ಸಾರಾಂಶ
ಬೆಂಗಳೂರು : ಸಂವಿಧಾನ ಬದ್ಧವಾಗಿ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆ (ಜಾತಿ ಆಧಾರಿತ ಜನಗಣತಿ) ಮತ್ತು ಆ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬೆಂಬಲವಾಗಿ ನಿಲ್ಲಲು ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.
ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಜಾತಿ ಆಧಾರಿತ ಜನಗಣತಿಯ ಮಹತ್ವ ಮತ್ತು ಅದಕ್ಕೆ ಎದುರಾಗುತ್ತಿರುವ ವಿರೋಧ, ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ವೇಳೆ, ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರು ವಾರದಲ್ಲಿ ಒಂದು ದಿನ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು, ಹಿಂದುಳಿದ ವರ್ಗದ ಪ್ರತಿನಿಧಿಗಳನ್ನು ಭೇಟಿಯಾಗಿ ಅವರ ಆಶೋತ್ತರ, ಸಮಸ್ಯೆಗಳನ್ನು ಕೇಳಿ ಅವರಿಗೆ ಧ್ವನಿಯಾಗಬೇಕು. ಅದರ ಜತೆಗೆ ಜಾತಿ ಆಧಾರಿತ ಜನಗಣತಿಗೆ ಆದೇಶಿಸಿ, ಅನುಷ್ಠಾನಗೊಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಬೆನ್ನಹಿಂದೆ ನಾವೆಲ್ಲರೂ ಇರಬೇಕು. ಜತೆಗೆ, ಸಮೀಕ್ಷೆಗೆ ಎದುರಾಗುವ ವಿರೋಧಗಳನ್ನು ನಾವು ವಿರೋಧಿಸಿ ಬೆಂಬಲವಾಗಿ ಕೆಲಸ ಮಾಡಬೇಕು ಎಂದು ನಿರ್ಣಯಿಸಲಾಯಿತು.
ಸಭೆ ನಂತರ ಮಾತನಾಡಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎನ್.ಎಸ್. ಬೋಸರಾಜು, ಸಂವಿಧಾನ ಬದ್ಧವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಅದನ್ನು ಮಾಡುತ್ತಿರುವ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವಾಗಿ ನಿಲ್ಲಲು ಹಿಂದುಳಿದ ವರ್ಗಗಳ ಮುಖಂಡರು ನಿರ್ಧರಿಸಿದ್ದಾರೆ. ಸಚಿವರು, ಪಕ್ಷದ ಶಾಸಕರು ಮತ್ತು ಹಿಂದುಳಿದ ವರ್ಗಗಳ ಮುಖಂಡರು ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು. ಅಲ್ಲದೆ, ಸಮೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ಜನರು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಐತಿಹಾಸಿಕ ಸಭೆ ನಡೆಸಲಾಗಿದೆ. ಹಿಂದುಳಿದ ವರ್ಗದ ಸಚಿವರು, ಶಾಸಕರು, ಮುಖಂಡರು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಸರಿಯಾದ ಮೀಸಲಾತಿ ಸಿಗಬೇಕು. ಸಾಮಾಜಿಕ, ಶೈಕ್ಷಣಿ, ಆರ್ಥಿಕ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಅದನ್ನು ವಿರೋಧಿಸುವ ಕೆಲಸ ಯಾರೂ ಮಾಡಬಾರದು. ಈ ಹಿಂದೆ ಮೀಸಲಾತಿಗೆ ಸಂಬಂಧಿಸಿದಂತೆ ಕೇಲ್ಕರ್ ಆಯೋಗ, ಮಂಡಲ ಆಯೋಗ ಮಾಡಿದಾಗಲೂ ವಿರೋದ ಎದುರಾಗಿತ್ತು. ಆದರೂ, ಆಗಿನ ಕಾಂಗ್ರೆಸ್ ಸರ್ಕಾರ ಮಂಡಲ ಆಯೋಗ ವರದಿ ಜಾರಿ ಮಾಡಿತು. ಅದರಿಂದ ಕೇಂದ್ರ ಸೇವೆಗಳಲ್ಲಿ ಮೀಸಲಾತಿ ಸಿಗುವಂತಾಯಿತು ಎಂದು ಹೇಳಿದರು.
ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಮಾನತೆಯ ಕಾಳಜಿ ಹೊಂದಿದ್ದು, ತುಳಿಯಲ್ಪಟ್ಟವರನ್ನು ಮೇಲೆತ್ತುವ ಕೆಲಸ ಮಾಡಲು ಹೊರಟಿದ್ದಾರೆ. ಹಿಂದೆ ಸಿಎಂ ಆಗಿದ್ದಾಗ ಕಾಂತರಾಜ ಆಯೋಗದ ಮೂಲಕ ಸಮೀಕ್ಷೆ ನಡೆಸಿದ್ದರು. ಅದಕ್ಕೂ ವಿರೋಧ ಮಾಡಲಾಯಿತು. ಈಗಲೂ ಸಮೀಕ್ಷೆಗೆ ವಿರೋಧ ವ್ಯಕ್ತವಾಗುತ್ತಿದೆ. ಅದಕ್ಕಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪರವಾಗಿ ನಾವೆಲ್ಲ ಇರಬೇಕು ಎಂದು ನಿರ್ಧರಿಸಲಾಗಿದೆ. ಅದರೊಂದಿಗೆ ಪ್ರತಿ ಜಿಲ್ಲೆಯಲ್ಲೂ ಜಾಗೃತಿ ಕೆಲಸ ಮಾಡಬೇಕಿದೆ. ಹಾಗೆಯೇ, ಸಮೀಕ್ಷೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಯೋಗವನ್ನು ಭೇಟಿ ಮಾಡಿ ಬೆಂಬಲ ಸೂಚಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಜಾತಿ ಆಧಾರಿತ ಜನಗಣತಿ ಮತ್ತು ಮೀಸಲಾತಿ ಕುರಿತಂತೆ ಚುನಾವಣೆ ಪೂರ್ವದ ಪ್ರಣಾಳಿಕೆಯಲ್ಲಿಯೇ ನಾವು ತಿಳಿಸಿದ್ದೆವು. ಜನರಿಗೆ ಆಶ್ವಾಸನೆ ನೀಡಿದಂತೆ ನಾವು ಇದೀಗ ಸಮೀಕ್ಷೆ ಮಾಡುತ್ತಿದ್ದೇವೆ. ಅಹಿಂದ ವರ್ಗದವರಿಗೆ ಶಕ್ತಿ ತುಂಬಲು ಮತ್ತು ಮೀಸಲಾತಿ ವಿರುದ್ಧ ಇರುವವರಿಗೆ ತಿಳಿ ಹೇಳಲು ಈ ಕಾರ್ಯ ಮಾಡಲಾಗುತ್ತಿದೆ. ಬಡವರಿಗೆ ಅನುಕೂಲವಾಗುತ್ತದೆ ಎಂದರೆ ಬಿಜೆಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತದೆ. ಆದರೂ, ನಾವೆಲ್ಲ ಒಂದಾಗಿ ಸಮೀಕ್ಷೆಯ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ಸಚಿವರಾದ ಸಂತೋಷ್ ಲಾಡ್, ಬಿ.ಎ.ಸುರೇಶ್, ಮಂಕಾಳ ವೈದ್ಯ, ಮಧು ಬಂಗಾರಪ್ಪ ಇದ್ದರು.