಲಿ ಮುಂದೆ ಬೃಹತ್ ಕಾರ್ಯಕ್ರಮ ಆಯೋಜಿಸಿ ಹನಿ ಮತ್ತು ತುಂತುರು ನೀರಾವರಿ ಯೋಜನೆಗೆ ಚಾಲನೆ ನೀಡುವುದಾಗಿ ಹೇಳಿದರು.