ಸಾರಾಂಶ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಧೋರಣೆ ಖಂಡಿಸಿ ಸೋಮವಾರದಿಂದ ನಗರದಲ್ಲಿ ಮೂರು ದಿನ ಎಲ್ಲಾ ವಲಯ ಆಯುಕ್ತರ ಕಚೇರಿ ಮುಂದೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಲು, ವಿದ್ಯುತ್, ಆಸ್ತಿ ತೆರಿಗೆ ಮತ್ತು ಪಾರ್ಕಿಂಗ್ ಶುಲ್ಕ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಬಿಬಿಎಂಪಿ ಚುನಾವಣೆ ಮುಂದೂಡಲಾಗುತ್ತಿದ್ದು, ಈ ಬಗ್ಗೆಯೂ ಹೋರಾಟ ನಡೆಸಲಾಗುವುದು. ಅಲ್ಲದೇ, ಗ್ರೇಟರ್ ಬೆಂಗಳೂರು ವಿಧೇಯಕದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಂಗ್ರೆಸ್ ಪರ ಎನ್ನುತ್ತಾರೆ, ಸಹಿ ಹಾಕದಿದ್ದರೆ ಅದು ಬಿಜೆಪಿ ಕಚೇರಿ ಎಂಬುದಾಗಿ ಟೀಕಿಸಲಾಗುತ್ತದೆ ಎಂದು ಕಿಡಿಕಾರಿದರು.
‘ದೇಶದೊಳಗಿನ ಸ್ಲೀಪರ್ ಸೆಲ್ ಮಟ್ಟಹಾಕಬೇಕು’ :
ಪಾಕಿಸ್ತಾನಕ್ಕಿಂತ ಮೊದಲು ದೇಶದೊಳಗಿರುವ ಸ್ಲೀಪರ್ ಸೆಲ್‌ಗಳನ್ನು ಮಟ್ಟ ಹಾಕಬೇಕಿದೆ. ಅವರಿಗೆ ನೆರವು ಕೊಡುವುದು, ಜಾಮೀನು ಕೊಡಿಸುವುದು, ಕಾನೂನು ಸಹಾಯ ಮಾಡುವುದು ನಡೆಯುತ್ತಿದೆ. ಇಂತಹವರನ್ನು ಸಹ ಬಿಡಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ದೇಶದ ಯೋಧರ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಮತ್ತೆ ಇವರಿಗೆ ಯಾರ ಮೇಲೆ ನಂಬಿಕೆ ಇದೆ? ಇಡೀ ದೇಶ ಒಂದಾಗಿ ಭಯೋತ್ಪಾದಕ ದಾಳಿಯನ್ನು ಖಂಡಿಸಬೇಕು ಎಂದು ಅಶೋಕ್ ಹೇಳಿದರು.
ಜನತೆಯ ಮೇಲೆ ಕಾಂಗ್ರೆಸ್ ಸರ್ಕಾರ ಭರಪೂರ ತೆರಿಗೆಗಳನ್ನು ಹೇರಿದೆ. ಪ್ರತಿ ಮನೆಗಳಿಗೆ ಹೋಗಿ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಗುವುದು.-ಆರ್.ಅಶೋಕ್, ವಿಪಕ್ಷ ನಾಯಕ.