ದಲಿತರ ಹಣ ಬೇರೆಡೆಗೆ ವರ್ಗಾಯಿಸಿಲ್ಲ - ಆ ರೀತಿ ಮಾಡಿದ್ದು ಬಿಜೆಪಿ : ಸಿಎಂ ಸಿದ್ದರಾಮಯ್ಯ

| N/A | Published : Mar 18 2025, 10:14 AM IST

Karnataka Chief Minister Siddaramaiah (File Photo/ANI)

ಸಾರಾಂಶ

‘ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ, ನಾವು ಎಸ್ಸಿಪಿ-ಟಿಎಸ್‌ಪಿ ಅನುದಾನ ಬೇರೆಡೆ ವರ್ಗಾವಣೆ ಮಾಡಿಲ್ಲ. ಎಸ್ಸಿಪಿ-ಟಿಎಸ್‌ಪಿ ಕಾಯಿದೆ ತಂದು ಎಸ್ಸಿ-ಎಸ್ಟಿಗೆ ಬಿಜೆಪಿಗಿಂತ ಆರು ಪಟ್ಟು ಹೆಚ್ಚು ಅನುದಾನ ನೀಡಿದ್ದೇನೆ.

ವಿಧಾನಸಭೆ : ‘ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ, ನಾವು ಎಸ್ಸಿಪಿ-ಟಿಎಸ್‌ಪಿ ಅನುದಾನ ಬೇರೆಡೆ ವರ್ಗಾವಣೆ ಮಾಡಿಲ್ಲ. ಎಸ್ಸಿಪಿ-ಟಿಎಸ್‌ಪಿ ಕಾಯಿದೆ ತಂದು ಎಸ್ಸಿ-ಎಸ್ಟಿಗೆ ಬಿಜೆಪಿಗಿಂತ ಆರು ಪಟ್ಟು ಹೆಚ್ಚು ಅನುದಾನ ನೀಡಿದ್ದೇನೆ. 

ಬಿಜೆಪಿ ಅವಧಿಯಲ್ಲಿ (2019-23) ನಾಲ್ಕೂ ವರ್ಷ ಎಸ್ಸಿಪಿ-ಟಿಎಸ್‌ಪಿ ಹಣ ಬೇರೆಡೆ ವರ್ಗಾವಣೆ ಮಾಡಿದ್ದೀರಿ. ಅದನ್ನು ತಡೆಯಲು ಎಸ್‌ಸಿಪಿ-ಟಿಎಸ್‌ಪಿ ಕಾಯಿದೆಯ 7-ಡಿ ಕಿತ್ತೊಗೆದಿದ್ದೇನೆ. ಹೀಗಿದ್ದರೂ ನಮ್ಮ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ?’

ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ‘ನಿಮಗೆ ಬದ್ಧತೆಯಿದ್ದರೆ ಕೇಂದ್ರದಲ್ಲೂ ನಮ್ಮ ರೀತಿಯಲ್ಲೇ ಎಸ್ಸಿಪಿ-ಟಿಎಸ್‌ಪಿ ಕಾಯಿದೆ ಜಾರಿ ಮಾಡಲು ಒತ್ತಾಯಿಸಿ ಸದನದಲ್ಲಿ ನಿರ್ಣಯ ಮಾಡಿ ಕಳಿಸೋಣ ಒಪ್ಪಿಗೆ ಸೂಚಿಸಿ’ ಎಂದು ಸವಾಲು ಹಾಕಿದರು.

ದಲಿತರಿಗೆ ದೇಶದಲ್ಲೇ ಮೊದಲ ಬಾರಿಗೆ ಬಡ್ತಿ ಮೀಸಲಾತಿ ತಂದಿದ್ದೇವೆ. ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಾವು, 7-ಡಿ ರದ್ದು ಮಾಡಿದ್ದು ನಾವು. ಹೀಗಿರುವಾಗ ದಲಿತರ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು.

ರಾಜ್ಯಪಾಲರ ಭಾಷಣದ ಬಗ್ಗೆ ಉತ್ತರಿಸುತ್ತಾ ಎಸ್ಸಿಪಿ-ಟಿಎಸ್‌ಪಿ ಹಣ ವರ್ಗಾವಣೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ 5 ವರ್ಷದಲ್ಲಿ (2008-13) ಎಸ್ಸಿ-ಎಸ್ಟಿಗೆ ಕೇವಲ 29,454 ಕೋಟಿ ರು. ನೀಡಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ದೇಶದ ಎರಡನೇ ರಾಜ್ಯವಾಗಿ ಎಸ್ಸಿಪಿ-ಟಿಎಸ್ಪಿ ಕಾಯಿದೆ ರೂಪಿಸಿದೆವು. ಎಸ್ಸಿ-ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಶೇ.24.1 ಹಣ ಮೀಸಲಿಟ್ಟು ಅದೇ ವರ್ಷ ಬಳಕೆ ಮಾಡಬೇಕು. ಬಳಕೆಯಾಗದಿದ್ದರೆ ಮುಂದಿನ ವರ್ಷಕ್ಕೆ ಅನುದಾನ ಮುಂದುವರೆಸಬೇಕು ಎಂಬ ಕಾಯಿದೆ ತಂದೆವು. ಇದರಿಂದ ನಮ್ಮ ಅವಧಿಯ 5 ವರ್ಷದಲ್ಲಿ (2013-18) ಬರೋಬ್ಬರಿ 1.80 ಲಕ್ಷ ಕೋಟಿ ರು. ಅನುದಾನ ನೀಡಿದ್ದೇವೆ. ಇದು ದಲಿತರ ಪರ ನಮ್ಮ ಬದ್ಧತೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿಯಿಂದ ದಲಿತರ ನಿರ್ಲಕ್ಷ್ಯ:

ಕಳೆದ ವರ್ಷವೂ (2024-25) ರಾಜ್ಯ ಸರ್ಕಾರ 3.71 ಲಕ್ಷ ಕೋಟಿ ರು. ಬಜೆಟ್‌ನಲ್ಲಿ ಶೇ.7.46 ರಷ್ಟು ಎಂದರೆ 39121 ಕೋಟಿ ರು. ಹಣ ಎಸ್ಸಿಪಿ-ಟಿಎಸ್ಪಿಗೆ ಮೀಸಲಿಟ್ಟಿತ್ತು. ಈ ವರ್ಷವೂ 42018 ಕೋಟಿ ರು. ಮೀಸಲಿಟ್ಟಿದ್ದೇವೆ. ಆದರೆ ಗುಜರಾತ್‌ನಲ್ಲಿ 3.70 ಲಕ್ಷ ಕೋಟಿ ರು. ಬಜೆಟ್‌ನಲ್ಲಿ ಎಸ್ಸಿಪಿ-ಟಿಎಸ್‌ಪಿಗೆ ಶೇ.2.38, ಮಹಾರಾಷ್ಟ್ರ 6.12 ಲಕ್ಷ ಕೋಟಿ ರು. ಬಜೆಟ್‌ನಲ್ಲಿ ಕೇವಲ 18,765 (ಶೇ.3.6), ಕೇಂದ್ರ ಸರ್ಕಾರ 48.20 ಲಕ್ಷ ಕೋಟಿ ರು. ಬಜೆಟ್‌ನಲ್ಲಿ ಕೇವಲ 1,38,368 ಕೋಟಿ ರು. ಅಂದರೆ ಶೇ. 2.87 ರಷ್ಟು ಹಣ ಮಾತ್ರ ಮೀಸಲಿಟ್ಟಿದೆ. ಕೇಂದ್ರ ಸರ್ಕಾರಕ್ಕೆ ಹಾಗೂ ಬಿಜೆಪಿಗೆ ಬದ್ಧತೆಯಿದ್ದರೆ ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಜಾರಿ ಮಾಡಲಿ. ಈ ಬಗ್ಗೆ ಸರ್ವಾನುಮತದ ನಿರ್ಣಯ ಮಾಡೋಣ ಎಂದು ಸವಾಲು ಹಾಕಿದರು.

7-ಡಿ ನೀವು ಯಾಕೆ ತೆಗೆದಿಲ್ಲ?:

2019-23 ಸಾಲಿನಲ್ಲಿ ನಾಲ್ಕು ವರ್ಷ ಅಧಿಕಾರದಲ್ಲಿದ್ದ ನೀವು 4 ವರ್ಷವೂ ಎಸ್ಸಿಪಿ-ಟಿಎಸ್‌ಪಿ ಹಣ ಬೇರೆಡೆ ವರ್ಗಾವಣೆ ಮಾಡಿದ್ದೀರಿ. ಎಸ್ಸಿಪಿ-ಟಿಎಸ್‌ಪಿ ಕಾಯ್ದೆಯಡಿ ಡೀಮ್ಡ್‌ ವೆಚ್ಚ ಮಾಡಲು ಅವಕಾಶವಿದ್ದ 7-ಡಿ ನಿಯಮ ಯಾಕೆ ರದ್ದು ಮಾಡಲಿಲ್ಲ? ನಾವು 2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಒಂದೇ ವರ್ಷದಲ್ಲೇ 7-ಡಿ ರದ್ದು ಮಾಡಿದ್ದೇವೆ. ದಲಿತರಿಗೆ ಮೀಸಲಿಟ್ಟ ಹಣ ದಲಿತರಿಗೆ ಮಾತ್ರ ಸಿಗಬೇಕು ಎಂದು 7-ಡಿ ರದ್ದುಪಡಿಸಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಗ್ಯಾರಂಟಿಗಳಿಗೆ ಹಣ ಬಳಕೆ ವಿಚಾರ- ವಾಗ್ವಾದ:

ಈ ವೇಳೆ ಬಿಜೆಪಿ ಸದಸ್ಯ ಸುನಿಲ್‌ಕುಮಾರ್, ಎಸ್ಸಿಪಿ-ಟಿಎಸ್‌ಪಿ ಕಾಯಿದೆ ತಂದಿದ್ದು ನೀವೇ. ಅದರ ಶ್ರೇಯ ನಿಮಗೇ ಸಲ್ಲಬೇಕು. ಆದರೆ, ಪರಿಷತ್‌ನಲ್ಲಿ ನಿಮ್ಮದೇ ಸಚಿವರು ಉತ್ತರಿಸುವಾಗ ಎಸ್ಸಿಪಿ-ಟಿಎಸ್‌ಪಿ ಹಣ ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಗೆ ಬಳಕೆ ಮಾಡಿರುವುದಾಗಿ ಹೇಳಿದ್ದೀರಿ. 7-ಸಿ ಅಡಿ ನಾಲ್ಕು ಇಲಾಖೆಗಳ ಫಲಾನುಭವಿಗಳಿಗೆ ವಿನಿಯೋಗಿಸಲು ಮಾತ್ರ ಅವಕಾಶವಿದೆ. ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿಯ ಫಲಾನುಭವಿಗಳಲ್ಲಿ ಎಸ್ಸಿ-ಎಸ್ಟಿ ಫಲಾನುಭವಿಗಳು ಎಷ್ಟು ಎಂಬುದನ್ನು ಎಂಬುದರ ಬಗ್ಗೆ ದಾಖಲೆ ನೀಡಿ ಎಂದು ಒತ್ತಾಯಿಸಿದರು.

ಈ ವೇಳೆ ಕೆಲ ಕಾಲ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಕ್ತಿ ಯೋಜನೆಯಡಿ ಬಸ್ಸು ಹತ್ತುವ ಮಹಿಳೆಯರಿಗೆ ನೀವು ಯಾವ ಜಾತಿಯವರು ಎಂದು ಕೇಳಲು ಆಗುತ್ತದೆಯೇ? ಒಟ್ಟು ಜನಸಂಖ್ಯೆಯಲ್ಲಿನ ಎಸ್ಸಿ-ಎಸ್ಟಿ ಪ್ರಮಾಣದ ಮೇರೆಗೆ ಹಣ ವಿನಿಯೋಗ ಆಗಿರುತ್ತದೆ. ಇದರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ನಾವು ಎಸ್ಸಿಪಿ-ಟಿಎಸ್‌ಪಿ ಹಣ ದಲಿತರಿಗೆ ಹೊರತಾಗಿ ಬೇರೆ ಯಾವ ಉದ್ದೇಶಕ್ಕೂ ಬಳಸಿಲ್ಲ. ಬಜೆಟ್‌ ಚರ್ಚೆಗೆ ಉತ್ತರಿಸುವ ವೇಳೆ ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದು ಹೇಳಿದರು.ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಎಸ್ಸಿಪಿ-ಟಿಎಸ್‌ಪಿ ಕಾಯಿದೆಯ ನಿಯಮ ಸೆಕ್ಷನ್‌ 7 ಸಿ ಅಡಿ ಸರ್ಕಾರದ ಸಾರ್ವತ್ರಿಕ ಯೋಜನೆಗೆ ಎಸ್ಸಿ/ಎಸ್ಟಿ ಹಣ ನೀಡಲು ಅವಕಾಶ ಇದೆ ಎಂದು ಸಮರ್ಥಿಸಿದರು. ಇದಕ್ಕೆ ಬಿಜೆಪಿ ಸದಸ್ಯರು, ಹಾಗಾದರೆ ಹಣ ವರ್ಗಾವಣೆ ಮಾಡಿರುವುದು ಒಪ್ಪಿದಂತಾಯಿತಲ್ಲ? ಎಂದು ಪ್ರಶ್ನಿಸಿದರು. ಈ ವೇಳೆ ಮತ್ತೆ ಕೆಲ ಕಾಲ ಗದ್ದಲ ಸೃಷ್ಟಿಯಾಯಿತು.

ಹಣವಿಲ್ಲದಿದ್ದರೂ ಬೊಮ್ಮಾಯಿಯಿಂದ 1.66 ಲಕ್ಷ ಕೋಟಿ ಮಂಜೂರು: ಸಿಎಂ

ನಿಮಗೆ ನಮ್ಮ ಮೇಲೆ ಪ್ರೀತಿ ಇದೆ. ಆದರೆ ಅನುದಾನ ನೀಡುತ್ತಿಲ್ಲ ಎಂಬ ಬಿಜೆಪಿ ಸದಸ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಹಣ ಇಲ್ಲದಿದ್ದರೂ 1.66 ಲಕ್ಷ ಕೋಟಿ ರು. ಅನುದಾನ ಹಂಚಿ ಹೋದರು. ಹಣ ಇಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಹೋದರೆ? ಬಿಲ್‌ ಪಾವತಿಗೆ ಹಣ ಬೇಡವೇ? ದುಡ್ಡು ಇಲ್ಲದೆ ಕೆಲಸಗಳನ್ನು ಮಂಜೂರು ಮಾಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.