ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರವು ವಿಧಾನಮಂಡಲದಲ್ಲಿ ಅಂಗೀಕರಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಪಕ್ಷ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ದೂರು ನೀಡಿದೆ.
ಬುಧವಾರ ರಾಜಭವನಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಶಾಸಕರ ನಿಯೋಗವು ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯು ಅಸಾಂವಿಧಾನಿಕ ಮತ್ತು ಹಾನಿಕಾರಕ ಪರಿಣಾಮಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಕಾಯ್ದೆಯನ್ನು ಮರುಪರಿಶೀಲನೆ ನಡೆಸಿ ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿಹಿಡಿಯಲು ಸರ್ಕಾರಕ್ಕೆ ಸಲಹೆ ನೀಡಬೇಕು. ಜನಪ್ರತಿನಿಧಿಗಳು ಮತದಾನದ ಹಕ್ಕುಗಳನ್ನು ಉಳಿಸಿಕೊಳ್ಳುವ ಮತ್ತು ಆಡಳಿತವು ವಿಕೇಂದ್ರೀಕೃತವಾಗಿರುವುದನ್ನು ರಾಜ್ಯಪಾಲರು ಖಚಿತಪಡಿಸಿಕೊಳ್ಳಬೇಕು. ಅನಗತ್ಯ ಅಧಿಕಾರಶಾಹಿಯನ್ನು ತಡೆಹಿಡಿಯಬೇಕು. ಹೆಚ್ಚುವರಿ ನಿಗಮಗಳು ಮತ್ತು ಸಮಿತಿಗಳು ತೆರಿಗೆದಾರರಿಗೆ ಹೊರೆಯಾಗುತ್ತವೆ. ಅಲ್ಲದೇ, ಬೆಂಗಳೂರಿನ ಬೆಳವಣಿಗೆಗೆ ಅಡ್ಡಿಯಾಗುತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರಿನ ಸಾಂಸ್ಕೃತಿಕತೆಯನ್ನು ಕಾಪಾಡಬೇಕಾಗಿದೆ. ಆಡಳಿತ ಸುಧಾರಣೆಗಳು ಕನ್ನಡಿಗನ ಅಸ್ಮಿತೆ, ಸಂಪ್ರದಾಯಗಳು ಮತ್ತು ಭಾಷಾ ಪ್ರಾತಿನಿಧ್ಯವನ್ನು ದುರ್ಬಲಗೊಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಸಮಾನ ಹಣಕಾಸು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಒಂದೇ ಆಡಳಿತ ಮಂಡಳಿಯ ಅಡಿಯಲ್ಲಿ ಏಳು ಪಾಲಿಕೆಗಳನ್ನು ರಚಿಸಲು ಸರ್ಕಾರ ಮುಂದಾಗಿದೆ. ಇದು 74 ನೇ ಸಾಂವಿಧಾನಿಕ ತಿದ್ದುಪಡಿಯ ಉಲ್ಲಂಘನೆಯಾಗಿದೆ. ಕಾಯ್ದೆಯು ಪಾಲಿಕೆಯನ್ನು ಏಳು ವಿಭಜನೆಯನ್ನಾಗಿ ವಿಂಗಡಿಸುವುದರಿಂದ ಆಡಳಿತವನ್ನು ಸುಗಮಗೊಳಿಸುವ ಬದಲು ಅಧಿಕಾರಶಾಹಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಬೆಂಗಳೂರಿನ ಅಭಿವೃದ್ಧಿಯನ್ನು ಮಂದಗತಿಯಲ್ಲಿ ಕೊಂಡೊಯ್ಯಲಿದೆ. ಬೆಂಗಳೂರಿನ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಐತಿಹಾಸಿಕ ಗುರುತನ್ನು ಕಾಯ್ದೆಯು ನಾಶಪಡಿಸುತ್ತದೆ. ಕನ್ನಡಿಗರ ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕನ್ನಡಿಗರನ್ನು ಮತ್ತಷ್ಟು ಕಡೆಗಣಿಸಿದಂತಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಪಾಲಿಕೆಗಳನ್ನು ವಿಭಜಿಸಿ ವಿಫಲವಾಗಿದೆ. ಅಲ್ಲಿ ಆಡಳಿತದ ಅಸಮರ್ಥತೆಗಳು ವೈಫಲ್ಯತೆ ಸಾಕ್ಷಿಯಾಗಿವೆ. ಆದರೂ ರಾಜ್ಯ ಸರ್ಕಾರವು ದೋಷಪೂರಿತ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಇದು ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗುವುದರ ಜತೆಗೆ ಆಡಳಿತದ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಕಾಯ್ದೆಯ ಬಗ್ಗೆ ಸ್ಪಷ್ಟೀಕರಣ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.