ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆರೋಪಿಗಳಿಗೆ ಇಬ್ಬರು ಸಚಿವರು ತಮ್ಮ ಪಿಎ ಕಡೆಯಿಂದ ಫೋನ್ ಮಾಡಿಸಿದ್ದಾರೆ. ಈ ಕುರಿತ ದಾಖಲೆ ನನ್ನ ಬಳಿ ಇದೆ. ಶೀಘ್ರದಲ್ಲೇ ಈ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ

ಮಾಗಡಿ : ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆರೋಪಿಗಳಿಗೆ ಇಬ್ಬರು ಸಚಿವರು ತಮ್ಮ ಪಿಎ ಕಡೆಯಿಂದ ಫೋನ್ ಮಾಡಿಸಿದ್ದಾರೆ. ಈ ಕುರಿತ ದಾಖಲೆ ನನ್ನ ಬಳಿ ಇದೆ. ಶೀಘ್ರದಲ್ಲೇ ಈ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಈಗಾಗಲೇ ಒಂದು ವಿಕೆಟ್‌ ಬೀಳಿಸಿದ್ದೇವೆ. ಮುಂದೆ ಸರ್ಕಾರದ ಇನ್ನೆರಡು ವಿಕೆಟ್ ಬೀಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಕೆಪಿಎಸ್ಸಿ ಹಗರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರ ಸ್ವರೂಪ

ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯ ಬಿ.ಕೆ.ರಸ್ತೆಯಲ್ಲಿ ನಿರ್ಮಿಸಲಾದ ನೂತನ ಬಿಜೆಪಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಕೆಪಿಎಸ್ಸಿ ಹಗರಣ ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳಲಿದ್ದು, ಸರ್ಕಾರದ ಪ್ರಭಾವಿ ನಾಯಕರ ಬಣ್ಣ ಬಯಲಾಗಲಿದೆ. ಕೆಪಿಎಸ್‌ಸಿ ಅಕ್ರಮ ಕೇವಲ ಸಣ್ಣಪುಟ್ಟ ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಸರ್ಕಾರದ ದೊಡ್ಡ, ದೊಡ್ಡ ತಿಮಿಂಗಿಲಗಳು ಸಿಕ್ಕಿಹಾಕಿಕೊಳ್ಳುತ್ತವೆ ಎಂದರು.

ಸರ್ಕಾರದ ಇಬ್ಬರು ಸಚಿವರ ಆಪ್ತ ಸಹಾಯಕರು (ಪಿಎ) ಸಂಪರ್ಕದಲ್ಲಿ

ಈ ಹಗರಣ ಸಂಬಂಧ ಜೈಲು ಸೇರಿರುವ ಆರೋಪಿಗಳೊಂದಿಗೆ ಸರ್ಕಾರದ ಇಬ್ಬರು ಸಚಿವರ ಆಪ್ತ ಸಹಾಯಕರು (ಪಿಎ) ಸಂಪರ್ಕದಲ್ಲಿದ್ದಾರೆ. ಇಬ್ಬರು ಸಚಿವರ ಪಿಎಗಳು ಫೋನ್ ಮಾಡಿ ಅವರ ಜೊತೆ ಮಾತನಾಡಿರೋದು ಗೊತ್ತಾಗಿದೆ. ಈ ಬಗ್ಗೆ ದಾಖಲೆ ಸಂಗ್ರಹಿಸಿದ್ದೇನೆ. ಕುಮಾರಸ್ವಾಮಿಗೆ 10 ದಿನ ಟೈಂ ಕೊಟ್ಟಿದ್ದೀರಿ. ನನಗೂ ಸ್ವಲ್ಪ ಟೈಂ ಕೊಡಿ, ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ. ಇದರಿಂದ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿ ಆಗುತ್ತೆ ಅಂತ ನಾನು ಹೇಳಲ್ಲ. ಆದರೆ, ಒಂದು ಮಾತು ಸತ್ಯ. ಈಗಾಗಲೇ ಒಂದು ವಿಕೆಟ್‌ ಬೀಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದ ಇನ್ನೆರಡು ವಿಕೆಟ್ ಗಳು ಬೀಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಜಾಣತನದಿಂದ ಎಸ್ಕೇಪ್ ಆಗಿದ್ದಾರೆ. ಇಲ್ಲದೇ ಹೋಗಿದ್ದರೆ ಅವರ ವಿಕೆಟ್ ಕೂಡ ಇದೇ ಹಗರಣದಲ್ಲಿ ಬೀಳುವ ಸಂದರ್ಭವಿತ್ತು. ನಾವು ಕೇವಲ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ, ಪಕ್ಕಾ ಪಿಚ್ ರೆಡಿ ಇಟ್ಟುಕೊಂಡು ಕಾಯುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಚೆಂಡು ಬೌಂಡರಿ ದಾಟಲಿದೆ. ಈ ಬೃಹತ್ ಕೆಪಿಎಸ್‌ಸಿ ಹಗರಣದ ಪಾಪದ ಚೀಲದಿಂದ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಶೈಲಿಯಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಹಗರಣದಲ್ಲಿ ಬಿಜೆಪಿ ನಾಯಕರ ಪಾತ್ರದ ಬಗ್ಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಈ ಹಗರಣದಲ್ಲಿ ಬಿಜೆಪಿ ನಾಯಕರ ಹಸ್ತಕ್ಷೇಪ ಅಥವಾ ಭಾಗಿಯಾಗುವಿಕೆ ಇದ್ದರೆ, ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆಯಲ್ಲ? ನಿಮ್ಮ ಕೈಯಲ್ಲೇ ಎಸ್‌ಐಟಿ ಮತ್ತು ಸಿಐಡಿ ಮುಂತಾದ ತನಿಖಾ ಸಂಸ್ಥೆಗಳಿವೆ. ತಕ್ಷಣವೇ ತನಿಖೆ ಮಾಡಿಸಿ, ತಪ್ಪಿತಸ್ಥರನ್ನು ಬಂಧಿಸಿ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಿರುಗೇಟು ನೀಡಿದರು.