ವೈಫಲ್ಯ ಮುಚ್ಚಲು ಸಂಘದ ಮೇಲೆ ನಿರ್ಬಂಧ: ಸೂಲಿಬೆಲೆ

| N/A | Published : Oct 24 2025, 12:51 PM IST

Chakravarthi Sulibele Face to Face Interview

ಸಾರಾಂಶ

ಚಿತ್ತಾಪುರದ ಪಥ ಸಂಚಲನ ಸಂಘರ್ಷಕ್ಕೆ ಕಾರಣವಾಗುತ್ತಾ ಎಂಬ ಹಲವು ಪ್ರಶ್ನೆಗಳಿಗೆ ಚಿಂತಕ, ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ.

 ಚಕ್ರವರ್ತಿ ಸೂಲಿಬೆಲೆ,

ಚಿಂತಕ, ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಎಂ.ಆರ್‌.ಚಂದ್ರಮೌಳಿ ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ದೇಶಾದ್ಯಂತ ಸಂಘದ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಸಂಘದ ಚಟುವಟಿಕೆಗೆ ನಿರ್ಬಂಧ ವಿಧಿಸಿರುವುದು, ಸಂಘದ ಪಥಸಂಚಲನದಲ್ಲಿ ಭಾಗಿಯಾದ ನೌಕರರನ್ನು ಅಮಾನತು ಮಾಡಿರುವುದು, ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ನಿರಾಕರಣೆ ಮಾಡಿರುವ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಈ ನಡೆಗೆ ಕಾರಣವೇನು, ಸಂಘ ಯಾಕೆ ನೋಂದಣಿಯಾಗಿಲ್ಲ, ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಬೋಧನೆ ಮಾಡಲಾಗುತ್ತಿದೆಯೇ, ಚಿತ್ತಾಪುರದ ಪಥ ಸಂಚಲನ ಸಂಘರ್ಷಕ್ಕೆ ಕಾರಣವಾಗುತ್ತಾ ಎಂಬ ಹಲವು ಪ್ರಶ್ನೆಗಳಿಗೆ ಚಿಂತಕ, ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ. *ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಿದೆ. ಸಂಘದ ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ ನೌಕರರನ್ನು ಅಮಾನತು ಮಾಡಿದೆ, ಸಂಘದ ವಿರುದ್ಧ ಕಾಂಗ್ರೆಸ್‌ ಮುಖಂಡರು ಏಕಾಏಕಿ ಪ್ರಬಲವಾಗಿ ಆರೋಪ, ಟೀಕೆಗಳನ್ನು ಮಾಡುತ್ತಿದ್ದಾರೆ.  

ನಿಮ್ಮ ದೃಷ್ಟಿಯಲ್ಲಿ ಇದರ ಹಿಂದಿನ ಉದ್ದೇಶವೇನು?

ರಾಜ್ಯ ಸರ್ಕಾರದಲ್ಲಿ ಸಿಕ್ಕಾಪಟ್ಟೆ ವೈಫಲ್ಯಗಳಿವೆ. ಪ್ರಮುಖವಾಗಿ ಪಂಚ ಗ್ಯಾರಂಟಿ ಕಾರ್ಯಕ್ರಮ ಸಂಪೂರ್ಣವಾಗಿ ವಿಫಲವಾಗಿದೆ. ಈ ಗ್ಯಾರಂಟಿ ಸಲುವಾಗಿ ಸಾಲ ಮಾಡಿಕೊಂಡ ಪರಿಣಾಮ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇಡೀ ರಾಜ್ಯ ಒಂದು ರೀತಿಯಲ್ಲಿ ಅಸ್ತವ್ಯಸ್ತಗೊಂಡಿದೆ. ತಾವು ಮಾಡಲಾಗದ ಕೆಲಸಗಳನ್ನು ಮುಚ್ಚಿಟ್ಟುಕೊಳ್ಳಲು ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಅನಿಸುತ್ತದೆ. 40 ಪರ್ಸೆಂಟ್‌ ತೆಗೆದುಕೊಳ್ಳುತ್ತಾರೆ ಎಂದು ಆರೋಪ ಮಾಡಿ ಬಿಜೆಪಿಯನ್ನು ಕೆಳಗಿಳಿಸಲು ಗುರಾಣಿಯನ್ನಾಗಿ ಮಾಡಿಕೊಂಡ ಗುತ್ತಿಗೆದಾರರೇ ಈಗ ನಮಗೆ 80 ಪರ್ಸೆಂಟ್‌ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ, ಕೋಮು ಗಲಭೆ ಅವ್ಯಾಹತವಾಗಿ ನಡೆಯಲು ವ್ಯವಸ್ಥಿತವಾಗಿ ಪ್ರಯತ್ನ ನಡೆಯುತ್ತಿದೆ. ಇವೆಲ್ಲವನ್ನು ಮುಚ್ಚಿಟ್ಟುಕೊಂಡು ಮೇಲಿನವರಿಗೆ ಒಳ್ಳೆಯ ವರದಿ ನೀಡಲು, ಜನರ ದಾರಿ ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ ಆರ್‌ಎಸ್‌ಎಸ್‌ ವಿರುದ್ಧ ದಾಳಿ ಮಾಡಿದರೆ ಹೈಕಮಾಂಡ್‌ ಖುಷಿ ಆಗುತ್ತದೆ ಎಂಬ ಈ ರೀತಿ ಮಾಡುತ್ತಿದ್ದಾರೆ. 

*ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಸಂಘ ಯಾಕೆ ನೋಂದಣಿಯಾಗಿಲ್ಲ, ಸಂಘದ ಕಚೇರಿ ಮೇಲೆ ಯಾಕೆ ರಾಷ್ಟ್ರಧ್ವಜ ಹಾರಿಸಿಲ್ಲ? ಸಂಘದಲ್ಲಿ ಉನ್ನತ ಹುದ್ದೆಗಳು ದಲಿತರು, ಮಹಿಳೆಯರಿಗೆ ಯಾಕೆ ನೀಡಿಲ್ಲ, ಸಾವರ್ಕರ್‌ ಅವರು ಬ್ರಿಟಿಷರ ಕ್ಷಮೆ ಕೇಳಿದರು ಇತ್ಯಾದಿ ಪ್ರಶ್ನೆ ಕೇಳುತ್ತಿದ್ದಾರಲ್ಲ?

ಸಂಘದ ಬಗೆಗಿನ ಇವರ ಜ್ಞಾನ ಎಷ್ಟು ಅಲ್ಪವಾಗಿದೆ ಎಂದು ಗೊತ್ತಾಗುತ್ತದೆ. ನಾನು ಸಾವರ್ಕರ್‌ ಅವರು ಬ್ರಿಟಿಷರ ಕ್ಷಮೆ ಯಾಕೆ ಕೇಳಿದರು, ಪಿಂಚಣಿ ಯಾಕೆ ತೆಗೆದುಕೊಂಡರು ಎಂಬ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಆದರೆ ಅದನ್ನು ಖಂಡಿತವಾಗಿ ಸಮರ್ಥಿಸಿಕೊಳ್ಳುತ್ತೇನೆ. ಆದರೆ ಸಾವರ್ಕರ್‌ ಅವರಿಗೂ ಸಂಘಕ್ಕೂ ಯಾವ ಸಂಬಂಧವೂ ಇಲ್ಲ ಎಂಬ ಕಾಮನ್‌ಸೆನ್ಸ್‌ ಇವರಿಗೆ ಇಲ್ಲ. ನೂರು ವರ್ಷಗಳ ಹಿಂದೆ ಪ್ರತಿಭಟನಾತ್ಮಕ ಸಂಗತಿಯಾಗಿ ಹುಟ್ಟಿದ್ದು ಸಂಘ. ಮುಸಲ್ಮಾನರ ತುಷ್ಟೀಕರಣದ ವಿರುದ್ಧವಾಗಿ ಹಿಂದುಗಳ ಸಂಘಟನೆಗೆ, ಹಿಂದುಗಳಿಗೆ ಹೇಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಕವಡೆ ಆಡುವ ನಾಲ್ಕಾರು ಹುಡುಗರಿಂದ ಸಂಘ ಶುರು ಮಾಡಲಾಯಿತು. 1925ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸಂಘ ರಚನೆಯಾದ ಕಾರಣ ನೋಂದಣಿ ಪ್ರಶ್ನೆ ಇರಲಿಲ್ಲ. ಇನ್ನು ಸಂಘದ ಕಚೇರಿ ಮೇಲೆ ರಾಷ್ಟ್ರಧ್ವಜ ಯಾಕೆ ಹಾರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನನ್ನ ಉತ್ತರ ಸಂಘ ವ್ಯಕ್ತಿ ನಿಷ್ಠ ಬದಲು ರಾಷ್ಟ್ರ ನಿಷ್ಠ ಸಂಘಟನೆಯಾಗಿದೆ. ಸಂಘದಲ್ಲಿ ಡಾ.ಜೀ ಮತ್ತು ಗುರೂಜಿ ಅವರ ಫೋಟೋ ಬಿಟ್ಟರೆ ಬೇರೆ ಯಾರ ಫೋಟೊ ನೋಡುವುದಿಲ್ಲ. ನಮಗೆ ‘ಧ್ವಜವೇ ಗುರು’.

*ಶಾಲಾ, ಕಾಲೇಜುಗಳಲ್ಲಿ ಸಂಘ ಧಾರ್ಮಿಕ ವಿಷಯ ಕಲಿಸುತ್ತದೆ. ಅತಾರ್ಕಿಕ, ಅವೈಜ್ಞಾನಿಕ ವಿಷಯಗಳನ್ನು ತಿಳಿಸುತ್ತದೆ ಎಂಬ ಆರೋಪವಿದೆಯಲ್ಲ?

 ಭಾವನಾತ್ಮಕ ವಿಷಯಗಳನ್ನು ಅತಾರ್ಕಿಕ ಎಂದು ಕರೆಯಬಹುದು. ಉದಾಹರಣೆಗೆ ಇವರಿಗೆ ಎಷ್ಟು ಮೂರ್ಖತನ ಇದೆ ಎಂದರೆ ಸಾವರ್ಕರ್‌ ಅವರು ಜೈಲಲ್ಲಿದ್ದಾಗ ಮೈನಾ ಹಕ್ಕಿಗೆ ನನಗೆ ಭಾರತಕ್ಕೆ ಹೊರಗೆ ಹೋಗಲು ಆಗುವುದಿಲ್ಲ. ನೀನು ಹೊರಗಡೆ ಸ್ವತಂತ್ರವಾಗಿದ್ದೀಯ, ನಿನ್ನ ಹೆಗಲ ಮೇಲೆ ಕೂತು ನನ್ನ ಭಾರತಕ್ಕೆ ಕರೆದುಕೊಂಡು ತಿರುಗಿಸಿ ಬಾ ಎಂದು ರೂಪಕವಾಗಿ ಬರೆದಿದ್ದರು. ಇದನ್ನು ಕೆಲವರು ಅತ್ಯಂತ ತುಚ್ಛವಾಗಿ ಸಾರ್ವಕರ್‌ ಅವರು ಮೈನಾ ಹಕ್ಕಿಯನ್ನು ಮಾತನಾಡಿಸುತ್ತಿದ್ದರು ಎಂದು ಸಾಹಿತ್ಯಿಕ ಭಾಷೆಯನ್ನು ಅರಿಯಲಾರದೆ ಟೀಕಿಸಿದರೆ ಏನು ಮಾಡಲು ಸಾಧ್ಯ?

ನಾಡಿನ ಜನರ ಮೂಲ ನಂಬಿಕೆ, ಸತ್ವಗಳು ಯಾವುವು ಇವೆಯೋ ಅವು ಹೇಗೆ ಧಾರ್ಮಿಕ ಸಂಗತಿ ಅನಿಸಿಕೊಳ್ಳುತ್ತದೆ. ಮುಸಲ್ಮಾನರು ಅಲ್ಲಾಹು ಬಿಟ್ಟು ಬೇರೆಯವರನ್ನು ಒಪ್ಪಿಕೊಳ್ಳಲ್ಲ. ಹಾಗಂತ ಭೂಮಿಯನ್ನು ತಾಯಿ ಎಂದು ಕರೆಯುವುದು ಹಿಂದು ಧರ್ಮಕ್ಕೆ ಸಂಬಂಧಪಟ್ಟ ಸಂಗತಿ ಎಂದರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಶಾಲೆಗಳಲ್ಲಿ ಸರಸ್ವತಿ ಪೂಜೆ ಮಾಡುತ್ತೇವೆ, ಆಯುಧ ಪೂಜೆ ದಿನ ಸರ್ಕಾರಿ ಕಚೇರಿಗಳಲ್ಲಿ ಪೂಜೆ, ಸರ್ಕಾರಿ ವಾಹನಗಳ ಪೂಜೆ ನಡೆಯುತ್ತದೆ. ವಿಧಾನಸೌಧ ಆವರಣ, ಬಿಬಿಎಂಪಿ ಆವರಣದಲ್ಲಿ ದೇವಸ್ಥಾನ ಇದೆ, ಆಯುಧ ಪೂಜೆ ವೇಳೆ ಪತ್ರಿಕೆಗಳ ಮುದ್ರಣಾಲಯಗಳಲ್ಲಿ ಆಯುಧ ಪೂಜೆ ಮಾಡುವುದು ಧಾರ್ಮಿಕ ಆಚರಣೆ ಎಂದು ಕರಿತೀರೋ, ಅಥವಾ ನಂಬಿಕೆಗಳ ಆಚರಣೆ ಎಂದು ಕರಿತೀರೋ? ಇಷ್ಟು ವರ್ಷದವರೆಗೆ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಭಾರತ ಎಡಪಂಥೀಯರ ಅಡ್ಡಾ ಆಗುತ್ತದೆ ಎಂದೇ ತಿಳಿದುಕೊಂಡಿದ್ದರು. ಆದರೆ ಮೋದಿ ಅವರು ಪ್ರಧಾನಿಯಾದ ನಂತರ, ಹಿಂದುತ್ವವಾದಿ ಮುಖ್ಯಮಂತ್ರಿಗಳು ಬಂದ ನಂತರ ಸಹಿಸಿಕೊಳ್ಳಲು ಆಗದೆ, ಹೇಗಾದರೂ ಮಾಡಿ ಈ ಸರಪಣಿ ತುಂಡು ಮಾಡಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಇದರಲ್ಲಿ ಅವರಿಗೆ ಸೋಲಾಗುತ್ತದೆ. 

 *ಸಾರ್ವಜನಿಕವಾಗಿ ಕಾರ್ಯಕ್ರಮ ಮಾಡುವಾಗ ಸರ್ಕಾರದ ಅನುಮತಿ ಪಡೆಯಬೇಕು ಎಂಬ ಕಾನೂನು, ನಿಯಮ. ಆರ್‌ಎಸ್‌ಎಸ್‌ಗೆ ಅನ್ವಯವಾಗುವುದಿಲ್ಲವೇ?

ಖಂಡಿತವಾಗಿ ಆರೆಸ್ಸೆಸ್‌ ಕೂಡ ಕಾನೂನಿನಿಂದ ಹೊರತಾಗಿಲ್ಲ. ಎಲ್ಲ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಅನುಮತಿ ತೆಗೆದುಕೊಂಡೇ ಮಾಡುತ್ತೇವೆ. ಆದರೆ ಸರ್ಕಾರ ಈಗ ಅಧಿಕೃತವಾಗಿ ಹೇಳುವ ಮೂಲಕ ಪೊಲೀಸರು, ತಹಶೀಲ್ದಾರ್‌, ಜಿಲ್ಲಾಧಿಕಾರಿಗೆ ಹೇಗಾದರೂ ಮಾಡಿ ಅನುಮತಿ ವಿರೋಧಿಸಿ, ಇದು ಸರ್ಕಾರದ ನಿರ್ಣಯ ಎಂದು ಪರೋಕ್ಷವಾಗಿ ಸಂದೇಶ ನೀಡುತ್ತಿದೆ. ಪ್ರತಿ ಜಿಲ್ಲಾಧಿಕಾರಿ ಸಂಘದ ಕಾರ್ಯಕ್ರಮ ನಿಷೇಧಿಸಲು ಕಾರಣ ಹುಡುಕುತ್ತಾರೆ. ಸಂಘ ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ ಉದಾಹರಣೆಯನ್ನು ಸರ್ಕಾರ ಈಗಲೂ ತೋರಿಸಲಿ. 

*ಪಥ ಸಂಚಲನದಲ್ಲಿ ಭಾಗಿಯಾದ ಸರ್ಕಾರಿ, ಅರೆ ನೌಕರರನ್ನು ಅಮಾನತು ಮಾಡಿದ್ದಾರಲ್ಲ?

ಅನೇಕ ಕೋರ್ಟ್‌ಗಳ ಆದೇಶಗಳಲ್ಲಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂದು ಹೇಳುವುದನ್ನು ವಿರೋಧಿಸಿವೆ. ಕರ್ನಾಟಕದಲ್ಲಿ ತಂದಿರುವ ನಿಯಮಕ್ಕೂ ಮುಖಭಂಗವಾಗುತ್ತದೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಅನೇಕ ಬಾರಿ ಮುಖಭಂಗ ಆಗಿದೆ. ಚಿತ್ತಾಪುರದ ವಿಷಯದಲ್ಲಿ ಅವಮಾನ ಆಗುತ್ತದೆ. 

*ಅಮಾನತುಗೊಂಡ ಸರ್ಕಾರಿ ನೌಕರರ ಬೆಂಬಲಕ್ಕೆ ಸಂಘ ನಿಲ್ಲುತ್ತಾ?

ನಿಸ್ಸಂಶಯವಾಗಿ ಸಂಘ ಬೆಂಬಲವಾಗಿ ನಿಲ್ಲುತ್ತದೆ. ಮುಕ್ತವಾಗಿ ನಿಂತಿದ್ದೇವೆ ಎಂದು ಸರ್ಕಾರದೊಂದಿಗೆ ತೊಡೆ ತಟ್ಟಿ ನಿಲ್ಲುವಂತಹ ಜಾಯಮಾನ ಸಂಘದ್ದಲ್ಲ. ಆದರೆ ಸಂಘದ ತಂತು ಬೇರುಗಳು ರಾಜ್ಯಾದ್ಯಂತ ಹರಡಿವೆ. ಹಾಗಾಗಿ ಹಿಂದುತ್ವದ ಪರವಾಗಿ ವಾದ ಮಾಡುವ ವಕೀಲರು ಇದ್ದಾರೆ. ಅವರು ಈ ಕೇಸ್‌ ತೆಗೆದುಕೊಳ್ಳುತ್ತಾರೆ. ಅಮಾನತುಗೊಂಡವರನ್ನು ಸರ್ಕಾರ ಅತ್ಯಂತ ಗೌರವದಿಂದ ಸೇವೆಗೆ ತೆಗೆದುಕೊಳ್ಳುವ ಅದೇಶ ಸದ್ಯದಲ್ಲಿ ನಿರೀಕ್ಷಿಸುತ್ತಿದ್ದೇವೆ. 

*ಸಂಘದ ಟೀಕೆ ರಾಷ್ಟ್ರಮಟ್ಟದಲ್ಲೂ ನಡೆಯುತ್ತಿದೆ, ಮುಂಬರುವ ಬಿಹಾರ ಚುನಾವಣೆ ಅಥವಾ ಕರ್ನಾಟಕದಲ್ಲಿ ನಡೆಯುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಈ ರೀತಿ ಕ್ರಮ ಕೈಗೊಳ್ಳುತ್ತಿದೆಯೇ?

ಈ ವಿಷಯದಲ್ಲಿ ಅವರಿಗೆ ಬೂಮರಾಂಗ್‌ ಆಗುತ್ತದೆ. ಈ ಹಿಂದೆ ಸಂಘ ನಿಷೇಧಿಸಲು ಪ್ರಯತ್ನಿಸಿದಾಗಲೂ ಸಂಘ ವ್ಯಾಪಕವಾಗಿ ಬೆಳೆದಿದೆ. ಕರ್ನಾಟಕದಲ್ಲಿ ತಡೆ ಒಡ್ಡುತ್ತಿರುವುದು ಸಂಘದ ವಿರಾಟ್‌ ಸ್ವರೂಪಕ್ಕೆ ಅವಕಾಶ ಮಾಡಿಕೊಡುತ್ತದೆ ಅಷ್ಟೇ. ರಾಜ್ಯದಲ್ಲಿ ಸಂಘಕ್ಕೆ ಕೊಡುತ್ತಿರುವ ತೊಂದರೆ ಗಮನಿಸಿ ಬಿಹಾರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುವ ಸಾಮಾನ್ಯ ಹಿಂದು ಸಹ ಆ ಪಕ್ಷದ ವಿರೋಧಿಯಾಗುತ್ತಾನೆ. ಬಿಹಾರದ ಫಲಿತಾಂಶದ ನಂತರ ಪ್ರಿಯಾಂಕ್‌ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷ ಛೀಮಾರಿ ಹಾಕುವ ಪ್ರಸಂಗ ಬರುತ್ತದೆ.

 *ಸಂಘದ ಬಗ್ಗೆ ಇಷ್ಟೆಲ್ಲಾ ಟೀಕೆ, ಆರೋಪ ಮಾಡುತ್ತಿದ್ದರೂ ಹಿಂದೂ ಮುಖಂಡರು, ಮಠಾಧೀಶರ ಮೌನ ಯಾಕೆ?

ಸಂಘಕ್ಕೆ ಮಠಾಧೀಶರು, ಮುಖಂಡರೇ ಶಕ್ತಿ, ಹಾಗಿರುವಾಗ ಸಂಘ ತೀರಾ ಅಸಹಾಯಕತೆಯಿಂದ ತನ್ನಿಂದ ಏನೂ ಆಗುತ್ತಿಲ್ಲ ಎಂದಾಗ ನಾವೆಲ್ಲ ಬೀದಿಗೆ ಬರುತ್ತೇವೆ ಎಂದು ಹೊರ ಬರಬಹುದು. ಸಂಘಕ್ಕೇ ಇದರ ವಿರುದ್ಧ ಹೋರಾಡುವ ಶಕ್ತಿ ಇದೆ. ಪಥ ಸಂಚಲನಕ್ಕೆ ನಿರ್ಬಂಧ ಹೇರಿದ ನಂತರ ಸಂಘದ ಗಣವೇಷದ ಮಾರಾಟದ ಸಂಖ್ಯೆ ನೀವು ಊಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಬೆಳೆದಿದೆ. ಬಹುಶಃ ಯಾಕೆ ತಡೆದನೋ ಎಂದು ಪ್ರಿಯಾಂಕ್‌ ಖರ್ಗೆಗೆ ಗಾಬರಿಯಾಗಬೇಕು, ತಮ್ಮ ಬಗ್ಗೆ ತಾವೇ ನಾಚಿಕೆ ಪಡುವ ರೀತಿಯಲ್ಲಿ ಸಂಘದ ಶಕ್ತಿ ಪ್ರದರ್ಶನ ಆಗುತ್ತದೆ.

 *ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಗಣೇಶ ಮೆರವಣಿಗೆಯಲ್ಲಿ ಡಿಜೆ ಹಾಕುವುದು, ಮದ್ಯ ಸೇವಿಸಿ ಮಸೀದಿ, ಚರ್ಚ್‌ ಮುಂದೆ ಡ್ಯಾನ್ಸ್‌ ಮಾಡುವುದು ಧರ್ಮವೇ ಎಂದು ಪ್ರಶ್ನಿಸಿದ್ದಾರೆ.

ಸರಿ, ಅದಕ್ಕೆ ಪರಿಹಾರವೇನು. ಗಣೇಶ ಮೆರವಣಿಗೆ ನಿಷೇಧ ಮಾಡುವುದು ಪರಿಹಾರವೇ? ಹಿಂದಿನ ಮನಮೋಹನ ಸಿಂಗ್‌ ಉರುಳಿ ಬಿದ್ದಿದ್ದೇ ಭ್ರಷ್ಟಾಚಾರದ ಕೂಪದಿಂದ. ಹೀಗಾಗಿ ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸ್ಸನ್ನೂ ಮುಚ್ಚಿಬಿಡಿ ಎಂದು ಹೇಳುತ್ತೇನೆ. ಗಣೇಶಮೂರ್ತಿ ಮೆರವಣಿಗೆಯಲ್ಲಿ 10 ಸಾವಿರ ಜನರ ಪೈಕಿ 150 ಜನ ಕುಡಿದು ಬಂದು ಡ್ಯಾನ್ಸ್‌ ಮಾಡುತ್ತಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಉಳಿದ ಜನ ಗಣೇಶ ಉತ್ಸವಕ್ಕೆ ಬಂದಿರುತ್ತಾರೆ. ಇವರನ್ನು ನೋಡುವ ಬದಲು 150 ಜನರನ್ನು ನೋಡುತ್ತೀರಿ ಎಂದರೆ ನಿಮ್ಮ ದೃಷ್ಟಿ ಎಷ್ಟು ಕೆಟ್ಟು ಹೋಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ಮುಳುಗಿ ಹೋಗಿದೆ. ಆದ್ದರಿಂದ ಯಾಕೆ ಕರ್ನಾಟಕದಲ್ಲಿ ಕಾಂಗ್ರೆಸ್‌ನ್ನು ವಿಸರ್ಜಿಸಬಾರದು ಎಂದು ನಾನು ಕೇಳುತ್ತೇನೆ. 

*ಚಿತ್ತಾಪುರದ ಪಥಸಂಚಲನ ಒಂದು ರೀತಿಯ ಸಂಘರ್ಷಕ್ಕೆ ಕಾರಣವಾಗುವಂತಿದೆಯಲ್ಲ?

ಖಂಡಿತಾ ಇಲ್ಲ, ಸಂಘದಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ. ಸಂಘ ಜಾತಿ ಹೆಸರಿನಲ್ಲಿ ನಮ್ಮನ್ನು ವಿಭಜಿಸಿಲ್ಲ. ಚಿತ್ತಾಪುರದಲ್ಲಿ ನ.2ರಂದು ನಡೆಯುವ ಪಥಸಂಚಲನ ತಡೆಯಬೇಕು ಅಥವಾ ಗೊಂದಲ ಮಾಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ಸಿಗೆ ಸಂಬಂಧಪಟ್ಟ ಒಂದಷ್ಟು ಜನರನ್ನು ಮುಂದಕ್ಕೆ ಬಿಡುವ ಪ್ರಯತ್ನ ಮಾಡುತ್ತಿದ್ದಾರೆ. ಗಲಾಟೆ ಮಾಡಿಸುವ ಪ್ರಯತ್ನ ಮಾಡಿಸುತ್ತಾರೆ. ಆದರೆ ಚಾಮರಾಜನಗರಿಂದ ಬೀದರ್‌ವರೆಗೆ ಬರುವವರನ್ನು ಜನ ಸ್ವಾಗತಿಸುತ್ತಾರೆ. ಪಥಸಂಚಲನಕ್ಕೆ ಹೂ ಎರಚುವ ಕೆಲಸ ಮಾಡುತ್ತಾರೆ.

Read more Articles on