ಸಾರಾಂಶ
‘ಕೇವಲ ಎರಡೇ ವರ್ಷದಲ್ಲಿ ಸುಮಾರು ಎರಡು ಲಕ್ಷ ಕೋಟಿ ರು. ಸಾಲದ ಹೊರೆಯನ್ನು ಜನತೆಗೆ ನೀಡಿ, ಈ ಬಾರಿಯ ಬಜೆಟ್‌ನಲ್ಲಿ ಪುನಃ ಎಷ್ಟು ಸಾಲ ಮಾಡಲಿದ್ದೀರಿ ಎಂಬ ಆತಂಕದಲ್ಲಿ ರಾಜ್ಯದ ಜನ ತೆರೆದ ಕಣ್ಣುಗಳಿಂದ ತಾವು ಮಂಡಲಿಸಲಿರುವ ಬಜೆಟ್ ಅನ್ನು ಎದುರು ನೋಡುತ್ತಿದ್ದಾರೆ’ ಬಿ.ವೈ.ವಿಜಯೇಂದ್ರ
ಬೆಂಗಳೂರು : ‘ಕೇವಲ ಎರಡೇ ವರ್ಷದಲ್ಲಿ ಸುಮಾರು ಎರಡು ಲಕ್ಷ ಕೋಟಿ ರು. ಸಾಲದ ಹೊರೆಯನ್ನು ಜನತೆಗೆ ನೀಡಿ, ಈ ಬಾರಿಯ ಬಜೆಟ್‌ನಲ್ಲಿ ಪುನಃ ಎಷ್ಟು ಸಾಲ ಮಾಡಲಿದ್ದೀರಿ ಎಂಬ ಆತಂಕದಲ್ಲಿ ರಾಜ್ಯದ ಜನ ತೆರೆದ ಕಣ್ಣುಗಳಿಂದ ತಾವು ಮಂಡಲಿಸಲಿರುವ ಬಜೆಟ್ ಅನ್ನು ಎದುರು ನೋಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಮುಂದಿನ ಬಜೆಟ್ ಅನ್ನು ತಾವು ಮಂಡಿಸುತ್ತೀರೋ ಅಥವಾ ಇಲ್ಲವೋ ಗೊತ್ತಿಲ್ಲ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.
ವಿಜಯೇಂದ್ರ ಅವರು ಸೋಮವಾರ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಬಹಿರಂಗ ಪತ್ರವೊಂದನ್ನು ಬರೆದಿದ್ದು, ಅದರ ಪತ್ರದ ಪೂರ್ಣಪಾಠ ಹೀಗಿದೆ:
ಮಾನ್ಯ ಮುಖ್ಯಮಂತ್ರಿಗಳೇ,
ಮೊದಲಿಗೆ ತಾವು 16ನೇ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿರುವಾಗ ನಿಮಗೆ ಶುಭಹಾರೈಕೆಗಳು. ಇದೇ ವೇಳೆ ತಾವು ಮಂಡಿಸಲಿರುವ ಬಜೆಟ್‌ನಲ್ಲಿ ಆರ್ಥಿಕ ವಿವೇಕ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಕಲ್ಯಾಣದ ಪ್ರದರ್ಶನವಾಗಲಿ ಎಂದು ಆಶಿಸುತ್ತೇನೆ. ಮುಂದಿನ ಬಜೆಟ್ ಅನ್ನು ತಾವು ಮಂಡಿಸುತ್ತೀರೋ ಅಥವಾ ಇಲ್ಲವೋ ಗೊತ್ತಿಲ್ಲ! ಹಾಗಿರುವಾಗ ರಾಜ್ಯದ ಜನರ ನಿರ್ಣಾಯಕ ಅಗತ್ಯಗಳನ್ನು ಪೂರೈಸುವ ಜೊತೆಗೆ ರಾಜ್ಯದ ಆರ್ಥಿಕ ಸ್ಥಿರತೆ ಬಲಪಡಿಸಲು ನಿಮಗೆ ಇದೊಂದು ಸದಾವಕಾಶ ಎಂದು ನಾನು ಭಾವಿಸುತ್ತೇನೆ.
- ಯಾವುದೇ ರಾಜ್ಯದ ಆರ್ಥಿಕತೆಯು ಬಂಡವಾಳ ವೆಚ್ಚವನ್ನು ಅವಲಂಬಿಸಿರುತ್ತದೆ. ಇದು ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಹಾಗೂ ದೀರ್ಘಕಾಲೀನ ಅಭಿವೃದ್ಧಿ ಪ್ರೇರೇಪಿಸುತ್ತದೆ. ಸರ್ಕಾರವು ತನ್ನ ಹಣಕಾಸಿನ ಬದ್ಧತೆಗಳನ್ನು ಪೂರೈಸಲು ಸಾಲಗಳನ್ನು ತೆಗೆದುಕೊಳ್ಳಬೇಕು ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೆ. ಆದರೆ ಅಂಥ ಸಾಲಗಳನ್ನು ಬಂಡವಾಳ ಹೂಡಿಕೆಗಳ ಕಡೆಗೆ ನಿರ್ದೇಶಿಸಬೇಕೇ ಹೊರತು ರಾಜಸ್ವ ವೆಚ್ಚದ ಕಡೆಗೆ ಅಲ್ಲ. ರಾಜಸ್ವ ವೆಚ್ಚದ ಕಡೆಗೆ ಬಂಡವಾಳ ಹೂಡಿಕೆ ಹರಿಸಿದರೆ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿವೇಕಯುತ ಹಣಕಾಸು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದರಿಂದ ಕರ್ನಾಟಕದ ಆರ್ಥಿಕ ಭವಿಷ್ಯ ರಕ್ಷಣೆಯಾಗುತ್ತದೆ ಮತ್ತು ಸಮರ್ಥನೀಯವಲ್ಲದ ಸಾಲದ ಹೊರೆ ತಡೆಯುತ್ತದೆ.
- ಆದರೆ ಕಳೆದ ಎರಡು ವರ್ಷಗಳ ತಮ್ಮ ಆಯವ್ಯಯದಲ್ಲಿ ರಾಜಸ್ವ ಕೊರತೆಯ ಬಜೆಟ್‌ನ್ನು ನಿರಂತರವಾಗಿ ಮಂಡಿಸುವುದರೊಂದಿಗೆ ತಾವೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಆರ್ಥಿಕ ಶಿಸ್ತು ಹೊಣೆಗಾರಿಕೆ ಅಧಿನಿಯಮವನ್ನು ತಾವೇ ಉಲ್ಲಂಘಿಸಿದ್ದೀರಿ ಎಂದು ನಾನು ವಿಧಿಯಿಲ್ಲದೆ ಹೇಳಲೇಬೆಕಾದ ಅನಿವಾರ್ಯತೆಯನ್ನು ರಾಜ್ಯದ ಜನತೆ ಮುಂದೆ ತಾವೇ ಸೃಷ್ಟಿಸಿರುತ್ತೀರಿ.
- ಕಾಂಗ್ರೆಸ್ ಪಕ್ಷವು ಚುನಾವಣಾ ಸಂದರ್ಭದಲ್ಲಿ ಮತ ಸೆಳೆಯುವುದಕ್ಕಾಗಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೇರಿದೆ. ಆದರೆ ಗ್ಯಾರಂಟಿಗಳು ಖಚಿತ ಹಾಗೂ ನಿಶ್ಚಿತವಾಗಿ ಪ್ರತಿ ತಿಂಗಳು ಫಲಾನುಭವುಗಳಿಗೆ ತಲುಪುತ್ತಿಲ್ಲ. ಆದುದರಿಂದ ತಾವು ನುಡಿದಂತೆ ನಡೆದುಕೊಳ್ಳುವಲ್ಲಿ ಈಗಾಗಲೇ ವಿಫಲರಾಗಿದ್ದೀರಿ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಈ ಸಮುದಾಯಗಳಿಗೆ ಆದಾಯದ ಮೂಲ ಸೃಷ್ಟಿಸುವ ಕಾರ್ಯಕ್ರಮಗಳಾದ ಭೂ ಒಡೆತನ, ಗಂಗಾ ಕಲ್ಯಾಣ, ಉದ್ಯಮಶೀಲತೆ ಹಾಗೂ ನೇರ ಸಾಲಗಳಂಥ ಆರ್ಥಿಕವಾಗಿ ಚೇತರಿಕೆ ನೀಡಬಲ್ಲಂಥ ಎಲ್ಲಾ ಯೋಜನೆಗಳ ಭೌತಿಕ ಗುರಿಗಳನ್ನು ನೆಲಕಚ್ಚಿಸಿದ್ದೀರಿ. ತಮ್ಮ ಆಡಳಿತದ 2 ವರ್ಷಗಳ ಅವಧಿಯ 2023-24 ಮತ್ತು 2024-25ರ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ರೂಪಿಸಲಾದ ಯೋಜನೆಯಲ್ಲಿ ಕ್ರಮವಾಗಿ 11,144 ಕೋಟಿ ರು. ಹಾಗೂ 14,282 ಕೋಟಿ ರು. ಸೇರಿ ಒಟ್ಟು 25,426 ಕೋಟಿ ರು. ಅನ್ನು ಕಾನೂನು ಬಾಹಿರವಾಗಿ ಅನ್ಯ ಯೋಜನೆಗಳಿಗೆ ಬಳಸಿದ್ದಾಗಿ ತಾವೇ ಒಪ್ಪಿಕೊಂಡಿದ್ದೀರಿ. ಈ ವಿಷಯ ತಪ್ಪೆಂದು ಅನಿಸಿದರೂ ಸಂದರ್ಭದ ಒತ್ತಡದಿಂದ ತಾವು ಸಮರ್ಥಿಸಿಕೊಂಡಿದ್ದೀರಿ.
- ಪ್ರಗತಿ ನಿಜವಾಗಿಯೂ ಅರ್ಥಪೂರ್ಣವಾಗಿರಬೇಕಾದರೆ ದೂರದೃಷ್ಟಿಯುಳ್ಳ ಯೋಜನೆಗಳು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳನ್ನು ಒಳಗೊಳ್ಳಬೇಕು. ಈ ಹಂಚಿಕೆಗಳು ದುರುಪಯೋಗವಾಗದಂತೆ ಹಾಗೂ ಬೇರೆ ಉದ್ದೇಶಗಳಿಗೆ ವರ್ಗಾವಣೆಯಾಗದೆ ಉದ್ದೇಶಿತ ಫಲಾನುಭವಿಗಳನ್ನು ತಲುಪುವಂತೆ ಸರ್ಕಾರ ನೋಡಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಬೇಕೆಂಬ ಧ್ಯೇಯೋದ್ದೇಶದ ಪಕ್ಷ ನಮ್ಮದು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನ ಮುಖವಾಡ ಇದರಿಂದ ಕಳಚಿಬಿದ್ದಿದೆ.
- ಇತ್ತೀಚೆಗೆ ರಾಜ್ಯದ ಇಂಧನ ಸಚಿವರು ನೀಡಿದ ಹೇಳಿಕೆಯತ್ತ ಗಮನ ಸೆಳೆದರೆ ಲೋಕೋಪಯೋಗಿ, ನೀರಾವರಿ ಹಾಗೂ ಕಂದಾಯ ಸೇರಿ ವಿವಿಧ ಇಲಾಖೆಗಳು ಸುಮಾರು 6 ಸಾವಿರ ಕೋಟಿ ರು. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇದು 15 ಬಾರಿ ಬಜೆಟ್ ಮಂಡಿಸಿದ ತಮಗೆ ಶೋಭೆ ತರುತ್ತದೆಯೇ ಅಥವಾ ಕರ್ನಾಟಕವನ್ನು ಆರ್ಥಿಕವಾಗಿ ದುಸ್ಥಿತಿಗೆ ತಳ್ಳುವ ಅನಿವಾರ್ಯತೆ ಬಂದೊದಗಿದೆಯೇ?
- ಕರ್ನಾಟಕವು ಸಂಪೂರ್ಣ ದಿವಾಳಿ ಆಗುವ ಕಡೆ ಮುನ್ನಡೆದಿದೆ ಎಂದು ಸೂಕ್ಷ್ಮವಾಗಿ ತಮಗೆ ತಿಳಿಯಬಯಸುತ್ತೇನೆ. ಸರ್ಕಾರಿ ನೌಕರರಿಗೆ ನಿಗದಿತ ಸಮಯದಲ್ಲಿ ವೇತನ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಸಾರಿಗೆ ಇಲಾಖೆಗೆ ಸರ್ಕಾರ ನೀಡಬೇಕಾದ 7 ಸಾವಿರ ಕೋಟಿ ಬಾಕಿ ಇದೆ. ವಿದ್ಯುತ್ ಬಿಲ್ ಕಟ್ಟಲಾಗದೆ ರಾಜ್ಯದ ಎಲ್ಲಾ ಎಸ್ಕಾಂಗಳು ದಯನೀಯ ಸ್ಥಿತಿ ತಲುಪುತ್ತಿವೆ ಎಂಬ ಮಾಹಿತಿ ದೊರಕುತ್ತಿದೆ. ಈ ಕುರಿತು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲು ನಾನು ಈ ಮೂಲಕ ನಿಮ್ಮನ್ನು ಆಗ್ರಹಿಸುತ್ತೇನೆ.
- ತಮ್ಮ ಸಂಪುಟ ಸಹೋದ್ಯೋಗಿ ಶ್ರೀ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರನ್ನು ಸುಸ್ಥಿರಗೊಳಿಸಲು ಭಗವಂತನಿಂದಲೂ ಸಾಧ್ಯವಿಲ್ಲ ಎಂಬ ಹೇಳಿಕೆಯೊಂದಿಗೆ ಅಭಿವೃದ್ಧಿಯ ಶಸ್ತ್ರವನ್ನೇ ತ್ಯಾಗ ಮಾಡಿದ್ದಾರೆ. ಇನ್ನು ಬೆಂಗಳೂರಿನ ಜನತೆ ಭರವಸೆಯಿಂದ ನಿಮ್ಮ ಸರ್ಕಾರವನ್ನು ನೋಡುವುದಾದರೂ ಹೇಗೆ? ಇತ್ತೀಚೆಗೆ ಉದಯಗಿರಿಯಲ್ಲಿ ನಡೆದ ಗಲಭೆ ಪ್ರಕರಣ ಹಾಗೂ ಪೋಲಿಸರ ಮೇಲಿನ ಹಲ್ಲೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿವೆಯೇ ಎಂಬ ಸಂಶಯವನ್ನು ಜನಸಾಮಾನ್ಯರಲ್ಲಿ ಮೂಡಿಸಿವೆ. ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಶಾಸಕರೊಬ್ಬರ ಮನೆಯನ್ನು ಧ್ವಂಸ ಮಾಡುವ ಹಂತಕ್ಕೆ ತಲುಪಿದಾಗ ತಾವು ತೋರಿದ ತುಷ್ಟೀಕರಣದ ಪರಾಕಾಷ್ಠೆ ಹುಬ್ಬಳ್ಳಿ ಗಲಭೆ, ಶಿವಮೊಗ್ಗದ ರಾಗಿಗುಡ್ಡ ಗಲಭೆಯೊಂದಿಗೆ ಉದಯಗಿರಿಯನ್ನು ತಲುಪಿದೆ. ಆದರೂ ಗಲಭೆಕೋರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಲ್ಲಿ ತಮಗೆ ಯಾವುದೇ ಹಿಂಜರಿಕೆ ಕಂಡುಬರುತ್ತಿಲ್ಲ. ಈಗಲೂ ತಾವು ತುಷ್ಟೀಕರಣದ ರಾಜನೀತಿ ಕೈಬಿಡದಿದ್ದರೆ ಕೆಲವೇ ದಿನಗಳಲ್ಲಿ ಇಂತಹ ಕಬಂದಬಾಹುಗಳು ಮತ್ತಷ್ಟು ವಿಸ್ತರಿಸುತ್ತವೆ ಎಂದು ನಾನು ನಿಮ್ಮನ್ನು ಎಚ್ಚರಿಸುತ್ತೇನೆ.
- ಮಹಿಳೆಯರ ಅಸುರಕ್ಷತೆ, ಬಾಣಂತಿಯರ ಸಾವು, ರೈತರ ಆತ್ಮಹತ್ಯೆ, ಅಧಿಕಾರಿಗಳ ಮೇಲಿನ ದೌರ್ಜನ್ಯದಿಂದ ಉಂಟಾಗುತ್ತಿರುವ ಆತ್ಮಹತ್ಯೆಗಳು ಹಾಗೂ ಶೂನ್ಯ ಅಭಿವೃದ್ಧಿ ಕರ್ನಾಟಕವನ್ನು ದಶಕಗಳಷ್ಟು ಹಿಂದಕ್ಕೆ ತಳ್ಳುತ್ತಿರುವುದು ತಮ್ಮನ್ನು ಬಾಧಿಸುತ್ತಿಲ್ಲವೇ? ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ನಿಮ್ಮ ಸಂಪುಟದ ಸಹೋದ್ಯೋಗಿಗಳು ನೀಡುತ್ತಿರುವ ಉದ್ಧಟತನದ ಹೇಳಿಕೆಗಳು ನಿಮಗೆ ಮುಜುಗರವನ್ನುಂಟು ಮಾಡುತ್ತಿಲ್ಲವೇ?
- ತಮ್ಮ ಆಡಳಿತದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಮತ್ತೊಂದು ಕ್ಷೇತ್ರವೆಂದರೆ ಅದು ಶಿಕ್ಷಣ ಇಲಾಖೆ. ನಾನು ರಾಜ್ಯಾದ್ಯಂತ ಪ್ರಯಾಣಿಸುವಾಗ, ಅನೇಕ ಶಾಲೆಗಳು ಮೂಲಸೌಕರ್ಯವಿಲ್ಲದೆ ಶೋಚನೀಯ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದೇನೆ. ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸಿ ಶಿಕ್ಷಣ ಕ್ಷೇತ್ರವನ್ನು ಸದೃಡಗೊಳಿಸುವ ಬದಲು ತಮ್ಮ ನೇತೃತ್ವದ ಸರ್ಕಾರ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿದೆ ಎಂಬ ಅಂಶವೇ ಕಳವಳಕಾರಿ. ಶಾಲಾ ಮೂಲಸೌಕರ್ಯ ಸುಧಾರಿಸಲು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಿರಂತರ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಅಗತ್ಯ ಹಣಕಾಸು ಹಂಚಿಕೆ ಮಾಡುವುದರೊಂದಿಗೆ, ಈ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಬೇಕು ಹಾಗೂ ಶಿಕ್ಷಣದಲ್ಲಿ ಹೂಡಿಕೆ ಮಾಡುವುದು ಕರ್ನಾಟಕದ ಭವಿಷ್ಯದ ಹೂಡಿಕೆ ಎಂಬ ಸಿದ್ಧಾಂತವನ್ನು ಸದೃಢಗೊಳಿಸಬೇಕೆಂದು ತಮ್ಮನ್ನು ಒತ್ತಾಯಿಸುತ್ತೇನೆ.
- ಅಗತ್ಯವಿರುವ ಕಡೆ ಹೊಂದಾಣಿಕೆಯ ಅನುದಾನಗಳನ್ನು ಒದಗಿಸುವ ಮೂಲಕ ಕರ್ನಾಟಕ ಕೇಂದ್ರ ಪ್ರಾಯೋಜಿತ ಯೋಜನೆಗಳಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ರಾಷ್ಟ್ರೀಯ ಉನ್ನತ ಶಿಕ್ಷಾ ಅಭಿಯಾನ, ಜಲ ಜೀವನ್ ಮಿಷನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಸ್ಮಾರ್ಟ್ ಸಿಟೀಸ್ ಮಿಷನ್‌ನಂಥ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಗಮನಾರ್ಹ ಆರ್ಥಿಕ ಬೆಂಬಲ ನೀಡುತ್ತಿದೆ, ಆದರೆ ಅವುಗಳ ಅನುಷ್ಠಾನ ರಾಜ್ಯದ ಪಾಲಿನ ಕೊಡುಗೆ ಅವಲಂಬಿಸಿರುತ್ತದೆ. ಕರ್ನಾಟಕವು ಅಗತ್ಯ ಹಣ ಹಂಚಿಕೆ ಮಾಡಲು ವಿಫಲವಾದರೆ, ಅದು ಗಣನೀಯ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಸಹಾಯಧನ ಕಳೆದುಕೊಳ್ಳುವ ಅಪಾಯವಿದೆ. ಹೀಗಾದರೆ ಅಭಿವೃದ್ಧಿಗೆ ಇರುವ ಅವಕಾಶ ತಪ್ಪಿ ಹೋಗುತ್ತದೆ ಎಂಬುದನ್ನು ನಾನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.
- ಸಾರ್ವಜನಿಕ ಹಣಕಾಸನ್ನು ಸಂಕಷ್ಟಕ್ಕೆ ಸಿಲುಕಿಸುವ ಅಲ್ಪಾವಧಿಯ ಕ್ರಮಗಳಿಗಿಂತ ಕೌಶಲ್ಯ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸುಧಾರಿತ ಆರೋಗ್ಯ ಮೂಲಸೌಕರ್ಯದಂಥ ದೀರ್ಘಕಾಲೀನ ಕಲ್ಯಾಣ ಕ್ರಮಗಳ ಮೇಲೆ ಬಜೆಟ್ ಗಮನಹರಿಸಬೇಕು. ಹಣಕಾಸು ಸೋರಿಕೆ ತಡೆಗಟ್ಟಲು ಮತ್ತು ಸರ್ಕಾರಿ ವೆಚ್ಚ ನಿಜವಾಗಿಯೂ ಜನರಿಗೆ ಪ್ರಯೋಜನ ನೀಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪಾರದರ್ಶಕ ನಿಧಿ ಹಂಚಿಕೆ ಮತ್ತು ಪರಿಣಾಮಕಾರಿ ಮೇಲ್ವಿಚಾರಣಾ ಕಾರ್ಯವಿಧಾನಗಳು ಜಾರಿಯಲ್ಲಿರಬೇಕು.
- ಕೇವಲ ಎರಡೇ ವರ್ಷದಲ್ಲಿ ಸುಮಾರು ಎರಡು ಲಕ್ಷ ಕೋಟಿ ರು. ಸಾಲದ ಹೊರೆ ಜನತೆಗೆ ನೀಡಿ, ಈ ಬಾರಿಯ ಬಜೆಟ್‌ನಲ್ಲಿ ಪುನಃ ಎಷ್ಟು ಸಾಲ ಮಾಡಲಿದ್ದೀರಿ ಎಂಬ ಆತಂಕದಲ್ಲಿ ರಾಜ್ಯದ ಜನ ತೆರೆದ ಕಣ್ಣುಗಳಿಂದ ತಾವು ಮಂಡಲಿಸಲಿರುವ ಬಜೆಟ್ ಅನ್ನು ಎದುರು ನೋಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿದ್ದ ಕರ್ನಾಟಕವನ್ನು ನೌಕರರಿಗೆ ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ, ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗದ ದಾರುಣ ಸ್ಥಿತಿಗೆ ತಂದು ನಿಲ್ಲಿಸಿದ ಅಪಕೀರ್ತಿಗೆ ತಾವು ಗುರಿಯಾಗಬಾರದೆಂಬ ಕಿವಿ ಮಾತು ಹೇಳಲಿಚ್ಛಿಸುತ್ತೇನೆ.
- ಬಸ್ಸಿನ ಪ್ರಯಾಣ ದರವು ಶೇ.15 ರಷ್ಟು ಹೆಚ್ಚಾಗಿದೆ. ಮೆಟ್ರೋ ಪ್ರಯಾಣ ದರ ಗರಿಷ್ಠ ಏರಿಕೆಗೆ ಕೇವಲ ರಾಜ್ಯ ಸರ್ಕಾರವೇ ಕಾರಣವಾಗಿದೆ. ರಾಜ್ಯ ಸರ್ಕಾರವು ದರ ನಿಗದಿ ಆಯೋಗಕ್ಕೆ ಪತ್ರ ಬರೆಯದಿದ್ದಲ್ಲಿ ಮೆಟ್ರೋ ಬೆಲೆ ಏರಿಕೆಯ ಸಂದರ್ಭವೇ ಒದಗಿ ಬರುತ್ತಿರಲಿಲ್ಲವೆಂದು ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಚೆನ್ನೈ, ಮುಂಬೈ, ಕೋಲ್ಕತ್ತ, ದೆಹಲಿಯಲ್ಲಿ ಮೆಟ್ರೋ ದರ ಏರಿಕೆ ಆಗಿಲ್ಲ. ರಾಜ್ಯ ಸರ್ಕಾರದ ಆಗ್ರಹದಿಂದಲೇ ಇಲ್ಲಿ ಹೀಗಾಗಿದೆ.
- ತಮ್ಮ ಅವಧಿಯಲ್ಲಿ ನೀರು, ಹಾಲು, ಪೆಟ್ರೋಲ್, ವಿದ್ಯುತ್, ಆಸ್ತಿ ತೆರಿಗೆ ಸೇರಿ ಎಲ್ಲಾ ದಿನನಿತ್ಯದ ಜೀವನಕ್ಕೆ ಬೆಲೆ ಏರಿಕೆಯ ಬರೆ ಈಗಾಗಲೇ ಎಳೆದಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೇ ವರ್ಷಗಳಲ್ಲಿ ಎರಡನೇ ಬಾರಿಗೆ ಮತ್ತೆ ಹಾಲಿನ ದರ ಏರಿಸಲು, ವಿದ್ಯುತ್ ದರ ಹೆಚ್ಚಿಸಲು ನಿಮ್ಮ ಸರ್ಕಾರ ಚರ್ಚೆ ಆರಂಭಿಸಿದೆ. ಇಂಥ ಸಂದಿಗ್ಧ ಪರಿಸ್ಥಿತಿ ತಾವೇ ಸೃಷ್ಟಿಸಿದ್ದೀರಿ. ಇದನ್ನು ರಾಜ್ಯದ ಜನತೆಯ ಪರವಾಗಿ ನಾನು ಉಗ್ರವಾಗಿ ವಿರೋಧಿಸುತ್ತೇನೆ.
- ಈಗ ತಾವು ಮಂಡಿಸುತ್ತಿರುವ 16ನೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಆರ್ಥಿಕವಾಗಿ ಜವಾಬ್ದಾರಿಯುತ, ಅಭಿವೃದ್ಧಿ ಆಧಾರಿತ ಮಾರ್ಗಸೂಚಿ ಮಂಡಿಸಲು ಒಂದು ಅವಕಾಶವಿದೆ. ತಾವು ಮಂಡಿಸಲಿರುವ ಬಜೆಟ್ ಈ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ ಮತ್ತು ವಿವೇಚನಾಯುಕ್ತ ಹಣಕಾಸು ನಿರ್ವಹಣೆಗೆ ಅಡಿಪಾಯ ಹಾಕುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಮಹತ್ವದ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ವಂದನೆಗಳೊಂದಿಗೆ