ರಾಜ್ಯಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆಗಳಿಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಶನಿವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಬಹುತೇಕ ಶನಿವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.

ಬೆಂಗಳೂರು : ರಾಜ್ಯಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆಗಳಿಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಶನಿವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಬಹುತೇಕ ಶನಿವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ತಪ್ಪಿದರೆ ಭಾನುವಾರ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಪಟ್ಟಿ ಮಾತ್ರ ಇನ್ನೂ ಬಿಡುಗಡೆಯಾಗದೆ ಕುತೂಹಲ

ಇತರ ರಾಜ್ಯಗಳಲ್ಲಿ ನಡೆಯಲಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ತಿನ ಚುನಾವಣೆಗಳಿಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದರೂ ಕರ್ನಾಟಕದ ಪಟ್ಟಿ ಮಾತ್ರ ಇನ್ನೂ ಬಿಡುಗಡೆಯಾಗದೆ ಕುತೂಹಲ ಮೂಡಿಸಿದೆ. ರಾಜ್ಯಸಭೆಯ ಒಂದು ಸ್ಥಾನ ಮತ್ತು ಪರಿಷತ್ತಿನ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.

ನಿರ್ಧಾರ ಕೈಗೊಳ್ಳುವುದು ವಿಳಂಬ

ರಾಜ್ಯಸಭೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷವಾಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಯ್ಕೆಗೆ ಬೆಂಬಲ ನೀಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಒಮ್ಮತಾಭಿಪ್ರಾಯ ಮೂಡದೇ ಇದ್ದುದರಿಂದ ನಿರ್ಧಾರ ಕೈಗೊಳ್ಳುವುದು ವಿಳಂಬವಾಗುತ್ತಿದೆ. ಈ ನಡುವೆ ಮಾಜಿ ಸಂಸದೆ ಸುಮಲತಾ ಅಂಬರೀಷ್‌, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪುದುಚೇರಿ ಉಸ್ತುವಾರಿ ನಿರ್ಮಲ್‌ಕುಮಾರ್ ಸುರಾನಾ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ.

ಇನ್ನು ಪರಿಷತ್ತಿನ ಎರಡು ಸ್ಥಾನಗಳಿಗೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‌, ಎನ್‌.ಮಹೇಶ್‌, ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ಶಿಸ್ತು ಸಮಿತಿ ಮಾಜಿ ಅಧ್ಯಕ್ಷ ಲಿಂಗರಾಜ್ ಪಾಟೀಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ನಟಿ ಶ್ರುತಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮತ್ತಿತರ ಹೆಸರುಗಳು ಕೇಳಿಬಂದಿವೆ.